ಮುಂಬೈ: ಮಹಾರಾಷ್ಟ್ರದ ಪುಣೆ(Pune) ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಶಂಕಿತ ನಕಲಿ ಮದ್ಯ ಸೇವಿಸಿ 12 ಮಂದಿ ಮೃತಪಟ್ಟಿದ್ದು, ಇನ್ನೂ ಮೂವರ ಸ್ಥಿತಿ ಗಂಭೀರವಾಗಿದ್ದು, ಈ ಕುರಿತು ಸಿಎಂ ದೇವೇಂದ್ರ ಫಡ್ನವೀಸ್ ತನಿಖೆಗೆ ಆದೇಶ ನೀಡಿದ್ದಾರೆ ಎಂದು ಶುಕ್ರವಾರ(ಮೇ 29) ವರದಿಯಾಗಿದೆ.
ಪಿಂಪ್ರಿ-ಚಿಂಚ್‌ವಾಡ್‌ನ ಫುಗೆವಾಡಿ ಪ್ರದೇಶ ಮತ್ತು ಪುಣೆಯ ಹಡಪ್ಸರ್ ಪ್ರದೇಶದಿಂದ ಈ ಸಾವುಗಳು ವರದಿಯಾಗಿವೆ. ಮೃತರು ನಕಲಿ ಅಥವಾ ಕಲುಷಿತ ಮದ್ಯ ಸೇವಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನೂ ಅಧಿಕಾರಿಗಳು ಮದ್ಯದಲ್ಲಿ ವಿಷಕಾರಿ ಬೆರೆತಿರಬಹುದು ಎಂದು ಶಂಕಿಸಿದ್ದು, ವಿಧಿವಿಜ್ಞಾನದ ವರದಿ ಬಂದ ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ.
ಪಿಂಪ್ರಿ-ಚಿಂಚ್‌ವಾಡ್‌ನ ಫುಗೆವಾಡಿ ಪ್ರದೇಶದಲ್ಲಿ 7 ಮಂದಿ ಸಾವಿಗೀಡಾಗಿದ್ರೆ, ಹಡಪ್ಸರ್ ಪ್ರದೇಶದಲ್ಲಿ ಐವರು ಮೃತಪಟ್ಟಿದ್ದಾರೆ. ಫುಗೆವಾಡಿಯ ಮೃತರನ್ನು ರಾಜೇಶ್ ರಜಪೂತ್, ಪಾಂಡುರಂಗ್ ಫುಗೆ, ಆನಂದ್ ದೇಸಾಯಿ, ಅಕ್ಬರ್ ಪಠಾಣ್ ಮತ್ತು ಆನಂದ್ ನಿಕಲ್ಜೆ ಎಂದು ಗುರುತಿಸಲಾಗಿದೆ. ಹಡಪ್ಸರ್‌ನಲ್ಲಿ ಮೃತಪಟ್ಟವರನ್ನು ರಾಹುಲ್ ಶರದ್ ಕ್ಷೀರಸಾಗರ್ (45), ವಿಜಯ್ ಭೂಕುರ್ಲಾಲ್ ಶರ್ಮಾ (45), ಅರುಣ್ ದಾದರ್, ಅಶೋಕ್ ರಮೇಶ್ ಚವಾಣ್ ಎನ್ನಲಾಗಿದೆ.
ಈ ಸಾವುಗಳ ವರದಿ ಬೆನ್ನಲ್ಲೆ ಸಿಎಂ ದೇವೇಂದ್ರ ಫಡ್ನವೀಸ್, ಪುಣೆ ಮತ್ತು ಪಿಂಪ್ರಿ-ಚಿಂಚ್‌ವಾಡ್ ಪೊಲೀಸ್ ಆಯುಕ್ತರಿಗೆ ವಿವರವಾದ ತನಿಖೆ ನಡೆಸಿ ದುರಂತಕ್ಕೆ ಕಾರಣರಾದವರನ್ನು ಪತ್ತೆ ಹಚ್ಚುವಂತೆ ಆದೇಶ ನೀಡಿದ್ದಾರೆ.
ಇನ್ನೂ ಶಂಕಿತ ನಕಲಿ ಮದ್ಯದ ಮೂಲದ ಬಗ್ಗೆ ಪೊಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪೀಡಿತ ಪ್ರದೇಶಗಳಲ್ಲಿ ಸಂಘಟಿತ ಅಕ್ರಮ ಉತ್ಪಾದನೆ ಮತ್ತು ವಿತರಣಾ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೇಶ್ ವಾಂಖೆಡೆ ಎಂಬಾತನನ್ನು ಬಂಧಿಸಿದ್ದಾರೆ. ಹಲವರ ವಿಚಾರಣೆ ನಡೆಸುತ್ತಿದ್ದಾರೆ (ಏಜೆನ್ಸೀಸ್).