Alappuzha Murder ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಆಲಪ್ಪುಳ ಜಿಲ್ಲೆಯ ಹರಿಪ್ಪಾಡ್ ಬಳಿಯ ಕರುವಾಟ್ಟಾದಲ್ಲಿ ನಡುಕ ಹುಟ್ಟಿಸುವ ಘಟನೆಯೊಂದು (
ಬೆಳಕಿಗೆ ಬಂದಿದೆ. 67 ವರ್ಷದ ವೃದ್ಧನೊಬ್ಬನ ರಹಸ್ಯ ಕೊಲೆಯ ತನಿಖೆ ನಡೆಸಿದ ಪೊಲೀಸರಿಗೆ, ಅವರ 13 ವರ್ಷದ ಮೊಮ್ಮಗಳೇ ಈ ಇಡೀ ಕೃತ್ಯದ ಮಾಸ್ಟರ್ ಪ್ಲಾನ್ ರೂಪಿಸಿದ್ದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಮ್ಮಗಳು ಸೇರಿದಂತೆ ನಾಲ್ವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆಯಲ್ಲಿ ಒಂಟಿಯಾಗಿದ್ದ ವೃದ್ಧನನ್ನು ಕೈ-ಕಾಲು ಕಟ್ಟಿಹಾಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಆಗಸ್ಟ್ 15ರ ಶನಿವಾರ ರಾತ್ರಿ ಈ ಕೊಲೆ ನಡೆದಿದ್ದು, ಆರಂಭದಲ್ಲಿ ಇದೊಂದು ದರೋಡೆ ಪ್ರಕರಣವೆಂದು ಶಂಕಿಸಲಾಗಿತ್ತು.
ಐಫೋನ್ ಹಾಗೂ ಬೈಕ್‌ಗಾಗಿ ಹೆಣೆದ ಬಲೆ!
ಪೋಲಿಸರ ತನಿಖೆಯ ವೇಳೆ ಕೇವಲ ದ್ವೇಷ ಮಾತ್ರವಲ್ಲದೆ, ಹಣದ ಆಸೆಯೂ ಈ ಕೊಲೆಗೆ ಪ್ರಮುಖ ಕಾರಣ ಎಂಬುದು ತಿಳಿದುಬಂದಿದೆ. ಬಾಲಕಿಗೆ ತನಗೆ ಐಫೋನ್ ಖರೀದಿಸಲು ಮತ್ತು ಆಕೆಯ ಬಾಯ್‌ಫ್ರೆಂಡ್‌ಗೆ ಬೈಕ್ ಕೊಳ್ಳಲು ಹಣ ಹಾಗೂ ಚಿನ್ನಾಭರಣಗಳ ಅಗತ್ಯವಿತ್ತು. ಹೀಗಾಗಿ ತನ್ನ ಕೊಲ್ಲಂ ಮೂಲದ ಮೂವರು ಅಪ್ರಾಪ್ತ ಗೆಳೆಯರಿಗೆ ತಾತನ ಕೊಲೆಗೆ 'ಸುಪಾರಿ' ನೀಡಿದ್ದಳು.
ತಾತನ ವಿರುದ್ಧ ಕೆಟ್ಟ ಸ್ಪರ್ಶದ ಆರೋಪ
ವಿಚಾರಣೆ ವೇಳೆ ಬಾಲಕಿಯು, ತಾತ ತನ್ಮೊಂದಿಗೆ 'ಅನುಚಿತವಾಗಿ ವರ್ತಿಸುತ್ತಿದ್ದ' (ಬ್ಯಾಡ್ ಟಚ್) ಕಾರಣ ಪ್ರತೀಕಾರ ತೀರಿಸಿಕೊಳ್ಳಲು ಈ ಯೋಜನೆ ರೂಪಿಸಿದ್ದಾಗಿ ಹೇಳಿಕೆ ನೀಡಿದ್ದಾಳೆ. ಆದರೆ, ಪೊಲೀಸರು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ಬಾಲಕಿಗೆ ಕೌನ್ಸೆಲಿಂಗ್ ನೀಡಿದ ನಂತರ ಸುದೀರ್ಘ ವಿಚಾರಣೆ ನಡೆಸಲಿದ್ದಾರೆ.
ವೀಡಿಯೊ ಕಾಲ್ ಮೂಲಕ ಕೊಲೆ ದೃಶ್ಯ ವೀಕ್ಷಣೆ!
ಆಗಸ್ಟ್ 15ರ ರಾತ್ರಿ ವೃದ್ಧನ ಹೆಂಡತಿ ಹಾಗೂ ಮಗಳು ಆಸ್ಪತ್ರೆಯಲ್ಲಿದ್ದ ಸಮಯವನ್ನು ಬಳಸಿಕೊಂಡ ಬಾಲಕಿ, ತಾತ ಮನೆಯಲ್ಲಿ ಒಂಟಿಯಾಗಿದ್ದಾನೆಂಬ ಮಾಹಿತಿ ನೀಡಿ ಸ್ನೇಹಿತರನ್ನು ಕಳುಹಿಸಿದ್ದಳು. ಮನೆಗೆ ನುಗ್ಗಿದ ಮೂವರು ಬಾಲಕರು ಆತನ ಕೈ-ಕಾಲುಗಳನ್ನು ಬಟ್ಟೆಯಿಂದ ಕಟ್ಟಿಹಾಕಿ, ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಕೃತ್ಯ ಎಸಗುವ ಸಂದರ್ಭದಲ್ಲಿ ಆರೋಪಿಗಳು ಬಾಲಕಿಗೆ ವೀಡಿಯೊ ಕಾಲ್ ಮಾಡಿ ಕೊಲೆಯ ದೃಶ್ಯವನ್ನು ತೋರಿಸಿದ್ದಾರೆ ಎನ್ನಲಾಗಿದೆ.
ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕೊಲೆಯ ನಂತರ ಕೊಠಡಿ ಹಾಗೂ ಹಾಲ್‌ನಲ್ಲಿ ಖಾರದ ಪುಡಿಯನ್ನು ಎರಚಿ, ಚಿನ್ನಾಭರಣಗಳೊಂದಿಗೆ ಆರೋಪಿಗಳು ಪರಾರಿಯಾಗಿದ್ದರು. ತನಿಖೆ ವೇಳೆ ಅನುಮಾನ ಬಂದ ಪೊಲೀಸರು ಬಾಲಕಿಯನ್ನು ಸತತ ವಿಚಾರಣೆಗೆ ಒಳಪಡಿಸಿದಾಗ ಕಹಿ ಸತ್ಯ ಬಯಲಾಗಿದೆ. ಬಳಿಕ ಕೊಲ್ಲಂನ ಪರವೂರ್ ರೈಲ್ವೆ ನಿಲ್ದಾಣದಲ್ಲಿ ಮೂವರು ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)