Ahmedabad Blasts (ಚಿತ್ರ X)
- 2008ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ
- ಈ ಭೀಕರ ಕೃತ್ಯದಲ್ಲಿ ಭಾಗಿಯಾಗಿದ್ದ 49 ಅಪರಾಧಿಗಳ ದೋಷಾರೋಪಣೆ ಎತ್ತಿಹಿಡಿದ ಹೈಕೋರ್ಟ್
- 2022 ರಲ್ಲಿ ವಿಶೇಷ ನ್ಯಾಯಾಲಯವು 38 ಐಎಂ ಸದಸ್ಯರಿಗೆ ಮರಣದಂಡನೆ ಮತ್ತು ಇತರ 11 ಜನರಿಗೆ ಜೀವಾವಧಿ ಶಿಕ್ಷೆ
ಅಹಮದಾಬಾದ್: 2008ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಅಹಮದಾಬಾದ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ಮಂಗಳವಾರ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಈ ಭೀಕರ ಕೃತ್ಯದಲ್ಲಿ ಭಾಗಿಯಾಗಿದ್ದ 49 ಅಪರಾಧಿಗಳ ದೋಷಾರೋಪಣೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದು ವರದಿಯಾಗಿದೆ.
ನ್ಯಾಯಮೂರ್ತಿ ಎ.ವೈ. ಕೊಗ್ಜೆ ಮತ್ತು ನ್ಯಾಯಮೂರ್ತಿ ಸಮೀರ್ ಜೆ. ಡೇವ್ ಅವರ ಪೀಠವು 38 ಅಪರಾಧಿಗಳಿಗೆ ಮರಣದಂಡನೆ ಮತ್ತು ಉಳಿದ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಅಪರಾಧಿಗಳು ಸಲ್ಲಿಸಿದ್ದ ಎಲ್ಲಾ ಮೇಲ್ಮನವಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ: ಅಂದು ಏನಾಗಿತ್ತು?
2008ರ ಜುಲೈ 26ರಂದು ಗುಜರಾತ್‌ನ ಪ್ರಮುಖ ನಗರವಾದ ಅಹಮದಾಬಾದ್‌ನಲ್ಲಿ ಕೇವಲ 70 ನಿಮಿಷಗಳ ಅವಧಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ನಗರದ ವಿವಿಧ ಜನನಿಬಿಡ ಪ್ರದೇಶಗಳು, ಬಸ್ ನಿಲ್ದಾಣಗಳು ಮತ್ತು ಆಸ್ಪತ್ರೆಗಳ ಆವರಣವನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಸುಮಾರು 21 ಬಾಂಬ್‌ಗಳನ್ನು ಸ್ಫೋಟಿಸಿದ್ದರು. ತೀವ್ರ ನಿಗಾ ಘಟಕ ಹಾಗೂ ತುರ್ತು ಚಿಕಿತ್ಸಾ ವಿಭಾಗಗಳ ಹೊರಗಡೆಯೂ ಸ್ಫೋಟಗಳು ನಡೆದಿದ್ದರಿಂದ ಸಾವು-ನೋವಿನ ತೀವ್ರತೆ ಹೆಚ್ಚಾಗಿತ್ತು. ಈ ಭೀಕರ ಭಯೋತ್ಪಾದನಾ ದಾಳಿಯಲ್ಲಿ ಕನಿಷ್ಠ 56 ಅಮಾಯಕ ನಾಗರಿಕರು ಬಲಿಯಾಗಿದ್ದರು ಮತ್ತು ನೂರಾರು ಜನರು ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಇಂಡಿಯನ್ ಮುಜಾಹಿದ್ದೀನ್ ಎಂಬ ನಿಷೇಧಿತ ಭಯೋತ್ಪಾದಕ ಸಂಘಟನೆಯು ಈ ಸ್ಫೋಟಗಳ ಹಿಂದೆ ಸಕ್ರಿಯವಾಗಿ ಕೆಲಸ ಮಾಡಿತ್ತು ಎಂಬುದು ತನಿಖೆಯಿಂದ ಬಹಿರಂಗವಾಗಿತ್ತು. 2002ರ ಗೋದ್ರಾ ನಂತರದ ಕೋಮು ಗಲಭೆಗಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಈ ಸಂಚು ರೂಪಿಸಲಾಗಿತ್ತು ಎಂದು ತನಿಖಾ ಸಂಸ್ಥೆಗಳು ಪತ್ತೆಹಚ್ಚಿದ್ದವು.
ಘಟನೆ ಬಳಿಕ ವಿಶೇಷ ನ್ಯಾಯಾಲಯದ ಮುಂದೆ ಎಪ್ಪತ್ತೆಂಟು ಜನರನ್ನು ವಿಚಾರಣೆಗೆ ಒಳಪಡಿಸಲಾಯಿತು, ಮತ್ತು ಅವರಲ್ಲಿ 49 ಜನರನ್ನು ಫೆಬ್ರವರಿ 2022 ರಲ್ಲಿ ಶಿಕ್ಷೆಗೊಳಪಡಿಸಲಾಯಿತು. ಅಹಮದಾಬಾದ್‌ನಲ್ಲಿ ಒಟ್ಟು 21 ಕಡೆಯಲ್ಲಿ ಬಾಂಬ್ ಸ್ಪೋಟಗಳು ನಡೆದಿದ್ದವು. ಇದಕ್ಕೆ ಸಂಬಂಧಿಸಿದಂತೆ 20 ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು. ಸೂರತ್ ನಗರದಲ್ಲಿ ಭಯೋತ್ಪಾದಕರು ಬಾಂಬ್‌ಗಳನ್ನು ಇಟ್ಟಿದ್ದರಾದರೂ, ಅದೃಷ್ಟವಶಾತ್ ಅವು ಸ್ಫೋಟಿಸಿರಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ 15 ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಆದಾಗ್ಯೂ, ಈ ಪ್ರಕರಣದ ಕುರಿತು ಫೆಬ್ರವರಿ 2022 ರಲ್ಲಿ ವಿಶೇಷ ನ್ಯಾಯಾಲಯವು 38 ಐಎಂ ಸದಸ್ಯರಿಗೆ ಮರಣದಂಡನೆ ಮತ್ತು ಇತರ 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಶಿಕ್ಷೆಗೊಳಗಾದವರಲ್ಲಿ ಗುಜರಾತ್, ಮಧ್ಯಪ್ರದೇಶ, ಕೇರಳ ಮತ್ತು ಉತ್ತರ ಪ್ರದೇಶ ಸೇರಿದಂತೆ 11 ರಾಜ್ಯಗಳ ಮಾಜಿ ಸಿಮಿ ನಾಯಕ ಸಫ್ದಾರ್ ನಾಗೋರಿ ಮತ್ತು ಅವರ ಸಹಚರರು ಸೇರಿದ್ದಾರೆ.
ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಎಲ್ಲಾ ಆರೋಪಿಗಳು ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರಾಜ್ಯ ಸರ್ಕಾರವು ಅಪರಾಧಿಗಳಿಗೆ ಶಿಕ್ಷೆಯನ್ನು ದೃಢೀಕರಿಸಲು ಹೈಕೋರ್ಟ್ ಅನ್ನು ಸಂಪರ್ಕಿಸಿತ್ತು.
ಈ ಐತಿಹಾಸಿಕ ತೀರ್ಪಿನ ಕುರಿತು ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪಟೇಲ್ ಮಾತನಾಡಿದ್ದು, ಗುಜರಾತ್ ಹೈಕೋರ್ಟ್ ಈ ಸಂಕೀರ್ಣ ಪ್ರಕರಣದ ಮೇಲ್ಮನವಿಯನ್ನು ಒಂದೂವರೆ ವರ್ಷಗಳಿಗೂ ಹೆಚ್ಚು ಕಾಲ ಅತ್ಯಂತ ಸುದೀರ್ಘವಾಗಿ ಆಲಿಸಿದೆ. ಅದರಲ್ಲೂ ವಿಶೇಷವಾಗಿ, ಈ ವರ್ಷದ ಫೆಬ್ರವರಿ ತಿಂಗಳಿನಿಂದ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ದಿನನಿತ್ಯದ ಆಧಾರದ ಮೇಲೆ ನಿರಂತರ ವಿಚಾರಣೆಯನ್ನು ನಡೆಸಲಾಗಿತ್ತು ಎಂದು ಅಮಿತ್ ಪಟೇಲ್ ವಿವರಿಸಿದ್ದಾರೆ.
ಮಾರ್ಚ್ 30, 2027 ರ ಒಳಗಾಗಿ ಸ್ಫೋಟದಲ್ಲಿ ಮೃತರಾದವರ ಪ್ರತಿಯೊಂದು ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಹಾಗೂ ತೀವ್ರವಾಗಿ ಗಾಯಗೊಂಡವರಿಗೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ವಿತರಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ ಎಂದು ಪಟೇಲ್ ತಿಳಿಸಿದ್ದಾರೆ.
ಭಾರತದ ನ್ಯಾಯಾಂಗದ ಪ್ರಕಾರ ಯಾವುದೇ ನ್ಯಾಯಾಲಯವು ಒಂದೇ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ್ದು ಇದೇ ಮೊದಲು. ಈ ಹಿಂದೆ 1991 ರ ಜನವರಿಯಲ್ಲಿ, ತಮಿಳುನಾಡಿನ ಟಾಡಾ ನ್ಯಾಯಾಲಯವು 1991 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ಎಲ್ಲಾ 26 ಅಪರಾಧಿಗಳಿಗೆ ಮರಣದಂಡನೆ ವಿಧಿಸಿತ್ತು (ಏಜೆನ್ಸೀಸ್).