ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿಗೆ 26 ಯುವತಿ ಬಲಿ
- ದೇವರ ನಾಡು ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕು ಹೆಚ್ಚಳ
- ನೇಗ್ಲೇರಿಯಾ ಫೌಲೇರಿಯಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್
- ನೆಡುಮಂಗಾಡ್ ಪುರಸಭೆ ಪಟ್ಟಣದ ಆನಂದ್ ಗ್ರಾಮದ ಯುವತಿ ದುರ್ಮರಣ
- ಶಬರಿಮಲೆ ಯಾತ್ರಿಕರಿಗೆ ಮೆದುಳು ತಿನ್ನುವ ಅಮೀಬಾ ಸೋಂಕಿನ ಎಚ್ಚರಿಕೆ ಗಂಟೆ
ತಿರುವನಂತಪುರ: ದೇವರ ನಾಡು ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ನೇಗ್ಲೇರಿಯಾ ಫೌಲೇರಿಯಿಂದ ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ( Amoebic encephalitis ) ಪ್ರಕರಣಗಳು ಕಂಡುಬರುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ಇದೀಗ ಯುವತಿಯೊಬ್ಬಳು ಇದೇ ಕಾರಣಕ್ಕೆ ಮೃತಪಟ್ಟಿರುವು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
ಮೃತಳನ್ನು ಕೆ.ವಿ.ವಿನಯಾ (26) ಎಂದು ಗುರುತಿಸಲಾಗಿದೆ. ಈಕೆ ತಿರುವನಂತಪುರ ಜಿಲ್ಲೆಯ ನೆಡುಮಂಗಾಡ್ ಪುರಸಭೆ ಪಟ್ಟಣದ ಆನಂದ್ ಗ್ರಾಮದ ನಿವಾಸಿ. ಕಳೆದ 40 ದಿನಗಳಿಂದ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಮೀಬಿಕ್ ಎನ್ಸೆಫಾಲಿಟಿಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ವಿನಯಾ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ನ.19) ರಾತ್ರಿ ಕೊನೆಯುಸಿರೆಳೆದಿದ್ದಾಳೆ.
ಜ್ವರ ಸೇರಿದಂತೆ ದೈಹಿಕ ಸಮಸ್ಯೆಗಳಿಂದಾಗಿ ವಿನಯಾ ಎರಡು ತಿಂಗಳ ಹಿಂದೆ ನೆಡುಮಂಗಾಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅನಾರೋಗ್ಯದಿಂದ ಚೇತರಿಸಿಕೊಂಡು ಮನೆಗೆ ಹಿಂದಿರುಗಿದಾಗ ಆಕೆಗೆ ಅಪಸ್ಮಾರ ರೋಗ ಬಾಧಿಸಿತು. ನಂತರ ಆಕೆಯನ್ನು ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತ ಪರೀಕ್ಷೆ ಮಾಡಿದಾಗ ಆಕೆಗೆ ಅಮೀಬಿಕ್ ಎನ್ಸೆಫಾಲಿಟಿಸ್ ಇರುವುದು ದೃಢಪಟ್ಟಿತು. ಅಂದಿನಿಂದ ಆಕೆಗೆ ವೆಂಟಿಲೇಟರ್ ಅಳವಡಿಸಲಾಗಿತ್ತು.
ಸೋಂಕಿನ ಮೂಲ ಅಂದರೆ, ಸೋಂಕು ಹೇಗೆ ತಗುಲಿತು ಎಂಬುದು ಸ್ಪಷ್ಟವಾಗಿಲ್ಲ. ವಿನಯಾ ಅವರ ಮನೆಯಲ್ಲಿ ಹೆಚ್ಚಾಗಿ ಬಾವಿ ನೀರನ್ನು ಬಳಸುತ್ತಿದ್ದರು ಎಂದು ವರದಿಯಾಗಿದೆ. ಸದ್ಯ ಆ ಬಾವಿಯ ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೋಂಕು ಹೇಗೆ ತಗುಲಿತು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
ಸೋಂಕು ಹೇಗೆ ಹರಡುತ್ತದೆ?
ಮೆದುಳು ತಿನ್ನುವ ಅಮೀಬಾ ನೀರಿನ ಮೂಲಕ ಹರಡುತ್ತದೆ. ಅಂದರೆ, ಸ್ವಿಮ್ಮಿಂಗ್, ಡೈವಿಂಗ್ ಹಾಗೂ ಹೊಂಡಗಳಲ್ಲಿ ಸ್ನಾನ ಮಾಡುವಾಗ ಇದು ಹರಡಬಹುದು. ನರಗಳ ಮೂಲಕ ಮೆದುಳಿಗೆ ಹೋಗಿ 1 ರಿಂದ 9 ದಿನಗಳಲ್ಲಿ ಸೋಂಕು ಉಂಟುಮಾಡುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಒಂದೇ ಕಡೆ ಸಂಗ್ರಹಿಸಿದ ನೀರಿನಿಂದಲೂ ಈ ಸೋಂಕು ಹರಡುವ ಸಾಧ್ಯತೆ ಇದೆ. ಸೋಂಕು ತಗುಲಿದಾಗ, ತಲೆನೋವು, ಜ್ವರ, ಕಣ್ಣಿನ ನೋವು ಹಾಗೂ ಗಂಟಲು ನೋವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಎಚ್ಚರಿಕೆ ವಹಿಸಿ.
ಶಬರಿಮಲೆ ಯಾತ್ರಿಕರಿಗೆ ಎಚ್ಚರಿಕೆ
ನವೆಂಬರ್ 20 ರಿಂದ ಶಬರಿಮಲೆ ಯಾತ್ರೆ ಆರಂಭವಾಗಿದ್ದು, ಕರ್ನಾಟಕ ಸರ್ಕಾರವು ತೀರ್ಥಯಾತ್ರಿಗಳಿಗೆ ಎಚ್ಚರಿಕೆ ನೀಡಿದೆ. ನದಿಗಳಲ್ಲಿ ಸ್ನಾನ ಮಾಡುವಾಗ ಎಚ್ಚರಿಕೆ ವಹಿಸುವಂತೆ ಹೇಳಿದೆ, (ಏಜೆನ್ಸೀಸ್).