ಲಖನೌ: ಉತ್ತರ ಪ್ರದೇಶದ ಲಖನೌದ ರಾಷ್ಟ್ರೀಯ ಪ್ರೇರಣಾ ಸ್ಥಳ ಬಳಿ ಸುಮಾರು 170 ಕುರಿಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಸಿಎಂ ಯೋಗಿ ಆದಿತ್ಯನಾಥ್(CM Yogi Adityanath) ಪ್ರತಿ ಕುರಿಗೆ 10 ಸಾವಿರ ಪರಿಹಾರ ನೀಡಿ, ಸಾವಿಗೆ ಕಾರಣ ತಿಳಿಯುವಂತೆ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಮಂಗಳವಾರ(ಡಿ. 30) ವರದಿಯಾಗಿದೆ.
ಇನ್ನೂ ಕುರಿಗಳ ಸಾವಿಗೆ ರೋಗ, ವಿಷಪ್ರಾಶನ ಅಥವಾ ನಿರ್ಲಕ್ಷ್ಯ ಕಾರಣದಿಂದ ಮೃತಪಟ್ಟಿರುವ ಸಾಧ್ಯತೆಯಿರುವ ಕಾರಣ ಪೊಲೀಸರು ಮಾದರಿಗಳನ್ನು ಸಂಗ್ರಹಿಸಿದ ಪರೀಕ್ಷೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಪ್ರೇರಣಾ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ಕಾರ್ಯಕ್ರಮ ನಡೆದ ಕೆಲವು ದಿನಗಳ ನಂತರ ಸುಮಾರು 170 ಕುರಿಗಳು ಹಠಾತ್ತನೆ ಸಾವನ್ನಪ್ಪಿವೆ ಎಂದು ಆಸ್ರಾ ದಿ ಹೆಲ್ಪಿಂಗ್ ಹ್ಯಾಂಡ್ಸ್ ಟ್ರಸ್ಟ್ ಸಂಸ್ಥಾಪಕ ಚಾರು ಖರೆ ಮಡಿಯಾನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಅವರು, ಪ್ರಾಥಮಿಕವಾಗಿ ಕುರಿಗಳು ತ್ಯಾಜ್ಯ ವಸ್ತುಗಳನ್ನು ಸೇವಿಸಿ ಸತ್ತಿವೆಯೇ ಅಥವಾ ಅಪರಿಚಿತ ವ್ಯಕ್ತಿಯೊಬ್ಬರು ಅವುಗಳಿಗೆ ವಿಷ ನೀಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ನಿಗೂಢ ಸಾವಿಗೆ ಕಾರಣವೇನೆಂದು ತಿಳಿಯಲು, ಕುರಿಗಳ ಮರಣೋತ್ತರ ಪರೀಕ್ಷೆ ನಡೆಸುವ ಜೊತೆ ತನಿಖೆ ನಡೆಸುವಂತೆ ದೂರು ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಅಥವಾ ವಿಷ ನೀಡಿರುವುದು ದೃಢಪಟ್ಟರೆ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತನಿಖೆಗೆ ನಮ್ಮ ಸಂಘಟನೆಯು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತದೆ. ಈ ಘಟನೆ ತುಂಬಾ ಗಂಭೀರ ಮತ್ತು ಸೂಕ್ಷ್ಮವಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).