- 2026ರ ಹೊಸ ವರ್ಷವನ್ನು ಹೊಸ ಭರವಸೆಗಳೊಂದಿಗೆ ಸ್ವಾಗತಿಸಲು ಇಡೀ ಜಗತ್ತು ಸಜ್ಜಾಗಿದೆ
- ಮುಂಬರುವ 2026ರ ಹೊಸ ವರ್ಷದ ಕುರಿತಾದ ಭವಿಷ್ಯವಾಣಿಗಳು ಕೂಡ ಜಾಲತಾಣದಲ್ಲಿ ಹರಿದಾಡುತ್ತಿವೆ
- ಫ್ರೆಂಚ್ ಖ್ಯಾತ ಜ್ಯೋತಿಷಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಗಳು ಭಾರಿ ಸದ್ದು ಮಾಡುತ್ತಿವೆ
- ಟಿಸಿನೊ ರಕ್ತದಿಂದ ತುಂಬಿ ಹರಿಯುತ್ತದೆ ಎಂದು ನಾಸ್ಟ್ರಾಡಾಮಸ್ ಪುಸ್ತಕದಲ್ಲಿ ಬರೆಯಲಾಗಿದೆ
2026 Predictions : ಹೊಸ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. 2026ರ ಹೊಸ ವರ್ಷ ಆಗಮನಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಈ ಹೊಸ ವರ್ಷವನ್ನು ಹೊಸ ಭರವಸೆಗಳೊಂದಿಗೆ ಸ್ವಾಗತಿಸಲು ಇಡೀ ಜಗತ್ತು ಸಜ್ಜಾಗಿದೆ. ಅದೇ ಸಮಯದಲ್ಲಿ ಮುಂಬರುವ ವರ್ಷದ ಕುರಿತಾದ ಭವಿಷ್ಯವಾಣಿಗಳು ಕೂಡ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವುಗಳಲ್ಲಿ, ಫ್ರೆಂಚ್ ಖ್ಯಾತ ಜ್ಯೋತಿಷಿ ನಾಸ್ಟ್ರಾಡಾಮಸ್ ಅವರ ಭವಿಷ್ಯವಾಣಿಗಳು ಭಾರಿ ಸದ್ದು ಮಾಡುತ್ತಿವೆ.
ಯಾರು ಈ ನಾಸ್ಟ್ರಾಡಾಮಸ್?
ಫ್ರೆಂಚ್ ತತ್ವಜ್ಞಾನಿ ಮತ್ತು ಪ್ರವಾದಿ ನಾಸ್ಟ್ರಾಡಾಮಸ್ ಭವಿಷ್ಯವಾಣಿಯು ಇಲ್ಲಿಯವರೆಗೆ ಹಲವು ಬಾರಿ ಸಾಬೀತಾಗಿದೆ ಎನ್ನಲಾಗಿದೆ. 1666 ರಲ್ಲಿ ಲಂಡನ್‌ನ ಮಹಾ ಬೆಂಕಿ, 9/11 ಭಯೋತ್ಪಾದಕ ದಾಳಿ, 2016ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗುವುದು, ಕರೊನಾ ಸಾಂಕ್ರಾಮಿಕ ರೋಗ, ರಾಣಿ ಎಲಿಜಬೆತ್ ಮರಣದ ಕುರಿತಂತೆ ಸುಮಾರು 500 ವರ್ವದ ಹಿಂದೆಯೇ ಭವಿಷ್ಯ ನುಡಿದಿದ್ದರಂತೆ. ಇದೆಲ್ಲ ಅವರು ಹೇಳಿದಂತೆಯೇ ನಡೆದಿದೆ ಎಂದು ಹೇಳಲಾಗುತ್ತಿದೆ.
ಆತಂಕಕಾರಿ ವಿಷಯವೆಂದರೆ ನಾಸ್ಟ್ರಾಡಾಮಸ್ ಅವರು 2026ರಲ್ಲಿ ಸಂಭವಿಸುವ ಕೆಲವು ಅಪಘಾತಗಳನ್ನು ಸಹ ಉಲ್ಲೇಖಿಸಿದ್ದಾರೆ. ಅಂದಹಾಗೆ ನಾಸ್ಟ್ರಾಡಾಮಸ್ 1555ರಲ್ಲಿ ತನ್ನ ಪುಸ್ತಕ ದಿ ಕಂಪ್ಲೀಟ್ ಪ್ರೊಫೆಸೀಸ್ ಫಾರ್ ದಿ ಫ್ಯೂಚರ್ನಲ್ಲಿ ವಿಶ್ವದ ಭವಿಷ್ಯವಾಣಿ ಬರೆದಿದ್ದಾರೆ. ಈ ಪುಸ್ತಕವು 942 ಕವಿತೆಗಳ ಸಂಗ್ರಹವಾಗಿದೆ. ಇದರ ಮೂಲಕ ನಾಸ್ಟ್ರಾಡಾಮಸ್ ಭವಿಷ್ಯದ ವಿವಿಧ ಘಟನೆಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಆ ನಿಟ್ಟಿನಲ್ಲಿ ನಾಸ್ಟ್ರಾಡಾಮಸ್ ಅವರ 2026ರ ಭವಿಷ್ಯವಾಣಿಗಳು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅವು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
* ನಾಸ್ಟ್ರಾಡಾಮಸ್ ಅವರು 2026ರಲ್ಲಿ ಮಹಾ ಯುದ್ಧ ನಡೆಯುವ ಮುನ್ಸೂಚನೆ ನೀಡಿದ್ದಾರೆ. 'ಏಳು ತಿಂಗಳ ಮಹಾ ಯುದ್ಧ, ದುಷ್ಟತನದಿಂದ ಸತ್ತ ಜನರು / ರೂಯೆನ್, ಎವ್ರೂಕ್ಸ್ ರಾಜ ವಿಫಲನಾಗುವುದಿಲ್ಲ' ಎಂದು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಅದರ ಪ್ರಕಾರ, ನಾಸ್ಟ್ರಾಡಾಮಸ್ ಅವರು ಏಳು ತಿಂಗಳ ಕಾಲ ನಡೆಯುವ ಮಹಾ ಯುದ್ಧದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಇದನ್ನು ರಷ್ಯಾ ಮತ್ತು ಯೂಕ್ರೇನ್ ನಡುವೆ ನಡೆಯುತ್ತಿರುವ ಯುದ್ಧಕ್ಕೂ ಹೋಲಿಕೆ ಮಾಡುತ್ತಿದ್ದಾರೆ. ಆದರೆ, ರಷ್ಯಾ ಮತ್ತು ಯೂಕ್ರೇನ್ ಇದೀಗ ಕದನ ವಿರಾಮ ಘೋಷಣೆ ಮಾಡಿವೆ.
* ನಾಸ್ಟ್ರಾಡಾಮಸ್ ಅವರು ರಾತ್ರಿ ವೇಳೆ 'ಜೇನುನೊಣಗಳ ದೊಡ್ಡ ಸಮೂಹ'ದಿಂದ ದಾಳಿ ನಡೆಯಲಿದೆ ಎಂದು ಉಲ್ಲೇಖಿಸಿದ್ದಾರೆ. ಜನರು ಇದನ್ನು ಡ್ರೋನ್ ದಾಳಿಗಳೊಂದಿಗೆ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ. ಅಲ್ಲದೆ, ಜೇನುನೊಣಗಳು ಐತಿಹಾಸಿಕವಾಗಿ ಒಂದು ಸಾಮ್ರಾಜ್ಯವನ್ನು ಪ್ರತಿನಿಧಿಸುತ್ತವೆ.
* 'ಆ ಮಹಾಪುರುಷ ಹಗಲಿನಲ್ಲಿ ಗುಡುಗು ಸಿಡಿಲು ಬಡಿದು ಸಾಯುತ್ತಾನೆ'. ಇದು ಜಗತ್ತಿನ ಮಹಾಪುರುಷನೊಬ್ಬ ಸಾಯುತ್ತಾನೆ ಎಂಬುದನ್ನು ಸೂಚಿಸುತ್ತದೆ ಎಂದು ಜನರು ಹೇಳುತ್ತಾರೆ. ಜಗತ್ತಿನ ಒಬ್ಬ ಶಕ್ತಿಶಾಲಿ ನಾಯಕ ಅನಿರೀಕ್ಷಿತವಾಗಿ ಸಾಯುತ್ತಾನೆ ಎಂಬುದು ಈ ಮಾತಿನ ಅರ್ಥವಾಗಿದೆ.
* "ನಗರವು ತೋರಿಸುವ ಕೃಪೆಯಿಂದಾಗಿ, ಟಿಸಿನೊ ರಕ್ತದಿಂದ ತುಂಬಿ ಹರಿಯುತ್ತದೆ" ಎಂದು ನಾಸ್ಟ್ರಾಡಾಮಸ್ ಪುಸ್ತಕದಲ್ಲಿ ಬರೆಯಲಾಗಿದೆ. ಇದರ ಪ್ರಕಾರ, ನಗರವೊಂದು ರಕ್ತದಿಂದ ತುಂಬಿ ಹರಿಯುತ್ತದೆ. ಇದು ಸ್ವಿಟ್ಜರ್ಲೆಂಡ್‌ನಲ್ಲಿರುವ ಇಟಾಲಿಯನ್ ಮಾತನಾಡುವ ಟಿಸಿನೊ ನಗರವನ್ನು ಉಲ್ಲೇಖಿಸುತ್ತದೆ ಎಂದು ಹೇಳಲಾಗುತ್ತದೆ. ಈ ನಗರವು ನಾಶವಾಗುತ್ತದೆ ಎನ್ನಲಾಗಿದೆ. ಯುದ್ಧ, ರೋಗ ಅಥವಾ ನೈಸರ್ಗಿಕ ವಿಕೋಪ ಸಂಭವಿಸುತ್ತದೆ ಎಂಬುದನ್ನು ಈ ಭವಿಷ್ಯವಾಣಿ ಸೂಚಿಸುತ್ತದೆ.
ಅಂದಹಾಗೆ, ಈ ಭವಿಷ್ಯವಾಣಿಗಳು ನಾಸ್ಟ್ರಾಡಾಮಸ್ ಅವರ ಅನುಯಾಯಿಗಳಿಂದ ವ್ಯಾಖ್ಯಾನಿಸಲ್ಪಟ್ಟಿವೆ ಹೊರತು ಅದಕ್ಕೆ ನಿಖರ ದಾಖಲೆಗಳು ಇಲ್ಲ. ಹೀಗಾಗಿ ಈ ಭವಿಷ್ಯವಾಣಿಗಳನ್ನು ಕೇವಲ ಮನರಂಜನೆಯಾಗಿ ಅಥವಾ ಚಿಂತನೆಗೆ ಒಳಪಡಿಸಿ ನೋಡಿ. ಯಾವುದೇ ಕಾರಣಕ್ಕೂ ವೈಜ್ಞಾನಿಕವಾಗಿ ನಂಬಬೇಡಿ, (ಏಜೆನ್ಸೀಸ್).