2026ರ ಮೊದಲಾರ್ಧ ಅಂತ್ಯ: ದೇಶದಲ್ಲಿ ಭಾರಿ ಚರ್ಚೆಗೀಡಾದ ದುರಂತ, ಅಪರಾಧ ಹಾಗೂ ರಾಜಕೀಯ ಏರುಪೇರುಗಳಿವು...2026 Half Year 
ದೇಶ

2026ರ ಮೊದಲಾರ್ಧ ಅಂತ್ಯ: ದೇಶದಲ್ಲಿ ಭಾರಿ ಚರ್ಚೆಗೀಡಾದ ದುರಂತ, ಅಪರಾಧ ಹಾಗೂ ರಾಜಕೀಯ ಏರುಪೇರುಗಳಿವು...2026 Half Year

ಪ್ರಮುಖ ಮುಖ್ಯಾಂಶಗಳು

  • 2026ರಲ್ಲಿ ಭಾರತೀಯ ರಾಜಕಾರಣದ ದಿಕ್ಕನ್ನೇ ಬದಲಿಸಿದ ‘ದಳಪತಿ’ ವಿಜಯ್ ಐತಿಹಾಸಿಕ ಜಯಭೇರಿ!
  • ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರ
  • ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಭೀಕರ ವಿಮಾನ ಅಪಘಾತದಲ್ಲಿ ನಿಧನ
  • 2026ರ ಮೊದಲಾರ್ಧದಲ್ಲಿ ಇಡೀ ದೇಶವನ್ನೇ ನಡುಗಿಸಿದ ದುರಂತ, ಅಪರಾಧ ಹಾಗೂ ರಾಜಕೀಯ ಏರುಪೇರುಗಳಿವು
2026 Half Year : 2026ನೇ ಇಸವಿಯ ವರ್ಷದ ಮೊದಲ ಅರ್ಧ ಭಾಗವು ಮುಕ್ತಾಯಗೊಂಡಿದ್ದು, ಕಳೆದ ಆರು ತಿಂಗಳುಗಳಲ್ಲಿ ಇಡೀ ದೇಶವನ್ನು ಬೆಚ್ಚಿಬೀಳಿಸುವಂತಹ ಹಲವು ದುರಂತಗಳು ಹಾಗೂ ಆತಂಕಕಾರಿ ರಾಜಕೀಯ ಮತ್ತು ಸಾಮಾಜಿಕ ಏರುಪೇರುಗಳು ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಅದರಲ್ಲೂ ವಿಶೇಷವಾಗಿ, ಪ್ರಭಾವಿ ರಾಜಕಾರಣಿ ಅಜಿತ್ ಪವಾರ್ ಅವರ ನಿಗೂಢ ಸಾವು ರಾಷ್ಟ್ರದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿತು. ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಈ ಹಠಾತ್ ಅಪರಾಧ ಸರಣಿಗಳು ಮತ್ತು ಗೊಂದಲದ ವಾತಾವರಣವು, ಪ್ರಸಕ್ತ ವರ್ಷದ ಮೊದಲಾರ್ಧವನ್ನು ಇತಿಹಾಸದ ಕಪ್ಪು ಪುಟಗಳಲ್ಲಿ ದಾಖಲಾಗುವಂತೆ ಮಾಡಿದೆ.

ಅಜಿತ್ ಪವಾರ್ ದುರಂತ ಸಾವು

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಪ್ರಭಾವಿ ನಾಯಕ ಅಜಿತ್ ಪವಾರ್ ಅವರು ತಮ್ಮ ಸ್ವಕ್ಷೇತ್ರವಾದ ಬಾರಾಮತಿಗೆ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಭೀಕರ ವಿಮಾನ ಅಪರಾಧ ಅಪಘಾತ ಇಡೀ ದೇಶವನ್ನೇ ಬೆಚ್ಚಿಬೀಳಿಸಿತು. ಬಾರಾಮತಿ ವಿಮಾನ ನಿಲ್ದಾಣದ ರನ್‌ವೇನಲ್ಲಿ ಇಳಿಯುವಾಗ ದಟ್ಟ ಮಂಜು ಹಾಗೂ ಕ್ರಾಸ್ ಲ್ಯಾಂಡಿಂಗ್ ಕಾರಣದಿಂದಾಗಿ ನಿಯಂತ್ರಣ ತಪ್ಪಿದ ಖಾಸಗಿ ಲಿಯರ್‌ಜೆಟ್-45 ವಿಮಾನವು ಬಯಲು ಪ್ರದೇಶದಲ್ಲಿ ಅಪ್ಪಳಿಸಿ ಸಂಪೂರ್ಣವಾಗಿ ಹೊತ್ತಿ ಉರಿಯಿತು. ಈ ಭೀಕರ ದುರಂತದಲ್ಲಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಹಾಗೂ ಭದ್ರತಾ ಸಿಬ್ಬಂದಿ ಒಳಗೊಂಡಂತೆ ಐದೂ ಜನ ಸ್ಥಳದಲ್ಲೇ ಸಾವಿಗೀಡಾದರು. ಮಹಾರಾಷ್ಟ್ರದ ರಾಜಕೀಯದ ದಿಕ್ಸೂಚಿಯನ್ನೇ ಬದಲಿಸಿದ ಈ ಆಕಸ್ಮಿಕ ಮತ್ತು ನಿಗೂಢ ದುರಂತದ ಸುದ್ದಿ ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಹಾಗೂ ತೀವ್ರ ಆಘಾತವನ್ನು ಸೃಷ್ಟಿಸಿದೆ.

ತಮಿಳುನಾಡು ರಾಜಕೀಯ ಬದಲಾವಣೆ

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಮಹಾ ಸುವರ್ಣ ಅಧ್ಯಾಯವೊಂದು ಈ ವರ್ಷ ಲಿಖಿತಗೊಂಡಿದ್ದು, ಜನಪ್ರಿಯ ನಟ ವಿಜಯ್ ಅವರ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಭರ್ಜರಿ ಜಯಭೇರಿ ಬಾರಿಸಿದೆ. ಇಷ್ಟು ವರ್ಷಗಳ ಕಾಲ ತಮಿಳುನಾಡು ರಾಜಕೀಯವನ್ನು ಆಳುತ್ತಿದ್ದ ದ್ರಾವಿಡ ಪಕ್ಷಗಳಾದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಗಳ ಸುದೀರ್ಘ ಪ್ರಾಬಲ್ಯವನ್ನು ಮಣ್ಣುಮುಕ್ಕಿಸಿ, ಕೇವಲ 2024ರಲ್ಲಿ ಸ್ಥಾಪನೆಯಾದ ಟಿವಿಕೆ ಪಕ್ಷವು ಬರೋಬ್ಬರಿ 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಸೇರಿದಂತೆ ಪ್ರಮುಖ ಪಕ್ಷಗಳ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಿದ 'ದಳಪತಿ' ವಿಜಯ್ ಅವರು, ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅನಿರೀಕ್ಷಿತ ಹಾಗೂ ಐತಿಹಾಸಿಕವಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅತ್ಯಂತ ಕಡಿಮೆ ಅವಧಿಯಲ್ಲಿ ಸಾಂಪ್ರದಾಯಿಕ ರಾಜಕೀಯ ಭದ್ರಕೋಟೆಯನ್ನು ಪುಡಿಪುಡಿ ಮಾಡಿ ವಿಜಯ್ ಸಾಧಿಸಿದ ಈ ಅಭೂತಪೂರ್ವ ದಿಗ್ವಿಜಯವು ಇಡೀ ದೇಶದಲ್ಲೇ ಭಾರಿ ಸಂಚಲನ ಮೂಡಿಸಿದೆ.

ಸಿಎಂ ಆಗಿ ಡಿಕೆ ಶಿವಕುಮಾರ್​

ರಾಷ್ಟ್ರೀಯ ರಾಜಕಾರಣದ ಏರುಪೇರುಗಳ ನಡುವೆ ಕರ್ನಾಟಕದಲ್ಲೂ ಭಾರಿ ರಾಜಕೀಯ ಬದಲಾವಣೆ ಗಾಳಿ ಬೀಸಿದೆ. ಕಳೆದ ಹಲವು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ನಡೆಯುತ್ತಿದ್ದ ಸದ್ದಿಲ್ಲದ 'ಕುರ್ಚಿ ಪಂಚಾಯಿತಿ'ಗೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಪೂರ್ಣವಿರಾಮ ಇಟ್ಟಿದೆ. ಅಧಿಕಾರ ಹಂಚಿಕೆಯ ಸೂತ್ರದ ಅನ್ವಯ ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರೊಂದಿಗೆ, ಕಳೆದ ಹಲವು ವರ್ಷಗಳಿಂದ ರಾಜ್ಯದ ಚುಕ್ಕಾಣಿ ಹಿಡಿಯಲು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದ 'ಟ್ರಬಲ್ ಶೂಟರ್' ಡಿ.ಕೆ. ಶಿವಕುಮಾರ್ ಅವರ ಬಹುದಿನಗಳ ಮುಖ್ಯಮಂತ್ರಿ ಕನಸು ಕೊನೆಗೂ ನನಸಾಗಿದೆ.

ಬಿಜೆಪಿ ಸೇರಿದ ರಾಘವ ಚಡ್ಡಾ

ಆಮ್ ಆದ್ಮಿ ಪಕ್ಷದ (AAP) ಪ್ರಮುಖ ಹಾಗೂ ಯುವ ಸಂಸದ ರಾಘವ್ ಚಡ್ಡಾ ಅವರು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಭಾರಿ ಆಘಾತ ನೀಡಿದ್ದು, ತಮ್ಮ ಬೆಂಬಲಿಗ ಸಂಸದರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ (BJP) ಸೇರ್ಪಡೆಯಾಗುವ ಮೂಲಕ ದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ರಾಜ್ಯಸಭೆಯ ಪ್ರಮುಖ ಹುದ್ದೆಯಿಂದ ಇವರನ್ನು ಕಿತ್ತುಹಾಕಿದ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದ ರಾಘವ್ ಚಡ್ಡಾ, ಕೊನೆಗೆ ತಮ್ಮೊಂದಿಗೆ ಆಪ್ ಪಕ್ಷದ ಇತರ ರಾಜ್ಯಸಭಾ ಸಂಸದರನ್ನೂ ಒಟ್ಟುಗೂಡಿಸಿಕೊಂಡು ಕೇಸರಿ ಪಡೆಗೆ ಜಿಗಿದಿದ್ದಾರೆ. ಬಿಜೆಪಿ ಸೇರಿದ ಬೆನ್ನಲ್ಲೇ ತಮ್ಮ ಹಳೆಯ ಪಕ್ಷವಾದ 'ಆಪ್' ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ಪಕ್ಷದ ಆಂತರಿಕ ರಾಜಕೀಯ ಮತ್ತು ನಾಯಕತ್ವದ ಧೋರಣೆಗಳನ್ನು ಕಟುವಾಗಿ ಟೀಕಿಸಿದ್ದಾರೆ. ರಾಷ್ಟ್ರ ರಾಜಧಾನಿಯ ರಾಜಕೀಯ ಸಮೀಕರಣಗಳನ್ನೇ ಬದಲಿಸಿರುವ ಈ ದಿಢೀರ್ ಪಕ್ಷಾಂತರದ ಬೆಳವಣಿಗೆಯು ಪ್ರಸಕ್ತ ವರ್ಷದ ಅತ್ಯಂತ ದೊಡ್ಡ ರಾಜಕೀಯ ಹೈಲೈಟ್ಸ್‌ನಲ್ಲಿ ಒಂದಾಗಿ ದಾಖಲಾಗಿದೆ.

ಪಂಚ ರಾಜ್ಯ ಚುನಾವಣೆ

2026ರ ಮೇ ತಿಂಗಳಲ್ಲಿ ಪ್ರಕಟವಾದ ಐದು ರಾಜ್ಯಗಳ (ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ) ವಿಧಾನಸಭಾ ಚುನಾವಣಾ ಫಲಿತಾಂಶಗಳು ಭಾರತದ ರಾಜಕೀಯ ಭೂಪಟದಲ್ಲಿ ಭಾರಿ ಸಂಚಲನ ಮೂಡಿಸಿವೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಭರ್ಜರಿ 108 ಸ್ಥಾನಗಳನ್ನು ಗೆದ್ದು ಡಿಎಂಕೆ ಮೈತ್ರಿಯನ್ನು ಸೋಲಿಸುವ ಮೂಲಕ ಐತಿಹಾಸಿಕ ಜಯ ದಾಖಲಿಸಿದೆ. ಇತ್ತ ಕೇರಳದಲ್ಲಿ ಸುದೀರ್ಘ 10 ವರ್ಷಗಳ ಎಡರಂಗ (LDF) ಆಡಳಿತವನ್ನು ಅಂತ್ಯಗೊಳಿಸಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟವು 97 ಸ್ಥಾನಗಳನ್ನು ಗೆದ್ದು ಭರ್ಜರಿಯಾಗಿ ಅಧಿಕಾರ ಹಿಡಿದಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಭದ್ರಕೋಟೆಯನ್ನು ಪುಡಿಪುಡಿ ಮಾಡಿದ ಬಿಜೆಪಿ 207 ಸ್ಥಾನಗಳೊಂದಿಗೆ ಅಭೂತಪೂರ್ವ ಬಹುಮತ ಪಡೆದು ಇತಿಹಾಸ ನಿರ್ಮಿಸಿದೆ. ಹಾಗೆಯೇ, ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ 92 ಸ್ಥಾನಗಳನ್ನು ಗೆದ್ದು ಸತತ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಂಡರೆ, ಪುದುಚೇರಿಯಲ್ಲಿ ಎನ್‌ಆರ್‌ಸಿ (AINRC) ಮತ್ತು ಬಿಜೆಪಿ ಮೈತ್ರಿಕೂಟವು 18 ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ರಾಮಮಂದಿರ ದೇಣಿಗೆ ಅಕ್ರಮ

ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಮತ್ತು ದೇಣಿಗೆ ಹಣದ ಎಣಿಕೆಯಲ್ಲಿ ಭಾರಿ ಅಕ್ರಮ ನಡೆದಿರುವ ಆಘಾತಕಾರಿ ಹಗರಣ ಇತ್ತೀಚೆಗೆ (ಜೂನ್ 2026ರಲ್ಲಿ) ಬೆಳಕಿಗೆ ಬಂದಿದ್ದು, ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಭಕ್ತರು ಹುಂಡಿಗೆ ಹಾಕಿದ ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಮುನ್ನವೇ ವ್ಯವಸ್ಥಿತವಾಗಿ ಲೂಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಗರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ರಚಿಸಿದ್ದ ವಿಶೇಷ ತನಿಖಾ ದಳದ (SIT) ಪ್ರಾಥಮಿಕ ವರದಿ ಆಧರಿಸಿ, ನಗದು ಎಣಿಕೆ ಕಾರ್ಯದಲ್ಲಿದ್ದ 8 ಮಂದಿ ಸಿಬ್ಬಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಅವರಿಂದ ಸುಮಾರು 80 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಆರ್ಥಿಕ ಅಕ್ರಮ ಮತ್ತು ಭದ್ರತಾ ಲೋಪಗಳ ನೈತಿಕ ಹೊಣೆ ಹೊತ್ತು 'ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್'ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಜೂನ್ 26ರಂದು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಕೊರತೆ ಮತ್ತು ಎಣಿಕೆ ಪ್ರಕ್ರಿಯೆಯಲ್ಲಿನ ದುರ್ಬಲ ಆಡಿಟ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ನಡೆದಿರುವ ಈ ವಂಚನೆ ಸದ್ಯ ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿದ್ದು, ಬ್ಯಾಂಕ್ ಅಧಿಕಾರಿಗಳ ಪಾತ್ರದ ಮೇಲೂ ತನಿಖೆ ತೀವ್ರಗೊಂಡಿದೆ.

ಟ್ವಿಶಾ ಶರ್ಮಾ ಸಾವು

ತೆಲುಗು ಚಿತ್ರರಂಗದ ಉದಯೋನ್ಮುಖ ನಟಿ ಹಾಗೂ ಮಾಡೆಲ್ ಟ್ವಿಶಾ ಶರ್ಮಾ ಭೋಪಾಲ್‌ನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾದ ಘಟನೆ ಇಡೀ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತು. ವರದಕ್ಷಿಣೆ ಕಿರುಕುಳ ಹಾಗೂ ಮಾನಸಿಕ ಹಿಂಸೆಯಿಂದಾಗಿ ಟ್ವಿಶಾ ಅವರನ್ನು ಪತಿ ಮತ್ತು ಅತ್ತೆ ಸೇರಿ ಕೊಲೆ ಮಾಡಿದ್ದಾರೆ ಎಂದು ಮೃತರ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ಪೊಲೀಸರ ತನಿಖೆಯಲ್ಲಿ ಲೋಪದೋಷಗಳಾಗಿವೆ ಎಂಬ ಶಂಕೆಯ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಈ ಹೈಪ್ರೊಫೈಲ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಶಾ ಅವರ ದೇಹಕ್ಕೆ ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪ್ರಮುಖ ಆರೋಪಿಗಳಾದ ಆಕೆಯ ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಸಿಬಿಐ ಅಧಿಕಾರಿಗಳು ಡಮ್ಮಿ ಗೊಂಬೆಯನ್ನು ಬಳಸಿ ಅಪರಾಧ ಸ್ಥಳದ ಮರುಸೃಷ್ಟಿ ಮಾಡುವ ಮೂಲಕ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ಕೇತನ ಅಗರ್ವಾಲ್​ ಕೊಲೆ

ಮಹಾರಾಷ್ಟ್ರದ ಪುಣೆಯ ಯುವ ಉದ್ಯಮಿ ಕೇತನ್ ಅಗರ್ವಾಲ್ ಅವರ ಹತ್ಯೆ ಪ್ರಕರಣವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕೇತನ್ ಅವರಿಗೆ ಸಿಯಾ ಗೋಯಲ್ ಎಂಬ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಸಿಯಾ ಈಗಾಗಲೇ ಚೇತನ್ ಚೌಧರಿ ಎಂಬಾತನನ್ನು ಪ್ರೀತಿಸುತ್ತಿದ್ದರಿಂದ ಆಕೆಗೆ ಕೇತನ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಮನೆಯವರ ಒತ್ತಾಯಕ್ಕೆ ಹೆದರಿ ಮದುವೆಯನ್ನು ನೇರವಾಗಿ ನಿರಾಕರಿಸಲಾಗದ ಸಿಯಾ, ತನ್ನ ಪ್ರಿಯಕರ ಚೇತನ್ ಜೊತೆ ಸೇರಿ ಕೇತನ್‌ನನ್ನು ಮುಗಿಸಲು ಭೀಕರ ಸ್ಕೆಚ್ ಹಾಕಿದಳು. ಜೂನ್ 18 ರಂದು ಸಂಚು ರೂಪಿಸಿದ ಈ ಪ್ರೇಮಿಗಳು, ಕೇತನ್‌ನನ್ನು ನಂಬಿಸಿ ಪಿಕ್ನಿಕ್ ನೆಪದಲ್ಲಿ ಕರೆದೊಯ್ದು ಘಾಟ್ ರಸ್ತೆಯ ಕಣಿವೆಯೊಂದಕ್ಕೆ ತಳ್ಳಿ ಭೀಕರವಾಗಿ ಕೊಂದಿದ್ದಾರೆ. ಆಳವಾದ ಕಣಿವೆಗೆ ಬಿದ್ದು ಉದ್ಯಮಿ ಕೇತನ್ ಜೀವ ಕಳೆದುಕೊಂಡಿದ್ದು, ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ನಡೆದ ಈ ರಕ್ತಸಿಕ್ತ ಕಥೆ ಮತ್ತು ಕ್ರೂರ ಹತ್ಯಾಕಾಂಡ ಸದ್ಯ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ, (ಏಜೆನ್ಸೀಸ್​).