Sukhoi Su 30: ಭಾರತೀಯ ವಾಯುಪಡೆಯ ಸುಖೋಯ್ ಸು-30 ಎಂಕೆಐ ಯುದ್ಧ ವಿಮಾನವು ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಪತನಗೊಂಡ ಹಿನ್ನಲೆ ಇಬ್ಬರು ಪೈಲಟ್ಗಳು ಮೃತಪಟ್ಟಿದ್ದಾರೆ ಎಂದು ಸಂಸ್ಥೆಯು ಅಧಿಕೃತವಾಗಿ ಪ್ರಕಟಿಸಿದೆ.
ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ.
ಐಎಎಫ್‌ನ ಎಲ್ಲಾ ಸಿಬ್ಬಂದಿಗಳು ಪೈಲಟ್ಗಳಿಗೆ ಸಂತಾಪ ಸೂಚಿಸಿದ್ದು, ಈ ದುಃಖದ ಸಮಯದಲ್ಲಿ ಮೃತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಎಂದು ವಾಯುಪಡೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಮೂಲಗಳ ಪ್ರಕಾರ, ವಿಮಾನವು ಅಸ್ಸಾಂನ ಜೋರ್ಹತ್ ವಾಯುನೆಲೆಯಿಂದ ನಿಯಮಿತ ತರಬೇತಿ ಹಾರಾಟಕ್ಕಾಗಿ ಟೇಕಾಫ್ ಆಗಿತ್ತು. ಜೋರ್ಹತ್‌ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಕರ್ಬಿ ಆಂಗ್ಲಾಂಗ್‌ನ ಗುಡ್ಡಗಾಡು ಪ್ರದೇಶದಲ್ಲಿ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ತರಬೇತಿ ಹಾರಾಟ ಸಮಯದಲ್ಲಿ ಸುಖೋಯ್ ಯುದ್ಧ ವಿಮಾನದೊಂದಿಗೆ ರಾಡಾರ್ ಸಂಪರ್ಕ ಕಳೆದುಕೊಂಡಿತ್ತು. ಆದಾಗ್ಯೂ, ಜೋರ್ಹತ್ ವಾಯುನೆಲೆಯಿಂದ ಹೊರಟ ವಿಮಾನವು ಕೊನೆಯದಾಗಿ ವಾಯುಪಡೆಯೊಂದಿಗೆ ಸಂಜೆ 7:42 ಕ್ಕೆ ಸಂವಹನ ನಡೆಸಿತು ಎಂದು ತಿಳಿದು ಬಂದಿದೆ.
ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಒರಟಾದ ಭೂಪ್ರದೇಶದಲ್ಲಿರುವ ಅಪಘಾತದ ಸ್ಥಳದಲ್ಲಿ ವಿಮಾನ ಮತ್ತು ಪೈಲಟ್ಗಳ ಹುಡುಕಾಟವನ್ನು ನಡೆಸಲಾಗತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದರು.
20 ರ ದಶಕದ ಆರಂಭದಲ್ಲಿ ವಾಯುಪಡೆಯೊಂದಿಗೆ ಸೇವೆಗೆ ಸೇರಿದ ಸುಖೋಯ್ ವಿಮಾನವನ್ನು ಅತ್ಯಂತ ಸಮರ್ಥ ಮುಂಚೂಣಿಯ ಯುದ್ಧ ವಿಮಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ವಿಮಾನವನ್ನು ರಷ್ಯಾ ಅಭಿವೃದ್ಧಿಪಡಿಸಿದ್ದು, ಭಾರತೀಯ, ಫ್ರೆಂಚ್ ಮತ್ತು ಇಸ್ರೇಲ್ ಏವಿಯಾನಿಕ್ಸ್ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮಿಶ್ರಣವಾಗಿದೆ (ಏಜೆನ್ಸೀಸ್).