ದೆಹಲಿಯಲ್ಲಿ ಭಾರಿ ಮಳೆಗೆ ಜನರು ತತ್ತರ
- ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಭಾರಿ ಮಳೆ
- 2 ಅಂತಾರಾಷ್ಟ್ರೀಯ ಸೇರಿ ಒಟ್ಟು 15 ವಿಮಾನಗಳ ಮಾರ್ಗ ದಿಢೀರ್ ಬದಲಾವಣೆ
- 250ಕ್ಕೂ ಅಧಿಕ ವಿಮಾನಗಳ ವಿಳಂಬ, 15 ಮಾತ್ರ ರಾಜಸ್ಥಾನಕ್ಕೆ ಡೈವರ್ಟ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಸೋಮವಾರ (ಆ.24) ಮುಂಜಾನೆಯಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಭಾರಿ ಮಳೆಯಿಂದಾಗಿ 250ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ.ಈ ಪೈಕಿ, ಎರಡು ಅಂತಾರಾಷ್ಟ್ರೀಯ ಸೇರಿ ಒಟ್ಟು 15 ವಿಮಾನಗಳ ಮಾರ್ಗವನ್ನು ದಿಢೀರ್ ಬದಲಾವಣೆ ಮಾಡಲಾಗಿದೆ.
15 ವಿಮಾನಗಳ ಮಾರ್ಗ ದಿಢೀರ್ ಬದಲಾವಣೆ
ಮಳೆ ಹಾಗೂ ಗಾಳಿಯ ರಭಸಕ್ಕೆ ದೆಹಲಿಗೆ ಆಗಮಿಸಬೇಕಿದ್ದ ಎರಡು ಅಂತಾರಾಷ್ಟ್ರೀಯ ವಿಮಾನಗಳು ಸೇರಿದಂತೆ ಒಟ್ಟು 15 ವಿಮಾನಗಳ ಮಾರ್ಗವನ್ನು ದಿಢೀರ್ ಬದಲಾವಣೆ ಮಾಡಲಾಗಿದೆ. ಈ ಪೈಕಿ, 12 ಫ್ಲೈಟ್ಗಳನ್ನು ಜೈಪುರಕ್ಕೆ, ಎರಡು ಚಂಢಿಗಡ ಮತ್ತು ಒಂದು ಲಖನೌ ಏರ್ಪೋರ್ಟ್ಗೆ ಡೈವರ್ಟ್ ಮಾಡಲಾಗಿದೆ. ಪ್ರಯಾಣಿಕರು ಏರ್ಪೋರ್ಟ್ಗೆ ತೆರಳುವ ಮುನ್ನ ಆಯಾ ಸಂಸ್ಥೆಗಳನ್ನು ಸಂಪರ್ಕಿಸಿ ಸಮಯ ಪರಿಶೀಲಿಸಿಕೊಳ್ಳುವಂತೆ ಸೂಚಿಸಲಾಗಿದೆ.
ರೆಡ್, ಆರೆಂಜ್ ಅಲರ್ಟ್ ಘೋಷಣೆ
ದೆಹಲಿ-ಎನ್‌ಸಿಆರ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು, ಮಿಂಚು ಹಾಗೂ ಗಂಟೆಗೆ 40 ಕಿ.ಮೀ ವೇಗದಲ್ಲಿ ಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಇದೀಗ ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.ಈಗಾಗಲೇ ಬೆಳಗ್ಗೆಯಿಂದಲೇ ಸುರಿಯುತ್ತಿರುವ ಧಾರಕಾರ ಮಳೆಗೆ ನಗರದ ಮುಖ್ಯ ರಸ್ತೆಗಳು ಜಲಾವೃತಗೊಂಡಿದ್ದು, ಭಾರಿ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರು ಪರದಾಡುತ್ತಿದ್ದಾರೆ.
ಹೆಚ್ಚು ಮಳೆಯಾದ ಪ್ರದೇಶಗಳು
ಛತ್ತರ್‌ಪುರದಲ್ಲಿ ಗರಿಷ್ಠ 28 ಮಿ.ಮೀ ಮಳೆಯಾಗಿದ್ದರೆ, ಲೋಧಿ ರಸ್ತೆಯಲ್ಲಿ 24.6 ಮಿ.ಮೀ ಹಾಗೂ ಪೀತಾಂಪುರದಲ್ಲಿ 18.5 ಮಿ.ಮೀ ಮಳೆ ದಾಖಲಾಗಿದೆ. ಇನ್ನು, ದಕ್ಷಿಣ, ಪೂರ್ವ ದೆಹಲಿ, ಶಾಹದ್ರಾ, ಕೇಂದ್ರ ದೆಹಲಿ ಸೇರಿದಂತೆ ರಾಷ್ಟ್ರ ರಾಜಧಾನಿಯ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಈ ನಿಟ್ಟಿನಲ್ಲಿ, ವಾಹನ ಸವಾರರು ಮತ್ತು ಜನರು ಆದಷ್ಟು ಎಚ್ಚರಿಕೆಯಿಂದ ಇರಬೇಕಾಗಿ ತಿಳಿಸಲಾಗಿದೆ,(ಏಜೆನ್ಸೀಸ್).