(ಚಿತ್ರ X) 
ದೇಶ

400 ಮೀಟರ್​ಗೆ 18 ಸಾವಿರ ಬಾಡಿಗೆಯಂತೆ!...ಹಗಲು ದರೋಡೆಗೆ ಇಳಿದ ಮುಂಬೈ ಟ್ಯಾಕ್ಸಿ ಚಾಲಕ! Taxi Driver

ಪ್ರಮುಖ ಮುಖ್ಯಾಂಶಗಳು

  • ಮುಂಬೈ ನಗರವು ತನ್ನ ವೇಗದ ಜೀವನಶೈಲಿ ಮತ್ತು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ
  • ಇತ್ತೀಚಿಗೆ ನಡೆದ ಘಟನೆಯೊಂದು ಪ್ರವಾಸೋದ್ಯಮದ ಮೇಲೆ ಕಪ್ಪು ಚುಕ್ಕೆ ಇಟ್ಟಿದೆ
  • ಪ್ರವಾಸಿಗನೊಬ್ಬ ಕೇವಲ 400 ಮೀಟರ್​ ದೂರದ ಪ್ರಯಾಣಕ್ಕಾಗಿ 18,000 ರೂಗಳನ್ನು ಪಾವತಿಸಿದ್ದಾರೆ
ಮುಂಬೈ: ಮುಂಬೈ ನಗರವು ತನ್ನ ವೇಗದ ಜೀವನಶೈಲಿ ಮತ್ತು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇತ್ತೀಚಿಗೆ ನಡೆದ ಘಟನೆಯೊಂದು ಪ್ರವಾಸೋದ್ಯಮದ ಮೇಲೆ ಕಪ್ಪು ಚುಕ್ಕೆ ಇಟ್ಟಿದೆ. ಅದೇನಂತೀರಾ..? ಮುಂಬೈಗೆ ಆಗಮಿಸಿದ ವಿದೇಶಿ ಪ್ರವಾಸಿಗನೊಬ್ಬ ಕೇವಲ 400 ಮೀಟರ್​ ದೂರದ ಪ್ರಯಾಣಕ್ಕಾಗಿ ಟ್ಯಾಕ್ಸಿ ಚಾಲಕನಿಗೆ (Taxi Driver) ಬರೋಬ್ಬರಿ 18,000 ರೂಗಳನ್ನು ಪಾವತಿಸಿದ್ದು, ಈ ಆಘಾತಕಾರಿ ಸುದ್ಧಿಯು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಘಟನೆ ಏನು?

ವಿದೇಶಿ ಪ್ರವಾಸಿಯೊಬ್ಬರು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದು ತಾನು ತಂಗಬೇಕಿದ್ದ ಹೋಟೆಲ್​ಗೆ ಹೋಗಲು ಟ್ಯಾಕ್ಸಿ ಹತ್ತಿದರು. ವಾಸ್ತವವಾಗಿ, ಆ ಹೋಟೆಲ್ ವಿಮಾನ ನಿಲ್ದಾಣದಿಂದ ಕೇವಲ 400 ಮೀಟರ್ ದೂರದಲ್ಲಿತ್ತು. ಅಲ್ಲಿಗೆ ನಡೆದುಕೊಂಡು ಹೋದರೂ 10 ನಿಮಿಷದಲ್ಲಿ ತಲುಪಬಹುದಿತ್ತು. ಆದರೆ, ಹತ್ತಿರದಲ್ಲಿ ಇರುವ ಹೋಟೆಲ್​ಗೆ ಚಾಲಕನು ಪ್ರವಾಸಿಯನ್ನು ದಾರಿ ತಪ್ಪಿಸಿ ಕರೆದೊಯ್ದಿದ್ದಾನೆ ಎಂದು ಆರೋಪ ಮಾಡಿದ್ದಾರೆ.
ಪ್ರವಾಸಿಗನಿಗೆ ಮುಂಬೈ ರಸ್ತೆಗಳ ಪರಿಚಯವಿಲ್ಲದ ಕಾರಣ ಮತ್ತು ಭಾಷೆಯ ಸಮಸ್ಯೆಯಿಂದಾಗಿ ಪ್ರಯಾಣಿಕನನ್ನು ಸುತ್ತಿ ಬಳಸಿ ಕರೆದೊಯ್ದಿದ್ದಾನೆ. ಅಂತಿಮವಾಗಿ ಹೋಟೆಲ್​ ತಲುಪಿಸಿದಾಗ, ಆತ ವಿಮಾನ ನಿಲ್ದಾಣದ ಪ್ರವೇಶ ಶುಲ್ಕ, ಪಾರ್ಕಿಂಗ್ ಮತ್ತು ವಿಶೇಷ ತೆರಿಗೆಗಳ ನೆಪ ಹೇಳಿ ಬರೋಬ್ಬರಿ 18,000 ರೂ. ಬಿಲ್ ಪಾವತಿಸುವಂತೆ ಒತ್ತಾಯಿಸಿದ್ದಾನೆ. ಪ್ರವಾಸಿಗನು ಬೇರೆ ಮಾರ್ಗವಿಲ್ಲದೇ ಹಣ ಪಾವತಿಸಿದ್ದಾನೆ.
ಈ ಘಟನೆಯನ್ನು ಪ್ರವಾಸಿ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಮುಂಬೈನ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಹಿಲ್ಟನ್ ಹೋಟೆಲ್‌ಗೆ ಟ್ಯಾಕ್ಸಿ ತೆಗೆದುಕೊಂಡೆ. ಆದರೆ, ಚಾಲಕನು ನೇರವಾಗಿ ಕರೆದುಕೊಂಡು ಹೋಗುವ ಬದಲು, ಕ್ಯಾಬ್​ನಲ್ಲಿದ್ದ ಮತ್ತೊಂದು ಮಹಿಳೆಯನ್ನು ಬೇರೊಂದು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಿಟ್ಟು ನಂತರ ನನ್ನನ್ನು ಹೋಟೆಲ್​ಗೆ ಇಳಿಸಿ ಸುಮಾರು 18,000 ರೂ ಮೊತ್ತವನ್ನು ವಿಧಿಸಿದರು ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.
ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ, ಪ್ರತಿಕ್ರಿಯಿಸಿದ ಮುಂಬೈ ಪೊಲೀಸರು ನಾವು ನಿಮ್ಮನ್ನು ಅನುಸರಿಸಿದ್ದೇವೆ. ದಯವಿಟ್ಟು ನಿಮ್ಮ ಸಂಪರ್ಕ ಮತ್ತು ವಿವರಗಳನ್ನು ಡಿಎಂನಲ್ಲಿ ಹಂಚಿಕೊಳ್ಳಿ ಎಂದು ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಪ್ರವಾಸಿಗನು ಈ ಕಹಿ ಅನುಭವವನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಈ ವಂಚನೆ ಬೆಳಕಿಗೆ ಬಂದಿದೆ. ನಾನು ಮುಂಬೈಗೆ ಪ್ರೀತಿಯಿಂದ ಬಂದಿದ್ದೆ, ಆದರೆ ಇಂತಹ ದರೋಡೆಕೋರ ಚಾಲಕರಿಂದಾಗಿ ಪ್ರವಾಸಿಗರಿಗೆ ಭಯವಾಗುತ್ತದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಆದಾಗ್ಯೂ, ಬಳಕೆದಾರರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರವಾಸೋದ್ಯಮ ಇಲಾಖೆ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ (ಏಜೆನ್ಸೀಸ್​).