1984 ರಲ್ಲಿ ನಡೆದಿದ್ದ ಸಿಖ್​ ವಿರೋಧಿ ಗಲಭೆ, ಸಜ್ಜನ್​ ಕುಮಾರ್ 
ದೇಶ

1984 ರ ಸಿಖ್ ಗಲಭೆ ಪ್ರಕರಣ: ಕಾಂಗ್ರೆಸ್​ ಮಾಜಿ ಸಂಸದ ಸಜ್ಜನ್ ಕುಮಾರ್‌ಗೆ ರಿಲೀಫ್; ಪ್ರಾಸಿಕ್ಯೂಷನ್ ವಿಫಲ ಎಂದ ನ್ಯಾಯಾಲಯ | Sikh Riots

ಪ್ರಮುಖ ಮುಖ್ಯಾಂಶಗಳು

  • 1984 ರಲ್ಲಿ ನಡೆದಿದ್ದ ಸಿಖ್​ ವಿರೋಧಿ ಗಲಭೆ
  • ದೆಹಲಿಯ ಜನಕಪುರಿಯಲ್ಲಿ ನಡೆದಿದ್ದ ಗಲಭೆಯ ಪ್ರಮುಖ ಆರೋಪಿ ಸಜ್ಜನ್​ ಕುಮಾರ್​
  • ಸಜ್ಜನ್​ ಕುಮಾರ್​ ಕಾಂಗ್ರೆಸ್​ ಪಕ್ಷದ ಮಾಜಿ ಸಂಸದ
  • ಪ್ರಾಸಿಕ್ಯೂಷನ್​​ ಸರಿಯಾದ ಸಾಕ್ಷ್ಯಾಧಾರವನ್ನು ಒದಗಿಸುವಲ್ಲಿ ವಿಫಲ
ನವದೆಹಲಿ: 1984ರ ಸಿಖ್ ವಿರೋಧಿ ಗಲಭೆ (Sikh Riots) ವೇಳೆ ದೆಹಲಿಯ ಜನಕಪುರಿಯಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿಯಾಗಿದ್ದ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್​ನನ್ನು ಪ್ರಕರಣದಿಂದ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಖುಲಾಸೆಗೊಳಿಸಿದೆ.
ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯ ನೇರ ಭಾಗವಹಿಸುವಿಕೆಯನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಆರೋಪಿ ಕೃತ್ಯನಡೆದ ಸ್ಥಳದಲ್ಲಿ ಹಾಜರಿದ್ದರು ಅಥವಾ ಅವರನ್ನು ಯಾರಾದರೂ ನೋಡಿದ್ದರು ಎಂಬುದಕ್ಕೆ ವಿಶ್ವಾಸಾರ್ಹ ಸಾಕ್ಷ್ಯ ಇಲ್ಲ. ಜತೆಗೆ ಉದ್ವಿಗ್ನಗೊಂಡಿದ್ದ ಗುಂಪಿಗೆ ಸಜ್ಜನ್ ಕುಮಾರ್​ ಅವರೇ ಪ್ರಚೋದನೆ ನೀಡಿದ್ದಾರೆ ಎನ್ನುವುದಕ್ಕೂ ಯಾವುದೇ ಸಾಕ್ಷ್ಯ ಇಲ್ಲ, ಹೀಗಾಗಿ ಇವರನ್ನು ಈ ಪ್ರಕರಣದಿಂದ ಖುಲಾಸೆ ಮಾಡಲಾಗುವುದು ಎಂದು ನ್ಯಾಯಾಲಯದ ನ್ಯಾಯಾಧೀಶ ದಿಗ್‌ ವಿನಯ್‌ ಸಿಂಗ್‌ ಹೇಳಿದರು.
ಆರೋಪಿಯು ಮಾಜಿ ಸಂಸದನಾಗಿರುವುದರಿಂದಲೋ ಅಥವಾ ಇತರ ಸ್ಥಳಗಳಲ್ಲಿ ನಡೆದ ಸಮಾನ ಘಟನೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆಂಬ ಕಾರಣದಿಂದಲೋ, ಈ ಪ್ರಕರಣದಲ್ಲಿ ಅವರನ್ನು ತಪ್ಪಿತಸ್ಥನೆಂದು ಘೋಷಿಸಲು ಅಗತ್ಯವಿರುವ ಸಾಕ್ಷ್ಯದ ಮಾನದಂಡವನ್ನು ಈ ನ್ಯಾಯಾಲಯ ಕಡಿಮೆ ಮಾಡಲಾಗುವುದಿಲ್ಲ. ಅವರು ಸಾಮಾನ್ಯ ವ್ಯಕ್ತಿಗಳಾಗಿರಲಿ ಅಥವಾ ಪ್ರಭಾವಿ ವ್ಯಕ್ತಿಗಳಾಗಿರಲಿ ಕಾನೂನು ಎಲ್ಲ ಅಪರಾಧಿಗಳಿಗೆ ಒಂದೇ ಎಂದು ನ್ಯಾಯಪೀಠ ಹೇಳಿತು.
ಹಿಂಸಾಚಾರದಿಂದ ಸಿಖ್ಖ ಸಮುದಾಯ ಮತ್ತು ಅವರ ಕುಟುಂಬ ವರ್ಗ ಅನುಭವಿಸಿದ ಆಘಾತವನ್ನು ನ್ಯಾಯಾಲಯ ಅರ್ಥಮಾಡಿಕೊಂಡರೂ, ಭಾವನೆಗಳ ಆಧಾರದ ಮೇಲೆ ತೀರ್ಪನ್ನು ನೀಡಲು ಸಾದ್ಯವಿಲ್ಲ. ನ್ಯಾಯಾಲಯದ ತೀರ್ಪುಗಳು ಅಪರಾಧಿಯ ವಿಚಾರಣೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ನಿರ್ಧರಿತವಾಗಿರುತ್ತದೆ ಎಂದು ಹೇಳಿತು.
2015ರಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ ಪ್ರಕರಣವನ್ನು ಮರುತನಿಖೆ ನಡೆಸಿ 2022ರಲ್ಲಿ ಆರೋಪಪಟ್ಟಿ ಸಲ್ಲಿಸಿತ್ತು. ತನಿಖೆ ಕಾನೂನುಬದ್ಧವಾಗಿದ್ದರೂ, ದೋಷಾರೋಪಣೆಗೆ ಅಗತ್ಯವಿರುವ ಮಟ್ಟದ ಸಾಕ್ಷ್ಯ ದೊರಕಿಲ್ಲ ಎಂದು ನ್ಯಾಯಾಲಯ ಅಂತಿಮವಾಗಿ ತೀರ್ಪು ನೀಡಿದೆ. ಸಜ್ಜನ್ ಕುಮಾರ್ ಅವರು 1984ರ ಗಲಭೆಗಳಿಗೆ ಸಂಬಂಧಿಸಿದ ಇತರ ಎರಡು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದು, ಪ್ರಸ್ತುತ ತಿಹಾರ್ ಜೈಲಿನಲ್ಲಿ ಇದ್ದಾರೆ,(ಏಜನ್ಸೀಸ್).