ಕೇರಳದ ದೀಪಕ್​ ಸಾವು ಪ್ರಕರಣ 
ದೇಶ

ಯುವತಿಯ ವೀವ್ಸ್​ ಹುಚ್ಚಿಗೆ ಅಮಾಯಕ ದೀಪಕ್​ ಬಲಿ ಪ್ರಕರಣ: ಮಹತ್ವದ ಹೆಜ್ಜೆ ಇಟ್ಟ ಪುರುಷರ ಸಂಘ! Deepak death Case

ಪ್ರಮುಖ ಮುಖ್ಯಾಂಶಗಳು

  • ಇಡೀ ದೇಶದಲ್ಲಿ ಕೇರಳದ ದೀಪಕ್​ ಸಾವು ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ
  • ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್​ ಸಾವಿಗೆ ಶರಣಾಗಿರುವುದು ಕಳವಳಕಾರಿಯಾಗಿದೆ
  • ಡಿಜಿಟಲ್​ ಯುಗದಲ್ಲಿ ವೀವ್ಸ್​ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸುತ್ತಿರುವುದು ನಿಜಕ್ಕೂ ಆಘಾತಕಾರಿ
ಕೊಚ್ಚಿ: ಇಡೀ ದೇಶದಲ್ಲಿ ಕೇರಳದ ದೀಪಕ್​ ಸಾವು ಪ್ರಕರಣ ( Deepak death Case ) ಸಾಕಷ್ಟು ಸದ್ದು ಮಾಡುತ್ತಿದೆ. ತಾನು ಮಾಡದ ತಪ್ಪಿಗೆ ಅಮಾಯಕ ದೀಪಕ್​ ಸಾವಿಗೆ ಶರಣಾಗಿದ್ದು, ದೇಶದ ಜನೆತಯನ್ನು ಚಿಂತಿಸುವಂತೆ ಮಾಡಿದೆ. ಇಂದಿನ ಡಿಜಿಟಲ್​ ಯುಗದಲ್ಲಿ ವೀವ್ಸ್​ ಹುಚ್ಚಿಗೆ ಮಾನವೀಯತೆಯನ್ನು ಮರೆತು ವರ್ತಿಸುತ್ತಿರುವುದು ನಿಜಕ್ಕೂ ಆಘಾತಕಾರಿ ವಿಚಾರವಾಗಿದೆ. ಇಂತಹ ಸಂಗತಿಗಳನ್ನು ನಿಜಕ್ಕೂ ಗಂಭೀರವಾಗಿ ತೆಗದುಕೊಳ್ಳಬೇಕಿದ್ದು, ಕೇರಳ ಹೈಕೋರ್ಟ್​ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಮನೆ ಮಾಡಿದೆ.
ಹೌದು, ದೀಪಕ್​ ಸಾವು ಪ್ರಕರಣ ಇದೀಗ ಹೈಕೋರ್ಟ್​ ಮೆಟ್ಟಿಲೇರಿದೆ. ಅದಕ್ಕೂ ಮುನ್ನ ಈ ಪ್ರಕರಣ ಹಿನ್ನೆಲೆಯನ್ನು ಒಮ್ಮೆ ನೋಡಿ ಬರೋಣ. ಇತ್ತೀಚೆಗಷ್ಟೇ, ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ತನಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯಕರವಾಗಿ ಮುಟ್ಟುತ್ತಿದ್ದಾನೆ ಎಂದು ವಿಡಿಯೋ ಮೂಲಕ ಬಿಂಬಿಸಿ, ಸುಳ್ಳು ಸಂದೇಶವನ್ನು ಸಾರಿದಳು. ಈ ವಿಡಿಯೋ ಜಾಲತಾಣಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗಿ, ವ್ಯಕ್ತಿಗೆ ಅಲ್ಲೇ ಹಿಗ್ಗಾಮುಗ್ಗಾ ಥಳಿಸಬೇಕಿತ್ತು ಎಂಬ ಕಮೆಂಟ್​ಗಳಿಂದ ತುಂಬಿತು. ಸಾಕಷ್ಟು ಜನರು, ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕಿತ್ತು ಎಂದೆಲ್ಲ ಆಕ್ರೋಶ ಹೊರಹಾಕಿದರು. ತನ್ನದೇನು ತಪ್ಪಿಲ್ಲದಿದ್ದರೂ ಸುಖಾಸುಮ್ಮನೆ ನನ್ನನ್ನು ವಿಡಿಯೋದಲ್ಲಿ ತೋರಿಸಿ, ಮಾನ-ಮರ್ಯಾದೆ ಕಳೆದಳು ಎಂದು ದೀಪಕ್ (41) ತೀರ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಸದ್ಯ ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪುರುಷರ ಸಂಘ ಇದೀಗ ಕೇರಳದ ಹೈಕೋರ್ಟ್ ಮೆಟ್ಟಿಲೇರಿದೆ.
ಕೋಝಿಕ್ಕೋಡ್‌ ಜಿಲ್ಲೆಯ ಗೋವಿಂದಪುರಂ ಮೂಲದ ದೀಪಕ್ ಸಾವಿನ ಪ್ರಕರಣದಲ್ಲಿ ನ್ಯಾಯಕ್ಕಾಗಿ ಪುರುಷರ ಸಂಘವು ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದೆ. ಹೈಕೋರ್ಟ್​ಗೆ ನೀಡಿರುವ ದೂರಿನಲ್ಲಿ ಸಿಬಿಐ ಅಥವಾ ಅಪರಾಧ ವಿಭಾಗದ ತನಿಖೆಗೆ ಸಂಘವು ಒತ್ತಾಯಿಸಿದೆ.
ಆರೋಪಿ ಶಿಮ್ಜಿತಾ ಮುಸ್ತಫಾ ಅವರನ್ನು ರಕ್ಷಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮಹಿಳೆ ವಿದೇಶಕ್ಕೆ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಕೂಡಲೇ ಆಕೆಯ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಬೇಕು. ಬಸ್ಸಿನಲ್ಲಿರುವ ವಿಡಿಯೋವನ್ನು ಮಹಿಳೆಯ ಮೊಬೈಲ್ ಫೋನ್‌ನಲ್ಲಿ ಎಡಿಟ್​ ಮಾಡಲಾಗಿದೆ. ಆದ್ದರಿಂದ, ಫೋನ್ ಅನ್ನು ವಶಪಡಿಸಿಕೊಂಡು ಪರಿಶೀಲಿಸಬೇಕು. ನಿಜ ಹೇಳಬೇಕೆಂದರೆ, ದೀಪಕ್ ಆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬುದು ಸುಳ್ಳು ಪ್ರಚಾರ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮೃತ ದೀಪಕ್​ ಅವರ ಮನೆಗೆ ಭೇಟಿ ನೀಡಿದ ನಂತರ, ಪುರುಷರ ಸಂಘದ ಪ್ರತಿನಿಧಿ ರಾಹುಲ್ ಈಶ್ವರ್, ದೀಪಕ್ ಅವರ ಕುಟುಂಬಕ್ಕೆ 3.17 ಲಕ್ಷ ರೂ.ಗಳ ಪರಿಹಾರ ಹಣವನ್ನು ಹಸ್ತಾಂತರಿಸಲಾಗಿದೆ ಎಂದು ಹೇಳಿದರು. ಪುರುಷರಿಗೆ ಸಹಾಯ ಮಾಡಲು ನಮ್ಮ ಸಂಘವು 24 ಗಂಟೆಗಳ ಫೋನ್ ವ್ಯವಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ರಾಹುಲ್​ ಹೇಳಿದ್ದಾರೆ. ಸದ್ಯ ಶಿಮ್ಜಿತಾ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಆಕೆ ತಲೆಮರೆಸಿಕೊಂಡಿದ್ದಾಳೆ.
ಇನ್ನು ಆರೋಪಿ ಶಿಮ್ಜಿತಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ಎಡಿಟ್​ ಮಾಡಿ ಹರಿಬಿಡಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ವಿಡಿಯೋದ ಪೂರ್ಣ ಆವೃತ್ತಿಯನ್ನು ಮರುಪಡೆಯಲು ಸೈಬರ್ ಸೆಲ್‌ನ ಸಹಾಯವನ್ನು ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಮಹಿಳೆಯನ್ನು ಮತ್ತು ಆಕೆಯ ಫೋನ್ ಅನ್ನು ಹುಡುಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶಿಮ್ಜಿತಾ ಮಂಗಳೂರಿಗೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ಸೂಚಿಸಿವೆ. ಈ ಮಧ್ಯೆ, ಮಹಿಳೆ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾಳೆ ಎಂಬ ಮಾಹಿತಿಯೂ ಇದೆ.

ದೇಶವ್ಯಾಪಿ ಆಕ್ರೋಶ

ಸದಾ ಇತರರ ಬಗ್ಗೆ ಕಾಳಜಿ ವಹಿಸುತ್ತಿದ್ದ ದೀಪಕ್ ಇಂದು ಯುವತಿಯೊಬ್ಬಳ ವ್ಯೂವ್ಸ್​, ಲೈಕ್ಸ್​ ಹುಚ್ಚಿಗೆ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ದೂಡಿದ್ದು ನಿಜಕ್ಕೂ ಎಂಥವರ ರಕ್ತವನ್ನು ಕುದಿಸುತ್ತದೆ. ಯಾವ ತಪ್ಪನ್ನು ಮಾಡದ ಪುರುಷನಿಗೆ ಇದೆಂಥಾ ಶಿಕ್ಷೆ? ಹಾಗಿದ್ದರೆ, ಬಸ್ಸಿನಲ್ಲಿ ಪುರುಷರು ಮಹಿಳೆಯರ ಮಧ್ಯೆ ಪ್ರಯಾಣಿಸುವಂತಿಲ್ಲವೇ? ಇನ್ನೊಬ್ಬರ ಹುಚ್ಚಾಟಕ್ಕೆ ಅಮಾಯಕರು ಬಲಿಯಾಗುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಸದ್ಯ ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ,(ಏಜೆನ್ಸೀಸ್).