MP High Court 
ದೇಶ

ಗಂಡನಿಗೆ 40 ವರ್ಷ ನನಗಿನ್ನು 19 ಅವ್ರ ಜೊತೆ ಬದುಕಲ್ಲ ಎಂದ ಯುವತಿ; ಪ್ರೇಮಿ ಜೊತೆ ಜೀವಿಸಲು ಅವಕಾಶ ಕೊಟ್ಟ ಕೋರ್ಟ್..MP High Court

ಪ್ರಮುಖ ಮುಖ್ಯಾಂಶಗಳು

  • ಪ್ರೇಮಿಯೊಂದಿಗೆ ಜೀವನ ನಡೆಸಲು ಒಪ್ಪಿಗೆ ಕೊಟ್ಟ ಮಧ್ಯಪ್ರದೇಶದ ಹೈಕೋರ್ಟ್​
  • ಪತ್ನಿ ಪ್ರೇಮಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಕೋರ್ಟ್​ ಮೆಟ್ಟಿಲೇರಿದ್ದ ಪತಿ
  • ನನಗೆ ಪತಿಗೆ 21 ವರ್ಷ ಅಂತವಿದೆ, ಬದುಕಲು ಆಗುತ್ತಿಲ್ಲ ಎಂದು ಕೋರ್ಟ್​ ಮುಂದೆ ಹೇಳಿದ ಯುವತಿ
ಗ್ವಾಲಿಯರ್​: "ನನಗೆ ಮತ್ತು ನನ್ನ ಪತಿ ಮಧ್ಯೆ 21 ವರ್ಷಗಳ ಗ್ಯಾಪ್​ ಇದೆ. ಅವರೊಟ್ಟಿಗೆ ಬದುಕಲು ನನ್ನಿಂದ ಸಾಧ್ಯವಿಲ್ಲ. ಇಬ್ಬರ ಆಲೋಚನೆಗಳು ಸರಿ ಹೊಂದಲ್ಲ.ಈ ಮದುವೆ ನನ್ನಿಚ್ಛೆಯಂತೆ ನಡೆದಿಲ್ಲ. ಹೀಗೆಂದು ಮಧ್ಯಪ್ರದೇಶದ ಹೈ ಕೋರ್ಟ್(Madhya Pradesh High Court)​ ಆವರಣದಲ್ಲಿ ದಿಟ್ಟತನದಿಂದ ಮಾತನಾಡಿದ್ದು 19 ವರ್ಷದ ಯುವತಿ.
 ನನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಮಧ್ಯಪ್ರದೇಶದ ಕೋರ್ಟ್​ ಮೆಟ್ಟಿಲೇರಿದ್ದ 40ರ ವ್ಯಕ್ತಿಗೆ ಸದ್ಯ ಹಿನ್ನಡೆಯಾಗಿದ್ದು, 19 ವರ್ಷದ ಯುವತಿ ತನ್ನ ಪ್ರಿಯಕರನೊಂದಿಗೆ ಬದುಕಲು ಅವಕಾಶ ನೀಡುವ ಮೂಲಕ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳುವ  ಹಕ್ಕನ್ನು ಕೋರ್ಟ್​ ಎತ್ತಿಹಿಡಿದಿದೆ. 

ಏನಿದು ಘಟನೆ?

40 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನ ವಿರುದ್ಧ  ಬಂದಿ ಪ್ರತ್ಯಕ್ಷೀಕರಣ (ಹೆಬಿಯಾಸ್ ಕಾರ್ಪಸ್) ಅರ್ಜಿ ಸಲ್ಲಿಸಿದ್ದರು. ಅನುಜ್​ ಕುಮಾರ್​ ಎಂಬ ವ್ಯಕ್ತಿ ನನ್ನ ಪತ್ನಿಯನ್ನು ತನ್ನ ಜೊತೆ ಅಕ್ರಮವಾಗಿ ಇರಿಸಿಕೊಂಡಿದ್ದಾನೆ. ಆಕೆ ಎಲ್ಲಿದ್ದಾಳೋ ತಿಳಿದಿಲ್ಲ ಎಂದು ಕೋರ್ಟ್​ ಮೆಟ್ಟಿಲೇರಿದರು. ಪೊಲೀಸರು 19 ವರ್ಷದ ಯುವತಿ ಎಲ್ಲಿದ್ದಾಳೆ ಎನ್ನುವುದನ್ನು ಪತ್ತೆ ಹಚ್ಚಿ  'ಒನ್-ಸ್ಟಾಪ್ ಸೆಂಟರ್'ನಲ್ಲಿ ಇರಿಸಿದ್ದರು.  ಆ ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.  
ಈ ಅರ್ಜಿ ವಿಚಾರಣೆಯನ್ನು  ನ್ಯಾಯಮೂರ್ತಿಗಳಾದ ಆನಂದ್​ ಪಾಠಕ್​ ಮತ್ತು ಪುಷ್ಪೇಂದ್ರ ಯಾದವ್​ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಅವರ ಮುಂದೆ ಯುವತಿ ಹಾಜರಾಗಿ ಯಾವುದೇ ಮುಜುಗರವಿಲ್ಲದೆ, ಆತಂಕಕ್ಕೆ ಒಳಗಾಗದೆ ತನ್ನ ನಿರ್ಧಾರವನ್ನು ನ್ಯಾಯಾಧೀಶರ ಮುಂದಿಟ್ಟಳು.

ಆಕೆ ಹೇಳಿದ್ದೇನು?

"ಸರ್ ನನಗೆ 19 ವರ್ಷ ಹಾಗೂ ನನ್ನ ಪತಿಗೆ 40 ವರ್ಷ. ನಮ್ಮಿಬ್ಬರ ಮಧ್ಯೆ 21 ವರ್ಷ ಗ್ಯಾಪ್​ ಇದೆ.  ನಾವು ವೈವಾಹಿಕ ಜೀವನ ನಡೆಸೋದಾದರೂ ಹೇಗೆ ಹೇಳಿ. ನನಗೆ ಅವರೊಂದಿಗೆ ಬದುಕಲು ಸಾಧ್ಯ ಇಲ್ಲ. ಈ ಮದುವೆ ನನ್ನಿಷ್ಟದಂತೆ ನಡೆದಿಲ್ಲ. ನನ್ನ ಪತಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ" ಎಂದು ಮಧ್ಯಪ್ರದೇಶದ ಕೋರ್ಟ್​ ಮುಂದೆ ದಿಟ್ಟತನದಿಂದ ಹೇಳಿಕೊಂಡಿದ್ದಾರೆ.
"ನಾನೀಗ ನನ್ನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಷ್ಟು ವಯಸ್ಕಳಾಗಿದ್ದೇನೆ. ನಾನು ನನ್ನಿಷ್ಟದಂತೆ ಬದುಕಲು ಇಚ್ಛಿಸುತ್ತೇನೆ.  ಸ್ವಂತ ಇಚ್ಛೆಯಂತೆ ಬದುಕುತ್ತಿದ್ದೇನೆ. ನಾನು ನನ್ನ ಪೋಷಕರ ಜೊತೆ ಅಥವಾ ಪತಿ ಜೊತೆ ಇರೋದಿಲ್ಲ.  ಹೀಗಾಗಿ ನಾನು ನನ್ನ ಪ್ರಿಯತಮನ ಸೇರುತ್ತೇನೆ" ಎಂದು  ದೃಢವಾಗಿ ತನ್ನ ನಿರ್ಧಾರವನ್ನು ತಿಳಿಸಿದ್ದಾಳೆ. 

ಕೋರ್ಟ್​ನಿಂದ ಯುವಜೋಡಿಗೆ ರಕ್ಷಣೆ

ಈ ಘಟನೆ ನಂತರ ಕೋರ್ಟ್​  ಆಕೆಯ ಮನವೊಲಿಸಲು ಕೌನ್ಸಲಿಂಗ್ ಕೊಡಿಸಿತು. ಆಗಲೂ ಯಾವುದೇ ಬದಲಾವಣೆ ಕಾಣದಿದ್ದ ಕಾರಣಕ್ಕೆ ಆಕೆಯ ಪ್ರಿಯಕರನ ಜೊತೆಗೆ ಬದುಕಲು ಒಪ್ಪಿಗೆ ನೀಡಿದೆ. ಈ ವೇಳೆ ಆಕೆಯ ಪ್ರಿಯಕರ ಸಹ ಕೋರ್ಟ್​ಗೆ ಹಾಜರಾಗಿ, ಯುವತಿಯನ್ನು ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾನೆ.
ಯಾವುದೇ ಒತ್ತಡಕ್ಕೆ ಒಳಗಾಗದೇ ಯುವತಿ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿಕೊಂಡ ನಂತರ, ಆಕೆಯನ್ನು ಪ್ರೇಮಿಯೊಂದಿಗೆ ತೆರಳಲು ಅನುಮತಿ ನೀಡಿದೆ. ಜೊತೆಗೆ ಅವರಿಬ್ಬರ ಸುರಕ್ಷತೆಗಾಗಿ ಆರುತಿಂಗಳ ಕಾಲ ಶೌರ್ಯ ದೀದಿ ಎನ್ನುವ  ನಿಯೋಜಿತ ಅಧಿಕಾರಿಗಳ ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗಿದೆ. ಅವರು ಯುವತಿಯ ಯೋಗಕ್ಷೇಮವನ್ನು ವಿಚಾರಿಸುತ್ತಾರೆ, (ಏಜೆನ್ಸೀಸ್).