Navneet Rana | ಮಾಜಿ ಸಂಸದೆ ನವನೀತ್ ರಾಣಾ
ಮುಂಬೈ: ಮಹಾರಾಷ್ಟ್ರ ಚುನಾವಣಾ ಫಲಿತಾಂಶದ ಬಳಿಕ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು, ಅಮರಾವತಿ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಚುನಾವಣೆಯ 22 ಬಿಜೆಪಿ ಅಭ್ಯರ್ಥಿಗಳು ಮಾಜಿ ಸಂಸದೆ ನವನೀತ್ ರಾಣಾರನ್ನು ಉಚ್ಛಾಟಿಸುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಪ್ರಚಾರ ಮಾಡುವ ಮೂಲಕ ಪಕ್ಷವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದು, ಬಿಜೆಪಿಯ ಸ್ಥಾನಗಳು ಕುಸಿಯಲು ಇದೇ ಪ್ರಮುಖ ಕಾರಣ ಎಂದಿದ್ದಾರೆ.
87 ಸದಸ್ಯ ಬಲದ ಎಎಂಸಿಯಲ್ಲಿ ಬಿಜೆಪಿ ಕೇವಲ 25 ಸ್ಥಾನಗಳನ್ನು ಗಳಿಸಿದ್ದು, ಕಳೆದ ಬಾರಿ 45 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಚುನಾವಣೆಯಲ್ಲಿ ರವಿ ರಾಣಾ (ನವನೀತ್ ಪತಿ) ನೇತೃತ್ವದ ಯುವ ಸ್ವಾಭಿಮಾನ್ ಪಕ್ಷ (ವೈಎಸ್‌ಪಿ) 15 ಸ್ಥಾನಗಳನ್ನು ಗಳಿಸಿತು, ಕಾಂಗ್ರೆಸ್ 15, ಎಐಎಂಐಎಂ 12, ಎನ್‌ಸಿಪಿ 11, ಶಿವಸೇನೆ 3, ಬಿಎಸ್‌ಪಿ 3, ಶಿವಸೇನೆ (ಯುಬಿಟಿ) 2, ವಂಚಿತ್ ಬಹುಜನ್ ಅಘಾಡಿ 1.
ಚುನಾವಣೆಗೆ ಮುನ್ನ ಬಿಜೆಪಿ ಮತ್ತು ವೈಎಸ್‌ಪಿ (ನವನೀತ್ ಪತಿ, ಶಾಸಕ ರವಿ ರಾಣಾ ನೇತೃತ್ವದಲ್ಲಿ) ಸಂಬಂಧ ಕಡಿದುಕೊಂಡವು, ಆದರೆ ಸ್ಥಳೀಯ ಬಿಜೆಪಿ ನಾಯಕರೊಬ್ಬರು ನವನೀತ್ ಕೇಸರಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾರೆ ಎಂದು ಒತ್ತಾಯಿಸಿದರು. ಬದಲಾಗಿ, ಅವರು ಬಿಜೆಪಿ ಸ್ಪರ್ಧಿಗಳನ್ನು ಡಮ್ಮಿಗಳು ಎಂದು ಬ್ರಾಂಡ್ ಮಾಡಿ ವೈಎಸ್‌ಪಿ ಅಭ್ಯರ್ಥಿಗಳು ನಿಜವಾದ ಬಿಜೆಪಿ ಎಂದು ಬಿಂಬಿಸಿದರು ಎಂಬ ಆರೋಪವಿದೆ.
22 ದೂರುದಾರರಲ್ಲಿ 20 ಜನ ಸೋತವರಿದ್ದು, ಇಬ್ಬರು ಮಾತ್ರ ಜಯಗಳಿಸಿದ್ದಾರೆ. ಇವರೆಲ್ಲರೂ ನವನೀತ್ ಹಸ್ತಕ್ಷೇಪದ ಬಗ್ಗೆಯೇ ಆರೋಪ ಮಾಡುತ್ತಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಬರೆದ ಪತ್ರದಲ್ಲಿ, ನಾವು ಸಮಾಜದೊಂದಿಗೆ ಸಂಪರ್ಕ ಹೊಂದಿದ ಶ್ರದ್ಧಾವಂತ, ಶ್ರಮಶೀಲ ಪಕ್ಷದ ಕಾರ್ಯಕರ್ತರು. ನಮ್ಮ ಸೋಲಿಗೆ ವಿರೋಧ ಪಕ್ಷ ಕಾರಣವಲ್ಲ, ಆದರೆ ಬಿಜೆಪಿಯ ಹಿರಿಯ ನಾಯಕಿ ನವನೀತ್ ರಾಣಾ ನಮ್ಮ ವಿರುದ್ಧ ಬಹಿರಂಗವಾಗಿ ಪ್ರಚಾರ ಮಾಡುದ್ದಾರೆ ಎಂದು ಬರೆದಿದ್ದಾರೆ.
ಇಷ್ಟಾದ ಮೇಲೂ ನವನೀತ್ರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದರಿಂದ ಅಮರಾವತಿಯಲ್ಲಿನ ಬಿಜೆಪಿಯ ಹೆಜ್ಜೆಗುರುತು ನಾಶವಾಗುವ ಆತಂಕವಿದ್ದು, ಆದ್ದರಿಂದ ತಕ್ಷಣವೇ ಅವರನ್ನು ಹೊರಹಾಕುವಂತೆ ಒತ್ತಾಯಿಸಿದ್ದಾರೆ.
ನವನೀತ್ ರಾಣಾ ರಿಯಾಕ್ಷನ್ ಏನು..?
22 ಅಭ್ಯರ್ಥಿಗಳ ಆರೋಪಗಳಿಗೆ ನವನೀತ್ ರಾಣಾ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದ್ದು, ಈ ಬಿರುಕು ಮಹಾರಾಷ್ಟ್ರ ಬಿಜೆಪಿಯಲ್ಲಿ, ವಿಶೇಷವಾಗಿ ವಿದರ್ಭದಲ್ಲಿನ ಸಂಘಟನೆಗೆ ತೊಡಕಾಗುವ ಸಾಧ್ಯತೆಗಳೇ ಹೆಚ್ಚು.
ಅಮರಾವತಿ ನಾಗರಿಕ ಚುನಾವಣೆ
ಮಹಾರಾಷ್ಟ್ರ ಮಹಾನಗರ ಪಾಲಿಕೆಯ 29 ನಾಗರಿಕ ಸಂಸ್ಥೆಗಳಿಗೆ ಜನವರಿ 15 ರಂದು ಮತದಾನ ನಡೆದಿದ್ದು, ಜನವರಿ 16 ರಂದು ಫಲಿತಾಂಶ ಹೊರಬಿದ್ದಿದೆ. ಅಮರಾವತಿ ಮಹಾನಗರ ಪಾಲಿಕೆಯ 22 ವಾರ್ಡ್‌ಗಳಲ್ಲಿ ಒಟ್ಟು 87 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 661 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಜಿತ್ ಪವಾರ್ ಗುಂಪಿನ ಎನ್‌ಸಿಪಿ ಅತಿ ಹೆಚ್ಚು, ಅಂದರೆ 85, ಕಾಂಗ್ರೆಸ್ 74, ಬಿಜೆಪಿ 68, ಶಿಂಧೆ ಬಣದ ಶಿವಸೇನೆಯ 67 ಅಭ್ಯರ್ಥಿಗಳು ಕಣದಲ್ಲಿದ್ದರು(ಏಜೆನ್ಸೀಸ್).