Air India (ಚಿತ್ರ X) 
ದೇಶ

ಏರ್ ಇಂಡಿಯಾ ಪೈಲಟ್‌ಗಳಿಗೆ ಡ್ರಗ್ ತಪಾಸಣೆ ಶಾಕ್​: ಮತ್ತಿಬ್ಬರು ಪರೀಕ್ಷೆಯಲ್ಲಿ ಫೇಲ್, ಸಂಸ್ಥೆಯಿಂದ ಅಮಾನತು! Air India

ನವದೆಹಲಿ: ಫುಕೆಟ್-ದೆಹಲಿ ವಿಮಾನದಲ್ಲಿ ನಡೆದ ಅಪಘಾತದ ಬೆನ್ನಲ್ಲೇ ಕಾರ್ಯಪ್ರವೃತ್ತಿಯಲ್ಲಿ ತೊಡಗಿರುವ ಏರ್​ ಇಂಡಿಯಾ

(Air India)

ಸಂಸ್ಥೆ ನಡೆಸಿದ ಪ್ರಾಥಮಿಕ ಡ್ರಗ್​ ಪರೀಕ್ಷೆಯಲ್ಲಿ ಮತ್ತಿಬ್ಬರು ಪೈಲಟ್‌ಗಳು ವಿಫಲರಾಗಿದ್ದಾರೆ. ಆದಾಗ್ಯೂ, ಅಂತಿಮ ತಪಾಸಣೆಯ ವರದಿ ಬರಬೇಕಿದ್ದು, ಅಲ್ಲಿಯವರೆಗೆ ಈ ಇಬ್ಬರೂ ಪೈಲಟ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೆಲಸದಿಂದ ಕೆಳಗಿಳಿಸಲಾಗಿದೆ.

ಫುಕೆಟ್-ದೆಹಲಿ ವಿಮಾನ ಘಟನೆಯ ಹಿನ್ನೆಲೆ

ಇತ್ತೀಚೆಗೆ ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್​ಬಸ್​ A-320Neo ವಿಮಾನವು ಹೈಡ್ರಾಲಿಕ್ ವ್ಯವಸ್ಥೆಯ ದೋಷದಿಂದಾಗಿ ದಿಢೀರನೆ 300 ಅಡಿ ಕೆಳಕ್ಕೆ ಕುಸಿದು ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಆದಾಗ್ಯೂ, ಕರ್ತವ್ಯದ ವೇಳೆ ಈ ವಿಮಾನದ ಮುಖ್ಯ ಪೈಲಟ್ ಗಾಂಜಾ ಸೇವಿಸಿದ್ದರು ಎಂದು ಕ್ಯಾಬಿನ್ ಸಿಬ್ಬಂದಿಯೊಬ್ಬರು ದೂರು ನೀಡಿದ್ದು, ಅದರಂತೆ ನಡೆಸಿದ ಎರಡು ಮೂತ್ರ ಪರೀಕ್ಷೆಗಳಲ್ಲೂ ಪೈಲಟ್ ಫೇಲ್ ಆಗಿದ್ದರು.

ಎಲ್ಲಾ ಪೈಲಟ್‌ಗಳಿಗೆ ಕಡ್ಡಾಯ ಡ್ರಗ್ ತಪಾಸಣೆ

ಈ ಘಟನೆಯ ನಂತರ ಜಾಗೃತಗೊಂಡ ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್‌ಗಳಿಗೆ ಕಡ್ಡಾಯವಾಗಿ ಡ್ರಗ್ ತಪಾಸಣೆ ನಡೆಸುವ ಹೊಸ ಕಾರ್ಯವಿಧಾನವನ್ನು ಜಾರಿಗೆ ತಂದಿದೆ. ಈವರೆಗೆ 300ಕ್ಕೂ ಹೆಚ್ಚು ಏರ್ ಇಂಡಿಯಾ ಪೈಲಟ್‌ಗಳನ್ನು ಈ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಅಂತಿಮ ವರದಿಗಾಗಿ ಕಾಯುತ್ತಿರುವ ಸಂಸ್ಥೆ

ಪ್ರಸ್ತುತ ಪರೀಕ್ಷೆಯಲ್ಲಿ ವಿಫಲರಾದ ಇಬ್ಬರು ಪೈಲಟ್‌ಗಳ ಅಂತಿಮ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದ್ದು, ಸಾಮಾನ್ಯವಾಗಿ ಈ ವರದಿ ಬರಲು 24 ರಿಂದ 48 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ವಿಮಾನಯಾನ ನಿಯಮಗಳಿಗೆ ಅನುಗುಣವಾಗಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಸಿಬ್ಬಂದಿಗಳ ನಿಯಮಿತ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಹಿನ್ನಲೆ

ಫುಕೆಟ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ಹಾರಾಟದ ವೇಳೆಯಲ್ಲಿ ಇದ್ದಕ್ಕಿದ್ದಂತೆ ಗಾಳಿಯ ಒತ್ತಡ ಹಾಗೂ ತಾಂತ್ರಿಕ ಸಮಸ್ಯೆಗೆ ಸಿಲುಕಿದ್ದು, ಈ ಪರಿಣಾಮದಿಂದಾಗಿ ವಿಮಾನವು ದಿಢೀರನೆ 300 ಅಡಿಗಳಷ್ಟು ಕೆಳಕ್ಕೆ ಜಾರಿತ್ತು. ಈ ಆಕಸ್ಮಿಕ ಘಟನೆಯಿಂದಾಗಿ ವಿಮಾನದಲ್ಲಿದ್ದ 10 ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು 12 ಜನರು ಗಾಯಗೊಂಡಿದ್ದರು.
ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯುತ್ತಿದ್ದಂತೆಯೇ ಗಾಯಾಳುಗಳನ್ನು ತಕ್ಷಣವೇ ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಅಗತ್ಯ ತುರ್ತು ಚಿಕಿತ್ಸೆ ನೀಡಲಾಯಿತು (ಏಜೆನ್ಸೀಸ್​).