ವಾಷಿಂಗ್ಟನ್: ಅಮೆರಿಕಾದ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡ್ತಿದ್ದ ಕರ್ನಾಟಕ(Karnataka student) ಮೂಲದ 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಎಂಬ ಭಾರತೀಯ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ ಎಂದು ಶನಿವಾರ(ಫೆ. 14) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ರಾಯಭಾರಿ ಕಚೇರಿ, ಕರ್ನಾಟಕ ಮೂಲದ, ಯುಸಿ ಬರ್ಕ್ಲಿಯ ಭಾರತೀಯ ಸ್ನಾತಕೋತ್ತರ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಫೆ. 9ರಿಂದ ಕಣ್ಮರೆಯಾಗಿದ್ದಾರೆ. ಈ ಬಗ್ಗೆ ಕಚೇರಿ ಅಧಿಕಾರಿಗಳು ವಿದ್ಯಾರ್ಥಿ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದಾರೆ. ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕ ಮಾಡಲಾಗಿದೆ ಎಂದು ಹೇಳಿದೆ.
ಸಾಕೇತ್ ರೂಮ್ಮೇಟ್ ಬನೀತ್ ಸಿಂಗ್ ಈ ಕುರಿತು ಲಿಂಕ್ಡ್ಇನ್ನಲ್ಲಿ ಮಾಹಿತಿ ನೀಡಿದ್ದು, ಸಾಕೇತ್ ಫೆ. 09ರಿಂದ ಕಾಣೆಯಾಗಿದ್ದಾನೆ. ಕೊನೆಯ ಬಾರಿಗೆ ಬರ್ಕ್ಲಿ ಬೆಟ್ಟಗಳಲ್ಲಿರುವ ಲೇಕ್ ಅಂಜಾ ಬಳಿ ನೋಡಲಾಗಿತ್ತು. ನನ್ನ ಸಂಪರ್ಕದಲ್ಲಿರುವ ಯಾರಾದರೂ ಇತ್ತೀಚೆಗೆ ಅವನನ್ನು ನೋಡಿದ್ರೆ, ದಯವಿಟ್ಟು ಯಾವುದೇ ಮಾಹಿತಿಯೊಂದಿಗೆ ನನ್ನನ್ನು ಸಂಪರ್ಕಿಸಿ. ನಾವು ಪೊಲೀಸರೊಂದಿಗೆ ಹುಡುಕುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದ ಸಾಕೇತ್ ಶ್ರೀನಿವಾಸಯ್ಯ, 2025 ರಲ್ಲಿ ಐಐಟಿ-ಮದ್ರಾಸ್‌ನಿಂದ ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆದಿದ್ದು, ಯುಸಿ ಬರ್ಕ್ಲಿಯಿಂದ ರಾಸಾಯನಿಕ ಮತ್ತು ಜೈವಿಕ ಆಣ್ವಿಕ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).