ನವದೆಹಲಿ: ಸೂಕ್ತ ಹಾಗೂ ಬಲವಾದ ಸಾಕ್ಷ್ಯಾಧಾರಗಳಿಲ್ಲದೆ, ಬರಿ ಅನುಮಾನದ ಆಧಾರದ ಮೇಲೆ ಶಿಕ್ಷೆಗೊಳಗಾಗಿ ಬರೋಬ್ಬರಿ 22 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಒಡಿಶಾದ ಅರ್ಜುನ್ ಜಾನಿ ಎಂಬ ವ್ಯಕ್ತಿಯೊಬ್ಬರನ್ನು ಸುಪ್ರೀಂ ಕೋರ್ಟ್ (
ಸಂಪೂರ್ಣವಾಗಿ ಖುಲಾಸೆಗೊಳಿಸಿದೆ.
ತನಿಖಾ ಸಂಸ್ಥೆಗಳು ಸಲ್ಲಿಸಿದ್ದ ಸಾಕ್ಷ್ಯಗಳು ಅತ್ಯಂತ ದುರ್ಬಲ ಮತ್ತು ನಂಬಲರ್ಹವಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯವು, ಸಾಕ್ಷಿಯಿಲ್ಲದೇ ಒಬ್ಬ ವ್ಯಕ್ತಿ 22 ವರ್ಷ ಜೀವನವನ್ನು ಕಳೆದುಕೊಂಡಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ ಏನು?
2004ರಲ್ಲಿ ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿ ಕಮಲಾ, ಸೋನ್‌ಬಾರಿ ಮತ್ತು ರತ್ನಾಯಿ ಎಂಬ ಮೂವರು ಮಹಿಳೆಯರ ಕೊಲೆಯಾಗಿತ್ತು. ಈ ಪೈಕಿ ರತ್ನಾಯಿ ಅವರ ಮೇಲೆ ಅರ್ಜುನ್ ಜಾನಿ ದಾಳಿ ಮಾಡುವುದನ್ನು ಕಂಡಿದ್ದಾಗಿ ಒಬ್ಬನೇ ಒಬ್ಬ ಪ್ರತ್ಯಕ್ಷದರ್ಶಿ ನೀಡಿದ್ದ ಹೇಳಿಕೆಯನ್ನೇ ಮುಖ್ಯ ಆಧಾರವಾಗಿಟ್ಟುಕೊಂಡು ಪೊಲೀಸರು ಅರ್ಜುನ್‌ನನ್ನು ಬಂಧಿಸಿದ್ದರು.
ಆದರೆ, ಘಟನೆ ನಡೆದ ಸ್ಥಳದಲ್ಲೇ ಉಳಿದಿಬ್ಬರ ಮೃತದೇಹಗಳಿದ್ದರೂ ಆ ಸಾಕ್ಷಿ ನೋಡದಿರುವುದು ಹಾಗೂ ಆತನ ಹೇಳಿಕೆಗಳಲ್ಲಿ ಹತ್ತಾರು ಗೊಂದಲಗಳಿರುವುದು ವಿಚಾರಣೆ ಸಮಯದಲ್ಲಿ ಕಂಡುಬಂದಿದೆ.
ಜೈಲಿನಿಂದಲೇ ಕಾನೂನು ಹೋರಾಟ
ವಿಚಾರಣಾ ನ್ಯಾಯಾಲಯ (Trial Court) ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅರ್ಜಿ ಸಲ್ಲಿಕೆ 3,157 ದಿನಗಳು ತಡವಾಗಿದೆ ಎಂಬ ಕಾರಣಕ್ಕೆ ಹೈಕೋರ್ಟ್ ಅರ್ಜಿಯನ್ನು ವಿಚಾರಣೆ ನಡೆಸದೇ ವಜಾಗೊಳಿಸಿತ್ತು. ಈ ಹೊತ್ತಿಗಾಗಲೇ ಆ ವ್ಯಕ್ತಿ 12 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು.
ಬಳಿಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಯಿತು. ಆದರೆ ನ್ಯಾಯಾಲಯ, ಆರೋಪಿ ಜೈಲಿನಲ್ಲಿದ್ದುಕೊಂಡೇ ಹೋರಾಟ ನಡೆಸುತ್ತಿರುವುದನ್ನು ಮತ್ತು ಈಗಾಗಲೇ ಸುದೀರ್ಘ ಕಾಲ ಜೈಲಿನಲ್ಲಿರುವುದನ್ನು ಪರಿಗಣಿಸಿ ಹೈಕೋರ್ಟ್ ಅರ್ಜಿಯನ್ನು ಸ್ವೀಕರಿಸಬೇಕಿತ್ತು ಎಂದು ಹೇಳಿ ವಿಳಂಬವನ್ನು ಮನ್ನಿಸಿತು.
ತನಿಖಾ ವೈಫಲ್ಯ ಖಂಡಿಸಿದ ಪೀಠ
ತನಿಖೆಯಲ್ಲಿ ಕಂಡುಬಂದ ಗಂಭೀರ ಲೋಪಗಳನ್ನು ನ್ಯಾಯಮೂರ್ತಿಗಳಾದ ಎಸ್‌ಕೆ ಸಿಂಗ್, ಜೆ ಬಿ ಪಾರ್ದಿವಾಲಾ ಹಾಗೂ ಕೆ ವಿನೋದ್ ಚಂದ್ರನ್ ಅವರಿದ್ದ ತ್ರಿಪೀಠವು ತೀವ್ರವಾಗಿ ಖಂಡಿಸಿದೆ. ಕೇವಲ ಅನುಮಾನದ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಿ, ಮೂರನೇ ದರ್ಜೆಯ ಚಿತ್ರಹಿಂಸೆ ನೀಡಿ ಬಲವಂತವಾಗಿ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಶಿಕ್ಷೆ ವಿಧಿಸುವುದು ನ್ಯಾಯಸೂತ್ರಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಅಷ್ಟೇ ಅಲ್ಲದೆ, ಕೊಲೆಗೆ ಬಳಸಲಾಗಿದೆ ಎನ್ನಲಾದ ಕಲ್ಲನ್ನು ವಶಪಡಿಸಿಕೊಂಡ ವಿಷಯದಲ್ಲೂ ಪೊಲೀಸರು ಹಾಗೂ ಸಾಕ್ಷಿಗಳ ಹೇಳಿಕೆಗಳ ನಡುವೆ ತೀವ್ರ ವೈರುಧ್ಯಗಳಿರುವುದನ್ನು ಕೋರ್ಟ್ ಬೆಟ್ಟು ಮಾಡಿ ತೋರಿಸಿದೆ. ಪ್ರತ್ಯಕ್ಷದರ್ಶಿಯೊಬ್ಬನ ಹೇಳಿಕೆಯ ಆಧಾರದಲ್ಲೇ ಶಿಕ್ಷೆ ವಿಧಿಸಬಹುದಾದರೂ, ಆ ಹೇಳಿಕೆಯು ಸಂಪೂರ್ಣವಾಗಿ ನಂಬಲರ್ಹ ಮತ್ತು ಕಟ್ಟುನಿಟ್ಟಿನ ಸಾಕ್ಷ್ಯಗಳಿಂದ ಕೂಡಿರಬೇಕು. ಆದರೆ ಈ ಪ್ರಕರಣದಲ್ಲಿ ಆರೋಪವನ್ನು ಅನುಮಾನಕ್ಕೆ ಆಸ್ಪದವಿಲ್ಲದಂತೆ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜುನ್ ಜಾನಿ ಅವರನ್ನು ನಿರಪರಾಧಿ ಎಂದು ಘೋಷಿಸಿ ತಕ್ಷಣವೇ ಬಿಡುಗಡೆ ಮಾಡಲು ಆದೇಶಿಸಿರುವ ಸುಪ್ರೀಂ ಕೋರ್ಟ್, ಕೊರಾಪುಟ್‌ನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (DLSA) ಜಿಲ್ಲಾಡಳಿತದ ನೆರವಿನೊಂದಿಗೆ ಅರ್ಜುನ್ ಅವರ ಪುನರ್ವಸತಿ ಹಾಗೂ ಸಮಾಜಕ್ಕೆ ಮರುಸೇರ್ಪಡೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದೆ (ಏಜೆನ್ಸೀಸ್).