ನವದೆಹಲಿ: ದೇಶದ ರಾಜಧಾನಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕೆಲಸದಿಂದ ತೆಗೆದುಹಾಕಿದ್ದ ಸೇಡಿನ ಕಿಚ್ಚಿನಲ್ಲಿದ್ದ ಮಾಜಿ ಮನೆಗೆಲಸದವನೊಬ್ಬ, ಐಆರ್‌ಎಸ್ (IRS) ಅಧಿಕಾರಿಯ ಪುತ್ರಿಯನ್ನು ಅಮಾನುಷವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಬಂಧಿತ ಆರೋಪಿಯನ್ನು 19 ವರ್ಷದ ರಾಹುಲ್ ಎಂದು ಗುರುತಿಸಲಾಗಿದ್ದು, ಈತ ದೆಹಲಿಯಲ್ಲಿ ಕೃತ್ಯ ಎಸಗುವ ಕೇವಲ 24 ಗಂಟೆಗಳ ಮೊದಲು ರಾಜಸ್ಥಾನದ ಅಲ್ವಾರ್‌ನಲ್ಲಿಯೂ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವುದು ಬೆಳಕಿಗೆ ಬಂದಿದೆ.
ದಕ್ಷಿಣ ದೆಹಲಿಯ 'ಈಸ್ಟ್ ಆಫ್ ಕೈಲಾಶ್'ನಲ್ಲಿ ವಾಸವಿದ್ದ 22 ವರ್ಷದ ಎಂಜಿನಿಯರಿಂಗ್ ಪದವೀಧರೆ ಹಾಗೂ ಯುಪಿಎಸ್‌ಸಿ ಆಕಾಂಕ್ಷಿ ಬುಧವಾರ ತಮ್ಮ ಮನೆಯಲ್ಲೇ ಶವವಾಗಿ ಪತ್ತೆಯಾಗಿದ್ದರು. ಪೋಷಕರು ಮನೆಗೆ ಬಂದಾಗ ಮಗಳ ಮೃತದೇಹ ಕಂಡು ಬಂದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಯು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ಮೊಬೈಲ್ ಚಾರ್ಜರ್ ಕೇಬಲ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ವಾರ್‌ನಲ್ಲಿ ಮೊದಲ ಕೃತ್ಯ!
ಪೊಲೀಸರ ವಿಚಾರಣೆಯ ವೇಳೆ ಆರೋಪಿಯ ಸರಣಿ ಅಪರಾಧಗಳ ಕರಾಳ ಮುಖ ಅನಾವರಣಗೊಂಡಿದೆ. ದೆಹಲಿಯಲ್ಲಿ ಕೊಲೆ ಮಾಡುವ ಕೆಲವೇ ಗಂಟೆಗಳ ಮೊದಲು, ಈತ ತನ್ನ ಗ್ರಾಮವಾದ ಅಲ್ವಾರ್‌ನಲ್ಲಿ ಪರಿಚಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ. ಸಂತ್ರಸ್ತೆಯ ಪತಿಯೊಂದಿಗೆ ಲೂಡೋ ಆಡುತ್ತಿದ್ದ ಈತ, ಅದೇ ಸ್ನೇಹವನ್ನು ಬಳಸಿಕೊಂಡು ಈ ನೀಚ ಕೃತ್ಯ ಎಸಗಿದ್ದ ಎನ್ನಲಾಗಿದೆ. ಅಲ್ಲಿಂದ ಪರಾರಿಯಾಗಿ ದೆಹಲಿಗೆ ಬಂದು ಈ ಎರಡನೇ ಘೋರ ಕೃತ್ಯ ಎಸಗಿದ್ದಾನೆ.
ಸೇಡೇ ಕೊಲೆಗೆ ಕಾರಣ?
ಆರೋಪಿ ರಾಹುಲ್ ಈ ಹಿಂದೆ ಇದೇ ಐಆರ್‌ಎಸ್ ಅಧಿಕಾರಿಯ ಮನೆಯಲ್ಲಿ ಕೆಲಸಕ್ಕಿದ್ದ. ಆದರೆ, ಇತರ ಕೆಲಸಗಾರರಿಂದ ಹಣ ಸಾಲ ಪಡೆದು ಮರಳಿಸದ ಕಾರಣ ಒಂದು ತಿಂಗಳ ಹಿಂದಷ್ಟೇ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಈ ಕುರಿತಾದ ದ್ವೇಷವೇ ಕೊಲೆಗೆ ಪ್ರಚೋದನೆ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದ್ವಾರಕಾದ ಹೋಟೆಲೊಂದರಲ್ಲಿ ಅಡಗಿದ್ದ ಆರೋಪಿಯನ್ನು ತಾಂತ್ರಿಕ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ.
"ಆರೋಪಿಯು ಅಲ್ವಾರ್‌ನಲ್ಲೂ ಇಂತಹುದೇ ಕೃತ್ಯ ಎಸಗಿರುವುದು ಆತನ ಕ್ರಿಮಿನಲ್ ಮನಸ್ಥಿತಿಯನ್ನು ತೋರಿಸುತ್ತದೆ. ಕೆಲಸದಿಂದ ತೆಗೆದುಹಾಕಿದ ಸೇಡು ಕೂಡ ಇದರಲ್ಲಿ ಸೇರಿರುವ ಸಾಧ್ಯತೆಯಿದೆ," ಎಂದು ಜಂಟಿ ಪೊಲೀಸ್ ಕಮಿಷನರ್ ವಿಜಯ್ ಕುಮಾರ್ ತಿಳಿಸಿದ್ದಾರೆ,(ಏಜೆನ್ಸೀಸ್).