Austin Appelbee (ಚಿತ್ರ X) 
ದೇಶ

4 ಕಿಲೋಮೀಟರ್ ದೂರ.. 4 ಗಂಟೆಗಳ ಕಾಲ ಈಜಿದ ಬಾಲಕ! ಈತನ ಸಾಹಸ ಕೇಳಿದ್ರೆ ಮೈ ಜುಂ ಎನ್ನೋದು ಗ್ಯಾರಂಟಿ! Austin Appelbee

ಪ್ರಮುಖ ಮುಖ್ಯಾಂಶಗಳು

  • ಸಾಮಾನ್ಯವಾಗಿ 13 ವರ್ಷದ ಮಕ್ಕಳೆಂದರೆ, ಆಟವಾಡುವುದು ಅಥವಾ ಓದುವುದನ್ನು ನಾವು ಕಲ್ಪನೆ ಮಾಡಿಕೊಳ್ಳುತ್ತೇವೆ
  • 13 ವರ್ಷದ ಆಸ್ಟಿನ್ ಅಪ್ಪೆಲ್‌ಬೀ ತನ್ನ ಕುಟುಂಬವನ್ನು ಸಾವಿನ ದವಡೆಯಿಂದ ಪಾರು ಮಾಡುವ ಮೂಲಕ ಸಾಹಸ ಮೆರೆದಿದ್ದಾನೆ
  • ಸಮುದ್ರದ ಭೀಕರ ಅಲೆಯಲ್ಲಿ ಸುಮಾರು 4 ಗಂಟೆಗಳ ಕಾಲ ಈಜಿ, ತನ್ನ ತಾಯಿ ಹಾಗೂ ಇಬ್ಬರು ಸಹೋದರರ ರಕ್ಷಿಸಿದ ಪೋರ
  • ಆಸ್ಟೀನ್​ ಮೊದಲು ಎರಡು ಗಂಟೆಗಳ ಕಾಲ ಲೈಫ್​ ಜಾಕೇಟ್​ಗಳೊಂದಿಗೆ ಈಜಲು ಪ್ರಾರಂಭಿಸಿದರು
ಆಸ್ಟ್ರೇಲಿಯಾ: ಸಾಮಾನ್ಯವಾಗಿ 13 ವರ್ಷದ ಮಕ್ಕಳೆಂದರೆ, ಆಟವಾಡುವುದು ಅಥವಾ ಓದುವುದನ್ನು ನಾವು ಕಲ್ಪನೆ ಮಾಡಿಕೊಳ್ಳುತ್ತೇವೆ. ಆದರೆ, ಆಸ್ಟ್ರೇಲಿಯಾದ 13 ವರ್ಷದ ಆಸ್ಟಿನ್ ಅಪ್ಪೆಲ್‌ಬೀ (Austin Appelbee) ಎಂಬ ಯುವಕನೊಬ್ಬ ತನ್ನ ಕುಟುಂಬವನ್ನು ಸಾವಿನ ದವಡೆಯಿಂದ ಪಾರು ಮಾಡುವ ಮೂಲಕ ಸಾಹಸ ಮೆರೆದಿದ್ದಾನೆ. ಆದಾಗ್ಯೂ, ಸಮುದ್ರದ ಭೀಕರ ಅಲೆಯಲ್ಲಿ ಸುಮಾರು 4 ಗಂಟೆಗಳ ಕಾಲ ಈಜಿ, ತನ್ನ ತಾಯಿ ಹಾಗೂ ಇಬ್ಬರು ಸಹೋದರರನ್ನು ರಕ್ಷಿಸಿ ಜಗತ್ತಿನಾದ್ಯಂತ ಸುದ್ಧಿಯಾಗಿದ್ದಾನೆ.

ಘಟನೆ ಏನು?

ಶುಕ್ರವಾರ (ಜ.30) ರಂದು  ಪಶ್ಚಿಮ ಆಸ್ಟ್ರೇಲಿಯಾದ ಕ್ವಿಂಡಾಲಪ್ ಎಂಬ ಸಮುದ್ರ ತೀರದಲ್ಲಿ ಅಪ್ಪೆಲ್‌ಬೀ ಕುಟುಂಬ ರಜೆ ಕಳೆಯಲು ತೆರಳಿದ್ದರು. ಈ ವೇಳೆ ಆಸ್ಟಿನ್ ತನ್ನ ತಾಯಿ ಜೋನ್ನೆ ಮತ್ತು ಇಬ್ಬರು ಸಹೋದರರೊಂದಿಗೆ ಪ್ಯಾಡಲ್‌ಬೋರ್ಡ್‌ಗಳು  ಮತ್ತು ಕಯಾಕ್‌ನಲ್ಲಿ ಜಿಯೋಗ್ರಾಫ್ ಕೊಲ್ಲಿಯಲ್ಲಿ ವಿಹಾರ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಬಲವಾದ ಗಾಳಿ ಬೀಸಿದ್ದರಿಂದ ಪರಿಸ್ಥಿತಿ ಬದಲಾಯಿತು. ಇದರಿಂದ ಸುಮಾರು 4 ಕಿಮೀ ದೂರದವರೆಗೆ ಕುಟುಂಬವು ಸಮುದ್ರದಲ್ಲಿ ಕೊಚ್ಚಿಕೊಂಡು ಹೋದರು.
ಸಮುದ್ರಗಳ ಅಲೆಗಳು ಹೆಚ್ಚಾದಂತೆ ಕುಟುಂಬ ಭಯ ಪಡಲು ಪ್ರಾರಂಭಿಸಿತು. ತಾಯಿ ಮತ್ತು ಮಕ್ಕಳು ಎಷ್ಟೇ ಕೂಗಿದರೂ ಸಹಾಯ ಮಾಡಲು ಯಾರೂ ಕೂಡಾ ಧಾವಿಸಲಿಲ್ಲ. ಈ ವೇಳೆ ಆಸ್ಟಿನ್​ (13) ಕಠಿಣ ನಿರ್ಧಾರವನ್ನು ತೆಗೆದುಕೊಂಡನು. ತನ್ನ ತಾಯಿ ಹಾಗೂ ಸಹೋದರರಿಗೆ ಪ್ಯಾಡಲ್​ಬೋರ್ಡ್​ಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ. ತಾನು ಒಬ್ಬನೇ ಸಹಾಯ ಕೋರಲು ದಡದ ಕಡೆಗೆ ಈಜಲು ನಿರ್ಧರಿಸಿದನು.
ಆಸ್ಟೀನ್​ ಮೊದಲು ಎರಡು ಗಂಟೆಗಳ ಕಾಲ ಲೈಫ್​ ಜಾಕೇಟ್​ಗಳೊಂದಿಗೆ ಈಜಲು ಪ್ರಾರಂಭಿಸಿದರು. ಆದರೆ, ಅದು ಅವರ ನಿಧಾನಗತಿಯನ್ನು ಕಡಿಮೆ ಮಾಡುತ್ತಿದೆ ಎಂದು ತಿಳಿದು ಅದನ್ನು ತೆಗೆದುಹಾಕಿ ಬರೀ ದೇಹದಿಂದ ಈಜಲು ಪ್ರಾರಂಭಿಸಿದನು. ಸತತ 4 ಗಂಟೆಗಳ ಕಾಲ ಈಜುವ ಮೂಲಕ ದಡವನ್ನು ತಲುಪಿದರು.

ರಕ್ಷಣಾ ಕಾರ್ಯಾಚರಣೆ

ಅಂತಿಮವಾಗಿ ದಡ ತಲುಪಿದ ಆಸ್ಟಿನ್, ಅಲ್ಲಿನ ಸ್ಥಳೀಯರ ಗಮನ ಸೆಳೆದನು. ತಕ್ಷಣವೇ ಮರೈನ್ ರೆಸ್ಕ್ಯೂ ತಂಡಕ್ಕೆ ಮಾಹಿತಿ ನೀಡಲಾಯಿತು. ರಕ್ಷಣಾ ದಳದ ನೌಕೆಗಳು ಸಮುದ್ರದ ಆಳಕ್ಕೆ ತೆರಳಿ, ಅಲ್ಲಿ ಪ್ಯಾಡಲ್‌ಬೋರ್ಡ್‌ಗಳ ಮೇಲೆ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದ ಜೋನ್ನೆ ಮತ್ತು ಅವರ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದರು.
ಆಘಾತಕಾರಿ ಅನುಭವ ಮತ್ತು ದೈಹಿಕ ಬಳಲಿಕೆಯ ಹೊರತಾಗಿಯೂ, ಕುಟುಂಬದ ಎಲ್ಲಾ ಸದಸ್ಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ  ಎಂದು ನೈಋತ್ಯ ಜಿಲ್ಲಾ ಕಚೇರಿಯ ಇನ್ಸ್‌ಪೆಕ್ಟರ್ ಜೇಮ್ಸ್ ಬ್ರಾಡ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿದ ನ್ಯಾಚುರಲಿಸ್ಟ್ ವಾಲಂಟಿಯರ್ ಮೆರೈನ್ ರೆಸ್ಕ್ಯೂನ ಕಮಾಂಡರ್ ಪಾಲ್ ಬ್ರೆಸ್ಲ್ಯಾಂಡ್, ಆಸ್ಟಿನ್​ನ ಸಾಹಸವನ್ನು "ಅತಿಮಾನುಷ" ಎಂದು ಬಣ್ಣಿಸಿದ್ದಾರೆ. ಬಾಲಕ ಮೊದಲು 2 ಗಂಟೆಗಳ ತನಕ ಲೈಫ್​ ಜಾಕೇಟ್​ ಬಳಸಿ ಈಜಲು ಪ್ರಾರಂಭಿಸಿದನು. ಅದರಿಂದ ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದ ನಂತರ ಅದನ್ನು ಬಿಟ್ಟು ಮುಂದುವರೆದನು. ಸತತ 4 ಗಂಟೆಗಳು ಈಜುವ ಮೂಲಕ ತನ್ನ ಕುಟುಂಬವನ್ನು ರಕ್ಷಿಸಿಕೊಂಡಿದ್ದಾನೆ ಎಂದು ಹೇಳಿದರು (ಏಜೆನ್ಸೀಸ್​).