ಚೆನ್ನೈ: ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಲು ರಾಜ್ಯಪಾಲ ಆರ್.ಎನ್. ರವಿ ಮಂಗಳವಾರ ನಿರಾಕರಿಸಿದ್ದು, ಈ ವರ್ಷದ ಮೊದಲ ವಿಧಾನಸಭಾ ಅಧಿವೇಶನದಲ್ಲಿ ರಾಷ್ಟ್ರಗೀತೆಯನ್ನು ಅವಮಾನಿಸಲಾಗಿದೆ ಎಂದು ಹೇಳಿ ಸದನದಿಂದ ಹೊರನಡೆದರು.
ರಾಜ್ಯಪಾಲರಾದ ರವಿ ನಿರ್ಗಮನದ ಬಳಿಕ, 13 ಅಂಶಗಳ ವಿವರಣೆಯನ್ನು ಅವರ ಕಚೇರಿ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಸರ್ಕಾರ ರಾಜ್ಯಪಾಲರ ಮೈಕ್ರೊಫೋನ್ನ್ನು ಅನೇಕ ಸಲ ಆಫ್ ಮಾಡಿದೆ ಮತ್ತು ಅವರ ಸರ್ಕಾರದ ಸಾಧನೆಗಳ ಬಗ್ಗೆ ಹಲವಾರು ಆಧಾರರಹಿತ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದೆ ಎಂದು ಅದರಲ್ಲಿ ತಿಳಿಸಲಾಗಿದೆ.
ತಮಿಳುನಾಡು ಕೈಗಾರಿಕಾ ಮತ್ತು ವ್ಯವಹಾರ ಸಂಬಂಧಿತ ಹೂಡಿಕೆಗಳಲ್ಲಿ 12 ಲಕ್ಷ ಕೋಟಿ ರೂ.ಗಳನ್ನು ಆಕರ್ಷಿಸಿದೆ ಎಂದು ಡಿಎಂಕೆ ಹೇಳಿಕೊಂಡಿರುವುದನ್ನು ರಾಜ್ಯಪಾಲರ ಕಚೇರಿ ಟೀಕಿಸಿದ್ದು, ನಿರೀಕ್ಷಿತ ಹೂಡಿಕೆದಾರರೊಂದಿಗಿನ ಹಲವು ಒಪ್ಪಂದಗಳು ಕಾಗದದ ಮೇಲೆ ಮಾತ್ರ ಉಳಿದಿರುವುದರಿಂದ ಇದು ಸತ್ಯಕ್ಕೆ ದೂರವಾಗಿದೆ ಎಂದು ರವಿ ಹೇಳಿದರು.
ವಾಸ್ತವ ಹೂಡಿಕೆಯು ಅದರ ಒಂದು ಸಣ್ಣ ಭಾಗವೇ ಅಲ್ಲ. ಹೂಡಿಕೆ ದತ್ತಾಂಶವು ತಮಿಳುನಾಡು ಹೂಡಿಕೆದಾರರಿಗೆ ಕಡಿಮೆ ಆಕರ್ಷಕವಾಗುತ್ತಿದೆ ಎಂದು ತೋರಿಸುತ್ತದೆ. ನಾಲ್ಕು ವರ್ಷಗಳ ಹಿಂದಿನವರೆಗೂ ತಮಿಳುನಾಡು ವಿದೇಶಿ ನೇರ ಹೂಡಿಕೆಯಲ್ಲಿ ನಾಲ್ಕನೇ ಅತಿದೊಡ್ಡ ರಾಜ್ಯವಾಗಿತ್ತು. ಇಂದು ಅದು ಆರನೇ ಸ್ಥಾನದಲ್ಲಿ ಉಳಿಯಲು ಹೆಣಗಾಡುತ್ತಿದೆ ಎಂದರು.
ರಾಜ್ಯಪಾಲರಿಗಾಗಿ ಬರೆದ ಭಾಷಣದಲ್ಲಿ, ಅಪ್ರಾಪ್ತ ವಯಸ್ಕರ ಮೇಲಿನ ಅತ್ಯಾಚಾರ ಪ್ರಕರಣಗಳು ಶೇ. 55 ಕ್ಕಿಂತ ಹೆಚ್ಚು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳು ಶೇ. 33 ಕ್ಕಿಂತ ಹೆಚ್ಚು ಹೆಚ್ಚಳವಾಗಿದ್ದರೂ", ಮಹಿಳೆಯರ ಸುರಕ್ಷತೆಯ ವಿಷಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ರಾಜ್ಯಪಾಲರ ಕಚೇರಿ ದೂರಿದೆ.
ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ವ್ಯಾಪಕ ಹರಡುವಿಕೆ... ಮತ್ತು ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಯುವಜನರಲ್ಲಿ ಮಾದಕ ದ್ರವ್ಯ ಸೇವನೆಯ ಪ್ರಕರಣಗಳಲ್ಲಿ ತೀವ್ರ ಹೆಚ್ಚಳವು ಬಹಳ ಕಳವಳಕಾರಿ ಸಂಗತಿಯಾಗಿದ್ದು, ದಲಿತರು ಮತ್ತು ದಲಿತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರ ದೌರ್ಜನ್ಯಗಳನ್ನು ಸಹ ತಳ್ಳಿಹಾಕಿದರು.
ಶಿಕ್ಷಣದ ಗುಣಮಟ್ಟದಲ್ಲಿ ಕುಸಿತ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಪಕವಾದ ದುರುಪಯೋಗ ಮತ್ತು ಹಲವಾರು ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆಗಳ ಕೊರತೆಯನ್ನು ಸಹ ಉಲ್ಲೇಖಿಸಿದರು.
ರಾಜ್ಯದಲ್ಲಿ ದೇವಾಲಯಗಳ ದುರುಪಯೋಗದಿಂದ ಲಕ್ಷಾಂತರ ಭಕ್ತರು ಆಘಾತ ಮತ್ತು ನಿರಾಶೆಗೊಂಡಿದ್ದಾರೆ. ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು ಗೋಚರ ಮತ್ತು ಅದೃಶ್ಯ ವೆಚ್ಚಗಳಿಂದಾಗಿ ಭಾರಿ ಒತ್ತಡಕ್ಕೆ ಒಳಗಾಗಿವೆ ಎಂಬ ದೂರುಗಳ ಪಟ್ಟಿಯು ಇದರಲ್ಲಿ ಸೇರಿದೆ. ಬಹುತೇಕ ಎಲ್ಲಾ ವಲಯಗಳಲ್ಲಿ ಕೆಳ ಹಂತದ ಉದ್ಯೋಗಿಗಳಲ್ಲಿ ವ್ಯಾಪಕ ಅಸಮಾಧಾನವಿದ್ದು, ಅವರೆಲ್ಲಾ ಹತಾಶರಾಗಿದ್ದಾರೆ, ನೈಜ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳ ಬಗ್ಗೆ ಸರ್ಕಾರ ಯಾವುದೇ ರೀತಿಯ ಉಲ್ಲೇಖವನ್ನು ಮಾಡಿಲ್ಲ.
ಡಿಎಂಕೆ ರಿಯಾಕ್ಷನ್
ರಾಜ್ಯಪಾಲರ ಕ್ರಮಗಳು ಸದನದ ಶತಮಾನಗಳಷ್ಟು ಹಳೆಯ ಸಂಪ್ರದಾಯಗಳಿಗೆ ಅಗೌರವ ತೋರುವ ಮೂಲಕ ಅವಮಾನಿಸಿದೆ ಎಂದು ಸ್ಟಾಲಿನ್ ಆರೋಪಿಸಿದ್ದರೆ, ಡಿಎಂಕೆ ಸಂಸ್ಥಾಪಕ ಸಿಎನ್ ಅಣ್ಣಾದೊರೈ, ಆಡಿಗೆ ಗಡ್ಡ ಏಕೆ ಬೇಕು ಮತ್ತು ರಾಜ್ಯಕ್ಕೆ ರಾಜ್ಯಪಾಲರು ಏಕೆ ಬೇಕು? ಎಂಬ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ(ಏಜೆನ್ಸೀಸ್).