Explosive Material Seize | ನಾಗೌರ್ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ರಾಜಸ್ಥಾನ ಪೊಲೀಸರು 
ದೇಶ

ಗಣರಾಜ್ಯೋತ್ಸವಕ್ಕೂ ಮುನ್ನ ಭಾರಿ ಸಂಚು ಪತ್ತೆ; 9,550 ಕೆಜಿ ಅಮೋನಿಯಂ ನೈಟ್ರೇಟ್ ಜಪ್ತಿ ಮಾಡಿದ ರಾಜಸ್ತಾನ ಪೊಲೀಸರು | Explosive Material Seize

ಜೈಪುರ: ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಸಿದ್ಧವಾಗುತ್ತಿದ್ದರೆ, ಇತ್ತ ರಾಜಸ್ಥಾನ ಪೊಲೀಸರು ನಾಗೌರ್ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡು ಪ್ರಮುಖ ಸಂಚನ್ನು ವಿಫಲಗೊಳಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಪೊಲೀಸರು ಥನ್ವಾಲಾ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಸೋರ್ ಗ್ರಾಮದ ಜಮೀನೊಂದರಲ್ಲಿದ್ದ ಸುಮಾರು 9,550 ಕಿಲೋಗ್ರಾಂಗಳಷ್ಟು ಅಮೋನಿಯಂ ನೈಟ್ರೇಟ್ ವಶಪಡಿಸಿಕೊಂಡಿದ್ದು, 187 ಚೀಲಗಳಲ್ಲಿ ಸ್ಫೋಟಕ ವಸ್ತುವನ್ನು ಸಂಗ್ರಹಿಸಲಾಗಿತ್ತು ಎಂದು ವರದಿಯಾಗಿದೆ.
ಪೊಲೀಸರು ಅಮೋನಿಯಂ ನೈಟ್ರೇಟ್ ಜೊತೆಗೆ, ಡಿಟೋನೇಟರ್‌ಗಳು ಮತ್ತು ನೀಲಿ ಮತ್ತು ಕೆಂಪು ಫ್ಯೂಸ್ ವೈರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಸ್ಫೋಟದ ಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಮತ್ತು ಸಾರ್ವಜನಿಕರ ಸುರಕ್ಷತೆಗೆ ಅಪಾಯದ ಲಕ್ಷಣ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಘಟನೆಗೆ ಸಂಬಂಧಿಸಿದಂತೆ ಹರ್ಸೋರ್ ಗ್ರಾಮದ ನಿವಾಸಿ ಸುಲೇಮಾನ್ ಖಾನ್ (50) ಎಂಬಾತನನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದು, ಆರೋಪಿಯ ವಿರುದ್ಧ ಈಗಾಗಲೇ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಕ್ರಮ ಗಣಿಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ಸ್ಫೋಟಕಗಳನ್ನು ಪೂರೈಸುವಲ್ಲಿ ಸುಲೇಮಾನ್ ಖಾನ್ ಭಾಗಿಯಾಗಿದ್ದಾರೆಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದ್ದು, ಸ್ಫೋಟಕ ವಸ್ತುಗಳ ಪೂರೈಕೆ ಮತ್ತು ಸಂಗ್ರಹಣೆಯಲ್ಲಿ ತೊಡಗಿರುವವರ ಜಾಲವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೋಂಕ್‌ನಲ್ಲಿ 150 ಕೆಜಿ ಸ್ಫೋಟಕ ವಶ

ಟೋಂಕ್ ಜಿಲ್ಲೆಯಲ್ಲಿ ಪೊಲೀಸರು ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡ ಕೆಲವೇ ದಿನಗಳ ಬಳಿಕ ಈ ಘಟನೆ ನಡೆದಿದ್ದು, ಅದರಲ್ಲಿ 150 ಕೆಜಿ ಅಮೋನಿಯಂ ನೈಟ್ರೇಟ್, 200 ಕಾರ್ಟ್ರಿಡ್ಜ್‌ಗಳು ಮತ್ತು ಆರು ಬಂಡಲ್‌ಗಳ ಸುರಕ್ಷತಾ ಫ್ಯೂಸ್ ವೈರ್ ಸೇರಿವೆ. ಬುಂಡಿ ಜಿಲ್ಲೆಯ ಸುರೇಂದ್ರ ಪಟ್ವಾ ಮತ್ತು ಸುರೇಂದ್ರ ಮೋಚಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕಗಳನ್ನು ಅರಾವಳಿ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಗೆ ಬಳಸಲು ಉದ್ದೇಶಿಸಲಾಗಿತ್ತು ಎಂದು ತಿಳಿದುಬಂದಿದೆ. ಆರೋಪಿಗಳು ಬುಂಡಿಯಿಂದ ಟೋಂಕ್‌ಗೆ ಪ್ರಯಾಣಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ -52 ರಲ್ಲಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗಸ್ತು ತಿರುಗುವ ಪೊಲೀಸರು ವಿಚಾರಿಸಿದಾಗ ರಸಗೊಬ್ಬರಗಳನ್ನು ಸಾಗಿಸುತ್ತಿರುವುದಾಗಿ ಆರೋಪಿಗಳು ಹೇಳಿಕೊಂಡಿದ್ದು, ಆದರೆ, ತಪಾಸಣೆ ನಡೆಸಿದಾಗ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಈ ಸರಕನ್ನು ಸಾಗಿಸಲು ಬಳಸಿದ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದ್ದು, ನಿರ್ದಿಷ್ಟ ಗುಪ್ತಚರ ಮಾಹಿತಿಗಳನ್ನು ಸ್ವೀಕರಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ(ಏಜೆನ್ಸೀಸ್​​).