ಸಂಸದೆ ಡಿಂಪಲ್ ಯಾದವ್ ಯುಪಿ ಸಿಎಂ ಅಭ್ಯರ್ಥಿಯಾಗಲಿದ್ದಾರೆಯೇ?
- 2027ರ ಯುಪಿ ವಿಧಾನಸಭಾ ಚುನಾವಣೆ
- ಮಹಿಳಾ ಮತಗಳ ಮೇಲೆ ಕಣ್ಣಿಟ್ಟ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್
- ಸಂಸದೆ ಡಿಂಪಲ್ ಯಾದವ್ ಯುಪಿ ಸಿಎಂ ಅಭ್ಯರ್ಥಿಯಾಗಲಿದ್ದಾರೆಯೇ?
ಲಖನೌ: 2027 ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ವಿರೋಧ ಪಕ್ಷವಾಗಿ ಕಳೆದ ಹತ್ತು ವರ್ಷಗಳಿಂದ ಅಧಿಕಾರ ಕಳೆದುಕೊಂಡಿರುವ ಸಮಾಜವಾದಿ ಪಕ್ಷ ಮುಂದಿನ ಚುನಾವಣೆಯಲ್ಲಿ ಗದ್ದುಗೆ ಏರಲು ಭರದಿಂದ ಸಿದ್ಧತೆ ನಡೆಸುತ್ತಿದೆ.
ಯುಪಿ ಚುನಾವಣೆಯಲ್ಲಿ, ಮಹಿಳೆಯರನ್ನು ಗುರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷ, ತಾವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವಾರ್ಷಿಕ 40 ಸಾವಿರ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಂತಯೇ ಮಹಿಳೆಯರ ಮತಗಳನ್ನು ಸೆಳೆಯುವ ಉದ್ದೇಶದಿಂದ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ (Dimple Yadav Next CM) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಯಿದೆ ಎಂದೂ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಡಿಂಪಲ್ ಮುಂದಿನ ಸಿಎಂ?
ರಾಜ್ಯದಲ್ಲಿ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡುವ ಸಲುವಾಗಿ ಸ್ತ್ರೀ ಸಮ್ಮಾನ್ ಸಮೃದ್ಧಿ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿರುವ ಅಖಿಲೇಶ್ ಯಾದವ್, ನಾವು ಅಧಿಕಾರಕ್ಕೆ ಬಂದ ವರ್ಷದಿಂದ ಮಹಿಳೆಯರ ಖಾತೆಗೆ ತಲಾ 40 ಸಾವಿರ ಜಮಾ ಆಗಲಿದ್ದು, ಈ ಮೊತ್ತ ಪ್ರತಿ ವರ್ಷ ಏರಿಕೆಯಾಗಲಿದೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಈ ಯೋಜನೆಯ ಉಸ್ತುವಾರಿಯನ್ನು ಡಿಂಪಲ್ ಯಾದವ್ ನೋಡಿಕೊಳ್ಳಲಿದ್ದಾರೆಂದು ತಿಳಿಸಿದಾಗ, ಡಿಂಪಲ್ ಯಾದವ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆಯೇ? ಎಂಬ ಪ್ರಶ್ನೆಗೆ ಅಖಿಲೇಶ್ ಯಾದವ್ ಯಾವುದೇ ಉತ್ತರ ನೀಡದಿರುವುದು, ಡಿಂಪಲ್ ಕೂಡ ಸಿಎಂ ಆಗುವ ಸಾಧ್ಯತೆಯಿದೆ ಎಂದು ಊಹಿಸಬಹುದಾಗಿದೆ.
ಸುಚೇತಾ, ಮಾಯಾವತಿ ಬಳಿಕ ಡಿಂಪಲ್?
ಇನ್ನು ಉತ್ತರ ಪ್ರದೇಶ ರಾಜಕೀಯಕ್ಕೆ ಬಂದರೆ 1963 ರಿಂದ 1967 ರ ವರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಚೇತಾ ಕೃಪಲಾನಿ ಅವರು ರಾಜ್ಯದ ಹಾಗೂ ದೇಶದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು.
ನಂತರ 1995,1997,2002 ಹಾಗೂ 2007 ರಿಂದ 2012 ರ ವರೆಗೆ ಬಹುಜನ ಸಮಾಜ ಪಾರ್ಟಿಯ ಮಾಯಾವತಿ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.
ಈಗ ಸಮಾಜವಾದಿ ಪಕ್ಷದ ಮಾಜಿ ಸಿಎಂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಸಿಎಂ ಅಭ್ಯರ್ಥಿ ಎಂದು ಘೋಷಣೆಯಾಗಿ ಚುನಾವಣೆಯಲ್ಲಿ ಬಹುಮತ ಪಡೆದು, ಅಧಿಕಾರ ಸ್ಥಾಪಿಸಿದರೆ ರಾಜ್ಯ ಕಂಡ ಮೂರನೇ ಮಹಿಳಾ ಮುಖ್ಯಮಂತ್ರಿ ಎಂಬ ಖ್ಯಾತಿ ಡಿಂಪಲ್ ಅವದ್ದಾಗಲಿದೆ, (ಏಜನ್ಸೀಸ್).