- 5 ದಿನದಲ್ಲೇ ತಪ್ಪು ತಿದ್ದಿಕೊಳ್ಳದ ಬ್ಯಾಂಕ್ಗೆ ಬಿತ್ತು ಭಾರಿ ದಂಡ
- 10 ಸಾವಿರ ರೂ. ಡೆಬಿಟ್ ಆಗಿದೆ ಎಂದರೂ ಗ್ರಾಹನಿಗೆ ಕೊಡಲಿಲ್ಲ ಕಟ್ ಆದ ಹಣ
- 9 ವರ್ಷಗಳ ಸತತ ಹೋರಾಟಕ್ಕೆ ಕಡೆಗೂ ನ್ಯಾಯಾಲಯದಲ್ಲಿ ಸಿಕ್ಕಿತು ಫಲ
ಸೂರತ್: 9 ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಎಸ್ಬಿಐ ಬ್ಯಾಂಕ್ನ ಎಟಿಎಂನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ತಮ್ಮ 10 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು. ಎಷ್ಟೇ ಬಾರಿ ಹಣ ವಾಪಾಸ್ ಮಾಡುವಂತೆ ಮನವಿ ಮಾಡಿಕೊಂಡರು ಬುದ್ಧಿ ಕಲಿಯದ ಬ್ಯಾಂಕ್, ಕಡೆಗೂ 9 ವರ್ಷಗಳ ಬಳಿಕ ಗ್ರಾಹಕರ ನ್ಯಾಯಾಲಯದ ಆದೇಶದ ಮೇರೆಗೆ 10,000 ಜೊತೆಗೆ ದುಪ್ಪಟ್ಟು ಪರಿಹಾರ ಕೊಟ್ಟ ಘಟನೆ ಗುಜರಾತ್ನ ಸೂರತ್ನಲ್ಲಿ ವರದಿಯಾಗಿದೆ.
ಆರ್ಬಿಐನ ನಿಯಮದ ಪ್ರಕಾರ, ಬ್ಯಾಂಕ್ನಿಂದ ಹಣ ಡೆಬಿಟ್ ಆಗಿದೆ ಎಂಬ ಸಂದೇಶ ಗ್ರಾಹಕನಿಗೆ ಸಿಕ್ಕ ನಂತರವೂ ಎಟಿಎಂನಿಂದ ಹಣ ಬಾರದಿದ್ದರೆ, ಆಯಾ ಬ್ಯಾಂಕ್ ತನ್ನ ಗ್ರಾಹಕನಿಗೆ ಐದು ದಿನಗಳಲ್ಲಿ ಹಣವನ್ನು ಮರುಪಾವತಿ ಮಾಡಬೇಕು. ಆದರೆ, ಬ್ಯಾಂಕ್ ಆಫ್ ಬರೋಡ ಇದಕ್ಕೆ ತೆಗೆದುಕೊಂಡಿದ್ದು ಬರೋಬ್ಬರಿ 9 ವರ್ಷ ಅನ್ನೋದೇ ಅಚ್ಚರಿ. ತನ್ನ ತಪ್ಪನ್ನು ಸರಿಪಡಿಸಿಕೊಳ್ಳದೆ, ಗ್ರಾಹಕನಿಗೆ ಹಣ ಹಿಂತಿರುಗಿಸಲು ಸತಾಯಿಸಿದ ಬ್ಯಾಂಕ್, ಈಗ ಲಕ್ಷಗಟ್ಟಲೇ ಹಣವನ್ನು ಪರಿಹಾರವಾಗಿ ನೀಡುವ ಪರಿಸ್ಥಿತಿಗೆ ತಲುಪಿದ್ದು ನಿಜಕ್ಕೂ ದುರಂತವೇ ಸರಿ.
ಏನಿದು ಘಟನೆ?
2017 ಫೆ.18ರಂದು ಸೂರತನ್ ಉಧ್ನಾ ಪ್ರದೇಶದ ಗ್ರಾಹಕರೊಬ್ಬರು, ಸ್ಥಳೀಯ ಎಸ್ಬಿಐ ಎಟಿಎಂನಿಂದ 10 ಸಾವಿರ ರೂ. ಹಣವನ್ನು ಡ್ರಾ ಮಾಡಲು ಯತ್ನಿಸಿದರು. ಡಬಿಟ್ ಕಾರ್ಡ್ ಹಾಕಿ ತಮ್ಮ ಎಟಿಎಂ ಪಿನ್ ಕೊಟ್ಟು ಹಣಕ್ಕಾಗಿ ಕೆಲ ನಿಮಿಷ ಕಾದರು. ಆದರೆ, ದುರಾದೃಷ್ಟವಶಾತ್ ಅವರಿಗೆ ದುಡ್ಡು ಬರಲಿಲ್ಲ. ಜೊತೆಗೆ ಇಷ್ಟು ಹಣ ಡೆಬಿಟ್ ಆಗಿದೆ ಎಂಬ ಸಂದೇಶ ಸಿಗುವ ರಶೀದಿಯೂ ಸಿಕ್ಕಿಲ್ಲ.
ಕ್ಯಾರೇ ಎನ್ನದ ಬ್ಯಾಂಕ್
ಕೆಲವು ನಿಮಿಷದ ನಂತರ ಗ್ರಾಹಕರ ಮೊಬೈಲ್ಗೆ, ಬ್ಯಾಂಕ್ ಆಫ್ ಬರೋಡದಿಂದ ನಿಮ್ಮ ಖಾತೆಯಿಂದ ಹತ್ತು ಸಾವಿರ ರೂ. ಡೆಬಿಟ್ ಆಗಿದೆ ಎಂಬ ಸಂದೇಶ ಬಂದಿತ್ತು. ಇದರಿಂದ ತೀವ್ರ ಗಾಬರಿಗೊಂಡ ವ್ಯಕ್ತಿ, ಹಣ ವಾಪಾಸ್ ಆಗುತ್ತೆ ಎಂದು ಎರಡು ದಿನಗಳ ಕಾಲ ಬೇಸರದಲ್ಲಿದ್ದರು. ಕಡೆಗೆ, ಫೆ.21ರಂದು ದುಂಭಾಲ್ನಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಗೆ ದೂರು ನೀಡಿದರು. 2017ರ ಮಾರ್ಚ್ನಿಂದ ಸತತವಾಗಿ ದೂರಿನ ಮೇಲೆ ದೂರು, ಇ-ಮೇಲ್ಗಳು, ಪತ್ರ ಕಳುಹಿಸಿದರು. ಆದರೆ, ಬ್ಯಾಂಕಿನಿಂದ ಮಾತ್ರ ಒಂದೇ ಒಂದು ಪ್ರತಿಕ್ರಿಯೆ ಬರಲಿಲ್ಲ.
ಬ್ಯಾಂಕಿನವರ ಈ ನಡೆಯಿಂದ ತೀವ್ರ ಕುಪಿತಗೊಂಡ ವ್ಯಕ್ತಿ, ಆರ್ಬಿಐ ಅಧಿಕಾರಿಗಳ ಜೊತೆ ಮಾತನಾಡಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲು ಎಸ್ಬಿಐನ ಆರ್ಟಿಐಗೆ ಮನವಿ ಸಲ್ಲಿಸಿದರು. ಅದಾದ ಬಳಿಕ 2017ರ ಡಿ.20ರಂದು ಗ್ರಾಹಕ ನ್ಯಾಯಾಲಯಕ್ಕೆ ತಮ್ಮ ದೂರಿನ ಅರ್ಜಿ ಸಲ್ಲಿಸಿದರು.
ಕೋರ್ಟ್ನಲ್ಲಿ ಆಗಿದ್ದೇನು?
ಗ್ರಾಹಕರ ನ್ಯಾಯಾಲಯದ ನೋಟಿಸ್ಗೆ ಪ್ರತಿಕ್ರಿಯಿಸಿದ ಬ್ಯಾಂಕ್ ಆಫ್ ಬರೋಡ ಹೇಳಿದ್ದಿಷ್ಟು. "ಗ್ರಾಹಕ ಹಣ ಡ್ರಾ ಮಾಡಿದ್ದು ಎಸ್ಬಿಐ ಎಟಿಎಂನಲ್ಲಿ. ನಮ್ಮ ದಾಖಲೆಯ ಪ್ರಕಾರ, ಅವರ ಹಣ ಯಶಸ್ವಿಯಾಗಿ ಡೆಬಿಟ್ ಆಗಿದೆ. ಹೀಗಾಗಿ, ಬ್ಯಾಂಕ್ ಇದರ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ" ಎಂದು ವಾದಿಸಿತು.
ಈ ವಾದವನ್ನು ತಳ್ಳಿಹಾಕಿದ ಗ್ರಾಹಕ ನ್ಯಾಯಾಲಯ, "ಆರ್ಬಿಐನ ನಿಯಮದ ಪ್ರಕಾರ, ಗ್ರಾಹಕನ ಹಣ ಡೆಬಿಟ್ ಆಗಿದೆ ಎಂದು ಸಂದೇಶ ಸಿಕ್ಕಿಯೂ ಹಣ ಖಾತೆದಾರನಿಗೆ ಪಾವತಿಯಾಗಿಲ್ಲ ಅಂದಮೇಲೆ ಈ ತಪ್ಪನ್ನು ತಿದ್ದಿಕೊಳ್ಳಲು ನಿಮಗೆ ಐದು ದಿನ ಕಾಲಾವಕಾಶವಿತ್ತು. ಆದರೆ, ನೀವು ಹಣ ಮರುಪಾವತಿ ಮಾಡಲಿಲ್ಲ. ನೀವು ಆರ್ಬಿಐನ ನಿಯಮ ಉಲ್ಲಂಘನೆ" ಎಂದು ಹೇಳಿ 3.28 ಲಕ್ಷ ರೂ. ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿತು,(ಏಜೆನ್ಸೀಸ್).