22 ವರ್ಷದ ಮಗನ ಸಮ್ಮುಖದಲ್ಲಿ ಸ್ಕಾಟ್ಲೆಂಡ್​ ಸಂಸದನನ್ನು ಮದ್ವೆಯಾದ ಭಾರತೀಯ ಮಹಿಳೆ! ವೀಸಾದಿಂದ ಹುಟ್ಟಿದ ಪ್ರೀತಿ ಇದು... Wedding  
ದೇಶ

22 ವರ್ಷದ ಮಗನ ಸಮ್ಮುಖದಲ್ಲಿ ಸ್ಕಾಟ್ಲೆಂಡ್​ ಸಂಸದನನ್ನು ಮದ್ವೆಯಾದ ಭಾರತೀಯ ಮಹಿಳೆ! ವೀಸಾದಿಂದ ಹುಟ್ಟಿದ ಪ್ರೀತಿ ಇದು... Wedding

ಪ್ರಮುಖ ಮುಖ್ಯಾಂಶಗಳು

  • ಯುಕೆಯಲ್ಲಿ ಮದುವೆಯಾಗಿ ಹತ್ತು ವರ್ಷಗಳ ಬಳಿಕ ಗುರುವಾಯೂರು ದೇವಸ್ಥಾನದಲ್ಲಿ ಮಲಯಾಳಿ ಮಹಿಳೆ ವಿವಾಹ
  • ಸ್ಕಾಟಿಷ್ ಸಂಸದ ಮಾರ್ಟಿನ್ ಡೇ ಅವರಿಂದ ಕೇರಳದ ನಿತಿನ್ ಚಂದ್ರ ಅವರ ಕುತ್ತಿಗೆಗೆ ಮಾಂಗಲ್ಯಧಾರಣೆ
  • ವೀಸಾ ಸಮಸ್ಯೆಯ ಸಮಯದಲ್ಲಿ ಪರಿಚಯವಾಗಿ ನಂತರ ಪ್ರೀತಿಸಿ ವಿವಾಹವಾದ ವಿದೇಶಿ ಸಂಸದ ಹಾಗೂ ಮಲಯಾಳಿ ವಧು
  • ಮೊದಲ ಮದುವೆಯ ಮಗನ ಸಾಕ್ಷಿಯಾಗಿ ಗುರುವಾಯುಪ್ಪನ ಸನ್ನಧಿಯಲ್ಲಿ ನನಸಾದ ಮಹಿಳೆಯ ಬಹುಕಾಲದ ಕನಸು
Wedding : ಯುನೈಟೆಡ್​ ಕಿಂಗ್​ಡಮ್​ನಲ್ಲಿ ವಿವಾಹವಾಗಿ ಹತ್ತು ವರ್ಷಗಳ ಬಳಿಕ, ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದಲ್ಲಿ ತಮ್ಮಿಷ್ಟದ ದೈವ ಗುರುವಾಯುಪ್ಪನ ಸಮ್ಮುಖದಲ್ಲಿ ಮದುವೆಯಾಗಬೇಕೆಂಬ ಮಲಯಾಳಿ ಮಹಿಳೆಯ ಬಹುಕಾಲದ ಕನಸು ಈಗ ನನಸಾಗಿದ್ದು, ಈ ಅಪರೂಪದ ಹಾಗೂ ಸುಂದರ ವಿವಾಹ ಸಮಾರಂಭವು ಎಲ್ಲರ ಗಮನ ಸೆಳೆದಿದೆ.

ಸ್ಕಾಟ್​ಲೆಂಡ್​ ಸಂಸತ್ತಿನ ಸದಸ್ಯರಾಗಿರುವ 55 ವರ್ಷದ ಮಾರ್ಟಿನ್ ಡೇ ಅವರು, ಪಿರವಮ್‌ನ ಪಾಂಬಕುಡ ಮೂಲದ 49 ವರ್ಷದ ನಿತಿನ್ ಚಂದ್ರ ಅವರ ಕುತ್ತಿಗೆಗೆ ಗುರುವಾಯೂರು ದೇವಸ್ಥಾನದಲ್ಲಿ ಮಾಂಗಲ್ಯಧಾರಣೆ ಮಾಡಿದರು. ನಿತಿನ್ ಅವರ ಈ ವಿಶೇಷ ವಿವಾಹಕ್ಕೆ 22 ವರ್ಷದ ಮಗ ವೇದಿಕ್ ಶಂಕರ್ ಕೂಡ ಸಾಕ್ಷಿಯಾದರು.

ದೇವಾಲಯದ ಧಾರ್ಮಿಕ ವಿಧಿ-ವಿಧಾನಗಳ ನಂತರ ಮದುವೆಯ ಇತರ ಸಂಪ್ರದಾಯಗಳು ಪುಷ್ಪಾಂಜಲಿ ಸಭಾಂಗಣದಲ್ಲಿ ಅತ್ಯಂತ ಸರಳ ಹಾಗೂ ಸುಂದರವಾಗಿ ನೆರವೇರಿದವು. ಪಾಂಬಕುಡದ ಕೆ.ಎನ್. ಚಂದ್ರನ್ ಮತ್ತು ರಾಜಮ್ಮ ದಂಪತಿಯ ಏಕೈಕ ಪುತ್ರಿಯಾದ ನಿತಿನ್, ಬಿ.ಟೆಕ್ ಮುಗಿಸಿ 2008ರಲ್ಲಿ ಯುಕೆಗೆ ತೆರಳಿದ್ದರು. ಆದರೆ, ಪಿಎಚ್‌ಡಿ ಅಧ್ಯಯನದ ಸಂದರ್ಭದಲ್ಲಿ ಯುಕೆಯ ವೀಸಾ ನಿಯಮಗಳಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಅವರ ವೀಸಾ ರದ್ದಾಗಿತ್ತು.
ವೀಸಾ ಸಮಸ್ಯೆಗೆ ಸಂಬಂಧಿಸಿದಂತೆ ಯುಕೆಯ ಸಂಸದೀಯ ಸಮಿತಿಗಳ ಮುಂದೆ ಸ್ನೇಹಿತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾಗ 2016ರಲ್ಲಿ ನಿತಿನ್ ಅವರಿಗೆ ಮಾಜಿ ಸಂಸದರಾಗಿದ್ದ ಮಾರ್ಟಿನ್ ಡೇ ಅವರ ಪರಿಚಯವಾಯಿತು. ನಂತರದ ದಿನಗಳಲ್ಲಿ ನಿತಿನ್ ಮೇಲೆ ಮೊದಲು ಪ್ರೀತಿ ವ್ಯಕ್ತಪಡಿಸಿದ ಮಾರ್ಟಿನ್, ತಾನು ವಿಚ್ಛೇದಿತೆ ಮತ್ತು 12 ವರ್ಷದ ಮಗನ ತಾಯಿ ಎಂದು ನಿತಿನ್ ಮುಕ್ತವಾಗಿ ತಿಳಿಸಿದರೂ ಸಹ ಮಾರ್ಟಿನ್​ ಡೇ ಅವರು ತಮ್ಮ ಪ್ರೀತಿಯಲ್ಲಿ ದೃಢವಾಗಿ ನಿಂತರು.
ಮದುವೆಗೆ ಮಾರ್ಟಿನ್ ಅವರ ತಂದೆ-ತಾಯಿ ಮಾರ್ಗರೇಟ್ ಮತ್ತು ರನ್ ಕೂಡ ಸಂಪೂರ್ಣ ಬೆಂಬಲ ನೀಡಿದರು. ವೀಸಾ ಪ್ರಕ್ರಿಯೆಗಳು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಈ ದಂಪತಿ ಮೊದಲು ಯುಕೆಯಲ್ಲೇ ವಿವಾಹವಾಗಲು ನಿರ್ಧರಿಸಿದರು. ಮಾರ್ಟಿನ್ ಅವರ ಪಾಲಕರ ಬೆಂಬಲದೊಂದಿಗೆ ಬೆಳೆದ ವೇದಿಕ್ ಶಂಕರ್ ಈಗ ಎಡಿನ್‌ಬರ್ಗ್‌ನಲ್ಲಿ ಹಿರಿಯ ಡೇಟಾಬೇಸ್ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿತಿನ್ ಅವರು ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುವುದರ ಜೊತೆಗೆ ಪತಿಯೊಂದಿಗೆ ಸ್ಕಾಟಿಷ್ ನ್ಯಾಷನಲ್ ಪಾರ್ಟಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಈ ಹಿಂದೆ ಕೇರಳಕ್ಕೆ ಮೂರು ಬಾರಿ ಭೇಟಿ ನೀಡಿದ್ದರೂ ವಿವಿಧ ಕಾರಣಗಳಿಂದ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ, ಆದರೆ ತಮ್ಮ ನಾಲ್ಕನೇ ಬಾರಿಯ ಕೇರಳ ಭೇಟಿಯಲ್ಲಿ ನಿತಿನ್ ಕೊನೆಗೂ ಗುರುವಾಯುಪ್ಪನ ಸನ್ನಧಿಯಲ್ಲಿ ಮದುವೆಯಾಗುವ ಮೂಲಕ ತಮ್ಮ ಸುದೀರ್ಘ ಕನಸನ್ನು ನನಸು ಮಾಡಿಕೊಂಡಿದ್ದಾರೆ, (ಏಜೆನ್ಸೀಸ್​).