ಬೀದಿ ನಾಯಿಗಳ ದಾಳಿಯಲ್ಲಿ ಮೃತಪಟ್ಟ 15 ಜಿಂಕೆಗಳು
- ಛತ್ತೀಸ್‌ಗಢದ ಅಂಬಿಕಾಪುರದ ಸಂಜಯ್ ವನ್ ವಾಟಿಕಾದಲ್ಲಿ ಬೀದಿ ನಾಯಿಗಳ ದಾಳಿ
- ದಾಳಿಯಲ್ಲಿ ಮೃತಪಟ್ಟ 15 ಜಿಂಕೆಗಳು
- ಅರಣ್ಯಾಧಿಕಾರಗಳ ಅಮಾನತ್ತು
ಅಂಬಿಕಾಪುರ: ಛತ್ತೀಸ್‌ಗಢದ ಅಂಬಿಕಾಪುರದಿಂದ ಮನಕಲಕುವ ಸುದ್ದಿಯೊಂದು ಹೊರಬಿದ್ದಿದೆ. ಪ್ರಾಣಿಗಳ ರಕ್ಷಣೆ ಮಾಡಬೇಕಿದ್ದ ಕೇಂದ್ರವೇ ಈಗ ಅವುಗಳ ಪಾಲಿಗೆ ಮಸಣವಾಗಿ ಮಾರ್ಪಟ್ಟಿದೆ. ಸುರ್ಗುಜಾ ಜಿಲ್ಲೆಯ ಸಂಜಯ್ ವನ್ ವಾಟಿಕಾ ಎಂಬ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಬೀದಿ ನಾಯಿಗಳ (Deer Killed by Stray Dogs) ಹಿಂಡು ದಾಳಿ ನಡೆಸಿದ ಪರಿಣಾಮ, ಬರೋಬ್ಬರಿ 15 ಮುಗ್ಧ ಜಿಂಕೆಗಳು ಪ್ರಾಣ ಕಳೆದುಕೊಂಡಿವೆ.
ನಡುರಾತ್ರಿ ನಡೆದಿದ್ದೇನು?
ಶುಕ್ರವಾರ (ಮಾರ್ಚ್ 20) ಮತ್ತು ಶನಿವಾರ (ಮಾರ್ಚ್ 21) ದ ಮಧ್ಯರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ಭೀಕರ ಘಟನೆ ಸಂಭವಿಸಿದೆ. ಹಸಿರು ಕಾಡಿನ ನಡುವೆ ನೆಮ್ಮದಿಯಿಂದ ಇದ್ದ ಜಿಂಕೆಗಳ ಆವರಣಕ್ಕೆ ಪಕ್ಕದ ಕಾಡಿನಿಂದ ನುಗ್ಗಿದ ಐದಾರು ಬೀದಿ ನಾಯಿಗಳ ಹಿಂಡು ಒಮ್ಮೆಲೇ ದಾಳಿ ಮಾಡಿವೆ. ಜಿಂಕೆಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ನಾಯಿಗಳ ಹಿಂಡು ಅವುಗಳನ್ನು ಬೇಟೆಯಾಡಿವೆ.
ವರದಿಗಳ ಪ್ರಕಾರ, ಶನಿವಾರದ ವೇಳೆಗೆ ಚುಕ್ಕೆ ಜಿಂಕೆ, ಬೊಗಳುವ ಜಿಂಕೆ ಸೇರಿದಂತೆ ಒಟ್ಟು 14 ಪ್ರಾಣಿಗಳು ನಾಯಿ ಕಡಿತದಿಂದ ಮೃತಪಟ್ಟಿದ್ದವು. ಭಾನುವಾರ (ಮಾರ್ಚ್ 22) ತೀವ್ರವಾಗಿ ಗಾಯಗೊಂಡಿದ್ದ ಮತ್ತೊಂದು ಜಿಂಕೆ ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಿತ್ತು ಬಿಸಿ!
ಮೃಗಾಲಯದ ಮಾದರಿಯಲ್ಲಿರುವ ಈ ವನ್ ವಾಟಿಕಾವನ್ನು ಅರಣ್ಯ ಇಲಾಖೆಯೇ ನಿರ್ವಹಿಸುತ್ತದೆ. ಅಷ್ಟು ದೊಡ್ಡ ಆವರಣದೊಳಗೆ ನಾಯಿಗಳು ಹೇಗೆ ನುಗ್ಗಿದವು? ಅಲ್ಲಿನ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು? ಎಂಬ ಪ್ರಶ್ನೆಗಳು ಎದ್ದಿವೆ. ಈ ದೊಡ್ಡ ಮಟ್ಟದ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ಘಟನೆಗೆ ಸಂಬಂಧಿಸಿದಂತೆ ಉಪ ರೇಂಜರ್ ಅಶೋಕ್ ಸಿನ್ಹಾ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿದೆ. ಅಂಬಿಕಾಪುರ ಅರಣ್ಯ ರೇಂಜರ್ ಅವರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ತನಿಖೆಗೆ ಆದೇಶ
ಜಿಂಕೆಗಳ ಮರಣೋತ್ತರ ಪರೀಕ್ಷೆ ಮುಗಿದಿದ್ದು, ನಿಯಮದಂತೆ ಅವುಗಳ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಸುರ್ಗುಜಾ ವಿಭಾಗೀಯ ಅರಣ್ಯ ಅಧಿಕಾರಿ ಅಭಿಷೇಕ್ ಜೋಗಾವತ್ ಅವರು ಈ ಬಗ್ಗೆ ಮಾತನಾಡಿ, ಘಟನೆಯ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಬೇಲಿಯ ರಕ್ಷಣೆ ಮತ್ತು ಸಿಬ್ಬಂದಿಯ ಕರ್ತವ್ಯ ಲೋಪದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ತಿಳಿಸಿದ್ದಾರೆ, (ಏಜನ್ಸೀಸ್).