ನವದೆಹಲಿ: ಭಾರತದ ಆರ್ಥಿಕತೆಯ ದಿಕ್ಸೂಚಿ ಎನಿಸಿರುವ ಕೇಂದ್ರ ಬಜೆಟ್ 2026 ಮಂಡನೆಗೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 1ರಂದು ಬೆಳಿಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಾರಿಗೆ ಲೋಕಸಭೆಯಲ್ಲಿ ಆಯವ್ಯಯ ಮಂಡಿಸುವ ಮೂಲಕ ಇತಿಹಾಸ ಬರೆಯಲಿದ್ದಾರೆ. ಈ ಬಾರಿಯ ಬಜೆಟ್ ಕೇವಲ ಆಂಕಿಸಂಖ್ಯೆಗಳ ಆಟವಲ್ಲ, ಬದಲಿಗೆ ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮೇಲೆ ನೇರ ಪ್ರಭಾವ ಬೀರಲಿರುವ 'ರಾಜಕೀಯ ಅಸ್ತ್ರ' ಎಂದೇ ವಿಶ್ಲೇಷಿಸಲಾಗುತ್ತಿದೆ.
ಚುನಾವಣಾ ರಾಜ್ಯಗಳಿಗೆ 'ಬಜೆಟ್' ಮಳೆ?
ಈ ವರ್ಷದ ಅಂತ್ಯದಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಚುನಾವಣೆಗಳು ನಡೆಯಲಿವೆ. ಹೀಗಾಗಿ, ಈ ರಾಜ್ಯಗಳ ಮತದಾರರನ್ನು ಸೆಳೆಯಲು ಕೇಂದ್ರ ಸರ್ಕಾರವು ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿಯ ದೊಡ್ಡ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಬಂಗಾಳದಲ್ಲಿ ಬಿಜೆಪಿ ತನ್ನ ನೆಲೆಯನ್ನು ಗಟ್ಟಿಗೊಳಿಸಲು ಭಾರಿ ಹೂಡಿಕೆಗೆ ಮುಂದಾಗಿದೆ. ಈಗಾಗಲೇ ಹೌರಾ-ಗುವಾಹಟಿ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಚಾಲನೆ ನೀಡಲಾಗಿದೆ. 101 ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ಧಿಗಾಗಿ 13,000 ಕೋಟಿ ಮೀಸಲಿಡಲಾಗಿದ್ದು, ಕೋಲ್ಕತ್ತಾ-ಸಿಲಿಗುರಿ ಎಕನಾಮಿಕ್ ಕಾರಿಡಾರ್‌ಗೆ ಈ ಬಜೆಟ್‌ನಲ್ಲಿ ಹೆಚ್ಚಿನ ವೇಗ ಸಿಗುವ ನಿರೀಕ್ಷೆಯಿದೆ.
ತಮಿಳುನಾಡಿನ ಉತ್ಪಾದನಾ ವಲಯ ಮತ್ತು ರಫ್ತು ಸಾಮರ್ಥ್ಯ ಹೆಚ್ಚಿಸಲು ಇಂಡಸ್ಟ್ರಿಯಲ್ ಪಾರ್ಕ್‌ಗಳಿಗೆ ಉತ್ತೇಜನ ನೀಡುವ ಸಾಧ್ಯತೆಯಿದೆ. ಕೇರಳದಲ್ಲಿ ಮುಂಬೈ-ಕನ್ಯಾಕುಮಾರಿ ಕಾರಿಡಾರ್ ಮತ್ತು ಮೆಟ್ರೋ ವಿಸ್ತರಣೆಯಂತಹ ಮೆಗಾ ಪ್ರಾಜೆಕ್ಟ್‌ಗಳಿಗೆ ಬಜೆಟ್ ಬೆಂಬಲ ಸಿಗಲಿದೆ. ಪ್ರವಾಸೋದ್ಯಮ ಮತ್ತು ವಿಪತ್ತು ನಿರ್ವಹಣೆಗೆ ಕೇರಳ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿದೆ.
ಅಸ್ಸಾಂನಲ್ಲಿ ಪ್ರವಾಹ ನಿಯಂತ್ರಣಕ್ಕೆ ದೊಡ್ಡ ಮೊತ್ತದ ಪ್ಯಾಕೇಜ್ ಮತ್ತು ಇತ್ತೀಚೆಗಷ್ಟೇ ಡಿಬ್ರೂಗಢದಲ್ಲಿ ಶಂಕುಸ್ಥಾಪನೆಗೊಂಡ 1,715 ಕೋಟಿ ಮೊತ್ತದ ಯೋಜನೆಗಳಿಗೆ ಅಧಿಕೃತ ಹಣಕಾಸು ಮುದ್ರೆ ಬೀಳಲಿದೆ. ಪುದುಚೇರಿಯಲ್ಲಿ ವಸತಿ ಮತ್ತು ನಾಗರಿಕ ಸೌಲಭ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತದೆ.
ಸಾಮಾನ್ಯ ಜನರಿಗೇನು ನಿರೀಕ್ಷೆ?
ಚುನಾವಣಾ ರಾಜ್ಯಗಳ ಹೊರತಾಗಿ, ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ಆರೋಗ್ಯ, ಶಿಕ್ಷಣ ಮತ್ತು ರಫ್ತು ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಅಥವಾ ಮಧ್ಯಮ ವರ್ಗಕ್ಕೆ ವಿಶೇಷ ರಿಯಾಯಿತಿ ಘೋಷಣೆಯಾಗುತ್ತದೆಯೇ ಎಂಬುದು ಈಗ ಕುತೂಹಲದ ಕೇಂದ್ರಬಿಂದುವಾಗಿದೆ. ರಾಜಕೀಯ ಪಂಡಿತರ ಪ್ರಕಾರ, ಇದು "ಅಭಿವೃದ್ಧಿ ಮತ್ತು ರಾಜಕೀಯ"ದ ಸಮತೋಲಿತ ಬಜೆಟ್ ಆಗಿರಲಿದೆ ಎಂದು ವರದಿ ಉಲ್ಲೇಖಿಸಲಾಗಿದೆ,(ಏಜೆನ್ಸೀಸ್).