ಸಾಂದರ್ಭಿಕ ಚಿತ್ರ 
ದೇಶ

2006ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣ; ನಾಲ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ | Malegaon bomb blast

ಮುಂಬೈ: 31 ಮಂದಿ ಸಾವಿಗೆ ಕಾರಣವಾಗಿದ್ದ ಮಹಾರಾಷ್ಟ್ರದ ಮಾಲೆಗಾಂವ್ ಬಾಂಬ್ ಸ್ಪೋಟ(Malegaon bomb blast) ಪ್ರಕರಣದ ನಾಲ್ವರು ಆರೋಪಿಗಳನ್ನು ಬಾಂಬೆ ಹೈಕೋರ್ಟ್​ ಬುಧವಾರ(ಏ. 22) ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ನೇತೃತ್ವದ ಪೀಠವು, ರಾಜೇಂದ್ರ ಚೌಧರಿ, ಧನ್ ಸಿಂಗ್, ಮನೋಹರ್ ರಾಮ್ ಸಿಂಗ್ ನರ್ವಾರಿಯಾ ಹಾಗೂ ಲೋಕೇಶ್ ಶರ್ಮಾ ಎಂಬ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಅವರ ವಿರುದ್ಧ ಎನ್​ಐಎ ಕೋರ್ಟ್​ ಮಾಡಿದ್ದ ಆರೋಪಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
2025 ಸೆಪ್ಟೆಂಬರ್ 30ರಂದು ಎನ್​ಐಎ ನ್ಯಾಯಾಲಯವು ತಮ್ಮ ವಿರುದ್ಧ ಆರೋಪಗಳನ್ನು ರೂಪಿಸುವ ಆದೇಶವನ್ನು ಪ್ರಶ್ನಿಸಿ, ವಕೀಲ ಕೌಶಿಕ್ ಮ್ಹಾತ್ರೆ ಅವರ ಮೂಲಕ ಇಬ್ಬರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
2006 ಸೆಪ್ಟೆಂಬರ್ 8ರಂದು ಸ್ಫೋಟದ ಬಳಿಕ ವಿದ್ಯುತ್ ಮಗ್ಗದ ಪಟ್ಟಣದಲ್ಲಿ ಸರಣಿ ಸ್ಫೋಟಗಳ ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಇತರ ಕಾನೂನುಗಳ ಅಡಿಯಲ್ಲಿ ಅಪರಾಧ ಪ್ರಕರಣವನ್ನು ದಾಖಲಿಸಲಾಗಿತ್ತು. ಮೊದಲು ತನಿಖೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ 12 ಆರೋಪಿಗಳನ್ನು ಬಂಧಿಸಿ 2006 ಡಿಸೆಂಬರ್​​ನಲ್ಲಿ ಚಾರ್ಜ್​ಶೀಟ್ ಸಲ್ಲಿಸಿತ್ತು (ಏಜೆನ್ಸೀಸ್).