PM Modi | ಪ್ರಧಾನಿ ನರೇಂದ್ರ ಮೋದಿ
ಮಸ್ಕತ್: 21 ನೇ ಶತಮಾನದ ಭಾರತವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ, ದೊಡ್ಡ ಗುರಿಗಳನ್ನು ಹೊಂದಿಸುವ ಮೂಲಕ ಮುಂದುವರಿಯುತ್ತದೆ ಮತ್ತು ಸಮಯಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi)ಗುರುವಾರ (ಡಿ.18) ಹೇಳಿದ್ದಾರೆ.
ಈ ಬಗ್ಗೆ ಓಮನ್ ರಾಜಧಾನಿ ಮಸ್ಕತ್‌ನಲ್ಲಿ ಭಾರತೀಯ ಸಮುದಾಯದ ಸಭೆಯಲ್ಲಿ ಮಾತನಾಡಿದ ಮೋದಿ, ಇಪ್ಪತ್ತೊಂದನೇ ಶತಮಾನದ ಭಾರತವು ದಿಟ್ಟ ನಿರ್ಧಾರಗಳು ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲದೆ, ದೊಡ್ಡ ಗುರಿಗಳೊಂದಿಗೆ ಮುಂದುವರಿಯುತ್ತದೆ, ನಿರ್ದಿಷ್ಟ ಸಮಯದೊಳಗೆ ಫಲಿತಾಂಶಗಳನ್ನು ನೀಡುತ್ತದೆ ಎಂದಿದ್ದಾರೆ.
ದೀಪಾವಳಿ ಹಬ್ಬವನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸುವ ಯುನೆಸ್ಕೋದ ಇತ್ತೀಚಿನ ನಿರ್ಧಾರವನ್ನು ಮೋದಿ ಶ್ಲಾಘಿಸಿದ್ದಾರೆ. ನಮ್ಮ ದೀಪ ಈಗ ನಮ್ಮ ಮನೆಗಳನ್ನು ಮಾತ್ರವಲ್ಲ, ಇಡೀ ಜಗತ್ತನ್ನೇ ಬೆಳಗಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಇದು ಎಲ್ಲಾ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದ್ದು, ದೀಪಾವಳಿಗೆ ದೊರೆತಿರುವ ಈ ಜಾಗತಿಕ ಮನ್ನಣೆಯು ಭರವಸೆ, ಸೌಹಾರ್ದತೆ ಮತ್ತು ಮಾನವೀಯತೆಯ ಸಂದೇಶವನ್ನು ಹರಡುವ ನಮ್ಮ ಆ ಬೆಳಕಿಗೆ ದೊರೆತಿರುವ ಮನ್ನಣೆಯಾಗಿದೆ ಎಂದು ಮೋದಿ ಶ್ಲಾಘಿಸಿದ್ದಾರೆ.
ಮೈತಿರಿ ಪರ್ವ್ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತು ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ಮತ್ತು ಒಮಾನ್ ಭೌಗೋಳಿಕವಾಗಿ ಮಾತ್ರವಲ್ಲದೆ, ತಲೆಮಾರುಗಳಿಂದಲೂ ಸಂಪರ್ಕ ಹೊಂದಿವೆ ಎಂದು ತಿಳಿಸಿದ್ದಾರೆ.
ನಮ್ಮ ವೈವಿಧ್ಯತೆಯು ನಮ್ಮ ಸಂಸ್ಕೃತಿಯ ಬಲವಾದ ಅಡಿಪಾಯವಾಗಿದೆ. ಅಲ್ಲದೆ, ಪ್ರತಿಯೊಂದು ಸಂಪ್ರದಾಯವು ಹೊಸ ಚಿಂತನೆಯೊಂದಿಗೆ ಬರುತ್ತದೆ. ನಾವು ಭಾರತೀಯರು, ನಾವು ಎಲ್ಲಿಗೆ ಹೋದರೂ, ನಾವು ವೈವಿಧ್ಯತೆಯನ್ನು ಗೌರವಿಸುತ್ತೇವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಲಸಿಗರು ಸಹಬಾಳ್ವೆ ಮತ್ತು ಸಹಕಾರದ ಜೀವಂತ ಉದಾಹರಣೆಯಾಗಿದ್ದಾರೆ. ನೀವು ಈ ಶತಮಾನಗಳಷ್ಟು ಹಳೆಯದಾದ ಸಂಬಂಧಗಳ ಅತಿದೊಡ್ಡ ರಕ್ಷಕರಾಗಿದ್ದಿರಿ. ಅಲ್ಲದೆ, ಯುವಕರಿಗೆ ನೀಡಿದ ಸಂದೇಶದಲ್ಲಿ, ಮೋದಿ, ದೊಡ್ಡ ಕನಸು ಕಾಣಿರಿ, ಆಳವಾಗಿ ಕಲಿಯಿರಿ, ಧೈರ್ಯದಿಂದ ಹೊಸತನವನ್ನು ಕಂಡುಕೊಳ್ಳಿ ಎಂದು ಹೇಳಿದ್ದಾರೆ,(ಏಜೆನ್ಸೀಸ್).