Mobile Screen 
ದೇಶ

ಮೊಬೈಲ್ ಸ್ಕ್ರೀನ್ ಒಡೆದಿದ್ದರಿಂದ ವಿಷ ಸೇವಿಸಿದ 17ರ ಬಾಲಕ!

ಮಧ್ಯಪ್ರದೇಶ: ಮೊಬೈಲ್ ಫೋನ್‌ನ ಸ್ಕ್ರೀನ್ ಒಡೆದುಹೋದ ಕಾರಣಕ್ಕೆ, ಹಾಗೂ ಅದನ್ನು ಸರಿಪಡಿಸಲು ತಾಯಿ ಹಣ ನೀಡಲಿಲ್ಲ ಎಂಬ ಬೇಸರದಲ್ಲಿ 17 ವರ್ಷದ ಬಾಲಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಛತ್ತರ್‌ಪುರ ಜಿಲ್ಲೆಯಲ್ಲಿ  ಸೋಮವಾರ ನಡೆದಿದೆ. 
ಛತ್ತರ್‌ಪುರದ ಸಿವಿಲ್ ಲೈನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಹತ್ತನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕ ಮೊಬೈಲ್ ವ್ಯಸನಕ್ಕೆ ತೀವ್ರವಾಗಿ ತುತ್ತಾಗಿದ್ದ ಎನ್ನಲಾಗಿದೆ. ಇತ್ತೀಚೆಗೆ ಆತನ ಮೊಬೈಲ್ ಕೆಳಗೆ ಬಿದ್ದು ಸ್ಕ್ರೀನ್ ಒಡೆದು ಹೋಗಿತ್ತು. ಇದರಿಂದ ಫೋನ್ ಬಳಸಲು ಅಸಾಧ್ಯವಾಗಿತ್ತು. ಕೂಡಲೇ ಫೋನ್ ರಿಪೇರಿ ಮಾಡಿಸಿಕೊಡುವಂತೆ ಬಾಲಕ ತನ್ನ ತಾಯಿಯನ್ನು ಪೀಡಿಸಿದ್ದಾನೆ. ಆದರೆ, ಮನೆಯಲ್ಲಿ ಸದ್ಯಕ್ಕೆ ಹಣದ ಅಭಾವವಿದ್ದ ಕಾರಣ, "ಈಗ ಹಣವಿಲ್ಲ, ಸ್ವಲ್ಪ ದಿನ ಬಿಟ್ಟು ಸರಿಪಡಿಸಿಕೊಡುತ್ತೇನೆ" ಎಂದು ತಾಯಿ ಹೇಳಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಬಾಲಕ, ಕ್ಷಣಿಕ ಆವೇಶದಲ್ಲಿ ಮನೆಯಲ್ಲಿದ್ದ ಇಲಿ ಪಾಷಾಣವನ್ನು (ವಿಷ) ಸೇವಿಸಿದ್ದಾನೆ.
ಪ್ರಾಣಾಪಾಯದಿಂದ ಪಾರು: ವಿಷ ಸೇವಿಸಿದ ನಂತರ ಬಾಲಕನ ಆರೋಗ್ಯ ಹದಗೆಟ್ಟಿರುವುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಸಕಾಲಕ್ಕೆ ಚಿಕಿತ್ಸೆ ಲಭಿಸಿದ್ದರಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಾನು ಮಾಡಿದ್ದು ತಪ್ಪು ಎಂದು ಬಾಲಕ ಈಗ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ,(ಏಜೆನ್ಸೀಸ್​).