ಅಜಿತ್ ಪವಾರ್ ಮೃತಪಟ್ಟ ಸ್ಥಳದಲ್ಲೇ ಅಪಘಾತ
- ಬಾರಾಮತಿಯಲ್ಲಿ ಮತ್ತೊಂದು ವಿಮಾನ ಪತನ
- ಅದೃಷ್ಟವಶಾತ್ ಪೈಲಟ್ ಸುರಕ್ಷಿತ, ಹಾನಿಗೊಂಡ ವಿಮಾನ
Plane Crash: ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನ ಪತನಗೊಂಡಿದ್ದು, ಖಾಸಗಿ ತರಬೇತಿ ವಿಮಾನವೊಂದು ಭಾನುವಾರ (ಆ.09) ರನ್‌ವೇಯಲ್ಲಿ ಅಪಘಾತಕ್ಕೀಡಾಗಿದೆ. ಏಳು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ದುರ್ಮರಣ ಹೊಂದಿದರು. ಈಗ ಅದೇ ಜಾಗದಲ್ಲಿ ಮತ್ತೊಂದು ದುರ್ಘಟನೆ ನಡೆದಿರುವುದು ಆತಂಕ ಸೃಷ್ಟಿಸಿತು.
ಈ ಅಪಘಾತದಲ್ಲಿ ವಿಮಾನ ಜಖಂಗೊಂಡಿದ್ದು, ಪೈಲಟ್ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಪೆಟ್ಟು ಬಿದ್ದಿಲ್ಲ ಮತ್ತು ಫ್ಲೈಟ್ಗೆ ಬೆಂಕಿ ತಗುಲಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಮಧ್ಯಾಹ್ನ 12.30ರ ಸುಮಾರಿಗೆ ತರಬೇತಿಯ ಭಾಗವಾಗಿ ವಿಮಾನವು ರನ್‌ವೇ ಸಮೀಪ ಬರುತ್ತಿದ್ದಂತೆ ಕಂಟ್ರೋಲ್ ಸಿಗದೆ ಪತನಗೊಂಡಿತು ಎನ್ನಲಾಗಿದೆ.
ರನ್‌ವೇ 29ರ ಕೊನೆಯ ಭಾಗವನ್ನು ಪ್ರವೇಶಿಸಿದಾಗ ಈ ಅಪಘಾತ ಸಂಭವಿಸಿದೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ವಿಮಾನದಲ್ಲಿ ತಾಂತ್ರಿಕ ದೋಷವೋ ಅಥವಾ ಪೈಲಟ್ ಅವರ ಮಿಸ್ಟೇಕ್? ಎಂಬ ಸಂಗತಿ ಸದ್ಯದ ಮಟ್ಟಿಗೆ ಗೊತ್ತಾಗಿಲ್ಲ. ಏಳು ತಿಂಗಳ ಹಿಂದೆ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನವೂ ಇದೇ ಸ್ಥಳದಲ್ಲಿ ಅಪಘಾತಕ್ಕೀಡಾಗಿ ಸ್ಫೋಟಗೊಂಡಿತು. ಅಜಿತ್ ಜತೆಗೆ ಅವರ ಭದ್ರತಾ ಅಧಿಕಾರಿ, ಇಬ್ಬರು ಪೈಲಟ್‌ಗಳು ಮತ್ತು ಒಬ್ಬ ಫ್ಲೈಟ್ ಅಟೆಂಡೆಂಟ್ ದಾರುಣ ಅಂತ್ಯ ಕಂಡರು,(ಏಜೆನ್ಸೀಸ್).