ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ 
ದೇಶ

2026ರ ತಮಿಳುನಾಡು ಚುನಾವಣೆ ಆರ್ಯ-ದ್ರಾವಿಡರ ಮತ್ತೊಂದು ಯುದ್ದ ಭೂಮಿ; ಸಿಎಂ ಎಂ.ಕೆ.ಸ್ಟಾಲಿನ್ | M K Stalin

ಚೆನ್ನೈ: ಕೆಲವೇ ತಿಂಗಳಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಮುಂಬರುವ 2026ರ ವಿಧಾನಸಭೆ ಚುನಾವಣೆಯನ್ನು ಹಿಂದಿ ಹೇರಿಕೆ ವಿರುದ್ಧ ಆರ್ಯ-ದ್ರಾವಿಡರ ನಡುವಿನ ಮತ್ತೊಂದು ಯುದ್ಧ ಭೂಮಿ ಎಂದು ಬಣ್ಣಿಸಿದ್ದಾರೆ.
ಜನವರಿ 25ರ ತಮಿಳು ಭಾಷಾ ಹುತಾತ್ಮರ ದಿನಾಚರಣೆಗೂ ಮುನ್ನ ಡಿಎಂಕೆ ಕಾರ್ಯಕರ್ತರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರವು ಹಿಂದಿ ಹೇರಿಕೆಯನ್ನು ನಿರಂತರವಾಗಿ ಹೇರುತ್ತಿರುವುದರಿಂದ ತಮಿಳನ್ನು ರಕ್ಷಿಸುವ ದ್ರಾವಿಡ ಚಳವಳಿ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಜೊತೆಗೆ ಜ. 25ರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಈ  ಸಾರ್ವಜನಿಕ ಸಭೆಗಳು ನಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಳ್ಳುವುದು ಅಷ್ಟೇ ಅಲ್ಲ, ಬದಲಾಗಿ ದ್ರಾವಿಡ ಧರ್ಮದ ಸೈನ್ಯ ಇನ್ನೂ ಅಸ್ತಿತ್ವದಲ್ಲಿದೆ. ತಮಿಳು ಭಾಷಾ ಹಕ್ಕುಗಳಿಗೆ ಬೆದರಿಕೆ ಬಂದರೆ ಅದು ಮತ್ತೆ ಪುಟಿದೇಳುತ್ತದೆ ಎಂಬುದನ್ನು ನಮ್ಮ ಶತ್ರುಗಳಿಗೆ ನೆನಪಿಸಲು ಆಯೋಜಿಸಬೇಕು. ಹಿಂದಿ ಮಾತನಾಡದ ರಾಜ್ಯಗಳು ಇಂದು ಅನುಭವಿಸುತ್ತಿರುವ ಹಕ್ಕುಗಳು ತಮಿಳು ಮಕ್ಕಳ ಬಲಿದಾನದಿಂದ ಬಂದಿದ್ದು ಎಂದಿದ್ದಾರೆ.
ಜನವರಿ 25 ರಂದು ಕಾಂಚೀಪುರಂನಲ್ಲಿ ನಡೆಯಲಿರುವ ಭಾಷಾ ಹುತಾತ್ಮರ ದಿನದ ಸಭೆಯೂ ತಂದೆ ಪೆರಿಯಾರ್ ಅವರ ದಳಪತಿಯಾಗಿ ಹಿಂದಿಯನ್ನು ಓಡಿಸಿ, ದ್ವಿಭಾಷಾ ನೀತಿಯನ್ನು ಸ್ಥಾಪಿಸಿದ ಕಾಂಚಿಯ ಮಣ್ಣಿನ ನಾಯಕ ಅಣ್ಣಾದೊರೈ ಜನ್ಮಸ್ಥಳ ಸಾಂಕೇತಿಕವಾಗಿ ಮಹತ್ವದ್ದಾಗಿದೆ. ನಾವು ಹುತಾತ್ಮರಿಗೆ ಗೌರವ ಸಲ್ಲಿಸೋಣ ಮತ್ತು ಒಟ್ಟಾಗಿ ಮುಂದುವರಿಯೋಣ ಎಂದು ಹೇಳಿದ್ದಾರೆ.
ಸಾಮಾಜಿಕ ನ್ಯಾಯ, ಧಾರ್ಮಿಕ ಸಾಮರಸ್ಯ ಮತ್ತು ರಾಜ್ಯಗಳ ಹಕ್ಕುಗಳ ಆದರ್ಶಗಳನ್ನು ಹೊಂದಿರುವ ಡಿಎಂಕೆ ನೇತೃತ್ವದ ಮೈತ್ರಿಕೂಟ, ತಮಿಳು ಸಂಸ್ಕೃತಿಯನ್ನು ನಾಶಮಾಡಲು ಬಯಸುವ ರಾಜಕೀಯ ಶತ್ರುಗಳು ಮತ್ತು ಆ ಶತ್ರುಗಳ ಬಾಡಿಗೆ ಕೈಗಳಾಗಿ ಮಾರ್ಪಟ್ಟಿರುವ ಗುಲಾಮರ ವಿರುದ್ಧ ನಮ್ಮ ಗೆಲುವು ಖಚಿತ ಎಂದು ಪ್ರತಿಪಾದಿಸಿದ್ದಾರೆ (ಏಜೆನ್ಸೀಸ್).