ಗಣರಾಜ್ಯೋತ್ಸವಕ್ಕೆ ಸಕಲ ತಯಾರಿ  
ದೇಶ

1,270 ಕೆಜಿ ಬೋನ್​ಲೆಸ್​ ಕೋಳಿ ಮಾಂಸ! ಗಣರಾಜ್ಯೋತ್ಸವ ದಿನದ ಭಧ್ರತೆಗೆ 'ಹದ್ದಿನ ಕಣ್ಣು'; ಏನೆಲ್ಲ, ಹೇಗೆಲ್ಲ ತಯಾರಿ?

ಪ್ರಮುಖ ಮುಖ್ಯಾಂಶಗಳು

  • ಗಣರಾಜ್ಯೋತ್ಸವ ದಿನಕ್ಕೆ ಭಾರತೀಯ ವಾಯುಪಡೆಯಿಂದ ವಿಶೇಷ ತಯಾರಿ
  • ಹಕ್ಕಿಗಳ ದಿಕ್ಕು ತಪ್ಪಿಸಲು 1270 ಕೆಜಿ ಬೋನ್​ಲೆಸ್​ ಕೋಳಿ ಮಾಂಸ
  • ಏರ್​ ಶೋ ವೇಳೆ ವಿಮಾನಗಳಿಗೆ ಪಕ್ಷಿಗಳ ಡಿಕ್ಕಿ, ಅಡಚಣೆ ತಪ್ಪಿಸಲು ಯೋಜನೆ
ನವದೆಹಲಿ:  ಜ.26ರಂದು 77ನೇ ಗಣರಾಜ್ಯೋತ್ಸವ ದಿನಾಚರಣೆಗೆ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆ ಪೊಲೀಸ್ ಹಾಗೂ ಭಾರತೀಯ ವಾಯುಪಡೆ ಇಲಾಖೆ ಸಕಲ ತಯಾರಿಗಳನ್ನು ನಡೆಸುತ್ತಿವೆ. ಪ್ರತಿವರ್ಷದಂತೆ ಬಾನಿನಲ್ಲಿ ಬಣ್ಣದ  ಹಕ್ಕಿಯಂತೆ ಹಾರಾಡುವ ಭಾರತೀಯ ವಾಯುಪಡೆಯ ವಿಮಾನಗಳು, ಈ ವರ್ಷವು ವಿಶೇಷವಾಗಿ ಏರ್ ಶೋ ನಡೆಸಲು ಸಜ್ಜಾಗಿದೆ. ಆದರೆ, ಇದಕ್ಕೆ ಹಕ್ಕಿಗಳ ಅಡಚಣೆ ಉಂಟಾಗುವ ಸಾಧ್ಯತೆ ಹೆಚ್ಚಿರುವ ಕಾರಣ, ಪರ್ಯಾಯ ಪರಿಹಾರವನ್ನು ಕಂಡುಕೊಂಡಿದೆ.
ದೆಹಲಿಯ ವಾಯುಪ್ರದೇಶವನ್ನು ವಿಪರೀತ ಹಕ್ಕಿಗಳ ಹಾರಾಟದಿಂದ ಸುರಕ್ಷಿತಗೊಳಿಸಲು 1 ಟನ್​ ಕೋಳಿ ಮಾಂಸವನ್ನು ಒಂದೆಡೆ ಗುಡ್ಡೆ ಹಾಕಲು ಯೋಜನೆ ರೂಪಿಸಲಾಗಿದೆ. ಏರ್​ ಶೋ ವೇಳೆ ಪಕ್ಷಿಗಳ ಡಿಕ್ಕಿಯನ್ನು ತಡೆಗಟ್ಟುವ ವಿಶೇಷ ಕ್ರಮದಲ್ಲಿ, ದೆಹಲಿ ಅರಣ್ಯ ಇಲಾಖೆಯು, ವಾಯು ಪಡೆಯೊಂದಿಗೆ ಕೈಜೋಡಿಸಿದೆ. 1,270 ಕೆಜಿಗಿಂತ ಅಧಿಕ ಬೋನ್​ಲೆಸ್​ ಕೋಳಿ ಮಾಂಸವನ್ನು ಒಂದು ಕಡೆ ಹಾಕುವುದರಿಂದ ಪಕ್ಷಿಗಳ ದಿಕ್ಕನ್ನು ತಪ್ಪಿಸುವುದು ಇದರ ಗುರಿಯಾಗಿದೆ. ಇದು ಏರ್​ ಶೋ ವೇಳೆ ವಿಮಾನ ಹಾರಾಟಕ್ಕೆ ಯಾವುದೇ ರೀತಿ ಅಡಚಣೆ ಉಂಟು ಮಾಡುವುದಿಲ್ಲ ಎಂಬುದು ಇಲಾಖೆಯ ನಂಬಿಕೆ.   

ಮಾಂಸವಿಡಲು ಸ್ಥಳಗಳು ನಿಗದಿ!

ಮಾಂಸ ಹಾಕುವ ಅಭ್ಯಾಸವು ವಾರ್ಷಿಕ ಸಂಪ್ರದಾಯವಾಗಿದ್ದರೂ, ಈ ವರ್ಷ ಕೊಂಚ ಬದಲಾವಣೆ ಕಂಡುಬಂದಿರುವುದು ಗಮನಾರ್ಹ. ವನ್ಯಜೀವಿ ನಿರ್ವಹಣೆಯನ್ನು ಸರಿಯಾದ ರೀತಿಯಲ್ಲಿ ಸಮತೋಲನಗೊಳಿಸಲು ಕೋಳಿ ಮಾಂಸವನ್ನು ಹಾಕಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಒಟ್ಟು 1,275 ಕೆಜಿ ಕೋಳಿ ಮಾಂಸವನ್ನು ವಿವಿಧ ಹಂತಗಳಲ್ಲಿ ಬಳಕೆ ಮಾಡಲಾಗುವುದು. ಪೂರ್ವಾಭ್ಯಾಸದ ದಿನವಾದ ಜ.22ರಂದು ಗರಿಷ್ಠ ಮಾಂಸವನ್ನು ಹಾಕಲು ನಿರ್ಧರಿಸಲಾಗಿದೆ. ಹೀಗೆ ಮಾಡುವುದರಿಂದ ಏರ್​ ಶೋ ವೇಳೆ ಹಕ್ಕಿಗಳ ಹಾರಾಟವನ್ನು ತಾತ್ಕಾಲಿಕವಾಗಿ ತಡೆಗಟ್ಟಬಹುದು. ಹಾಗೂ ಇದರಿಂದ ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆದು ಸಾವನ್ನಪ್ಪುವುದನ್ನು ತಡೆಯಬಹುದು,(ಏಜೆನ್ಸೀಸ್).