ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಬಿಸಿಲಿನ ಕಾರಣಕ್ಕೆ 15 ವರ್ಷದ ಬಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಆಟವಾಡಲು ಹೋಗಬೇಡ ಎಂದು ತಾಯಿ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬುಧವಾರ(ಜ. 21) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಭಾನುವಾರ ಕೈಜ್ನಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ 10 ಗಂಟೆ ಸುಮಾರಿಗೆ 9 ನೇ ತರಗತಿ ವಿದ್ಯಾರ್ಥಿಯಾಗಿದ್ದ ಆ ಹುಡುಗನ ಸ್ನೇಹಿತನೊಬ್ಬ ಅವನ ಮನೆಗೆ ಬಂದು ಆಟವಾಡಲು ಒತ್ತಾಯಿಸಿದ್ದ. ಆದರೆ ಬಿಸಿಲಿರುವ ಕಾರಣ ಮನೆಯೊಳಗೆ ಇರು ಸಂಜೆ 4 ಗಂಟೆ ಬಳಿಕ ಹೋಗು ಎಂದು ತಾಯಿ ಹೇಳಿದ್ದಾರೆ.
ಹೀಗಾಗಿ ಸ್ನೇಹಿತನ ಮುಂದೆ ಆಟವಾಡಲು ಕಳಿಸದಿದ್ದಕ್ಕೆ ನೊಂದ ಬಾಲಕ ಮನೆಯಲ್ಲಿ ತಂದೆ-ತಾಯಿ ಮಲಗುವ ಕೋಣೆಯಲ್ಲಿ ಒಳಗಿನಿಂದ ಬಾಗಿಲು ಹಾಕಿಕೊಂಡು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಅಡುಗೆ ಮನೆಯ ಕೆಲಸದಲ್ಲಿ ನಿರತರಾಗಿದ್ದ ತಾಯಿ ಮೊದಲಿಗೆ ಬಾಲಕನನ್ನು ಅಷ್ಟಾಗಿ ಗಮನಿಸಿರಲಿಲ್ಲ. ಮಧ್ಯಾಹ್ನ ಬಳಿಕ ಮಲಗುವ ಕೋಣೆ ಒಳಗಿನಿಂದ ಲಾಕ್ ಆಗಿರುವುದನ್ನು ನೋಡಿ ಬಾಗಿಲು ಬಡಿದಿದ್ದಾರೆ. ಎಚ್ಚರಗೊಂಡು ತಗೆಯದಿದ್ದ ಸಂದರ್ಭದಲ್ಲಿ ನರೆಯವರನ್ನು ಕರೆದು ಬಾಗಿಲು ಒಡೆದು ನೋಡಿದಾಗ ಬಾಲಕ ನೇಣುಬಿಗಿದುಕೊಂಡಿರುವುದು ಕಂಡಿದೆ.
ತಕ್ಷಣ ಬಾಲಕನನ್ನು ಕೈಜ್ನಲ್ಲಿರುವ ಉಪ-ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸ್ಥಿತಿ ಗಂಭೀರವಾಗಿದ್ದ ಕಾರಣ ದೂರದ 40 ಕಿಮೀ ದೂರದಲ್ಲಿರುವ ಅಂಬಾಜೋಗೈನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಈ ವೇಳೆ ಮಾರ್ಗಮಧ್ಯದಲ್ಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಕೈಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (ಏಜೆನ್ಸೀಸ್).