Mamata Banerjee (ಚಿತ್ರ X)
- ಪಶ್ಚಿಮ ಬಂಗಾಳ ಚುನಾವಣೆಯ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಕಲಹ ಶುರುವಾಗಿದೆ
- ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ನಂತರ ಪಕ್ಷದ ಪರಿಸ್ಥಿತಿಯನ್ನು ಸುಧಾರಿಸಲು ಮಹತ್ವದ ಸಭೆ ಕರೆದ ಮಮತಾ ಬ್ಯಾನರ್ಜಿ
- ಈ ಸಭೆಗೆ ಬರಬೇಕಿದ್ದ 80 ಶಾಸಕರಲ್ಲಿ 10 ಶಾಸಕರು ಗೈರುಹಾಜರಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ
- ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಕಲಹ ಶುರುವಾದ ಲಕ್ಷಣಗಳು ಕಾಣಿಸುತ್ತಿವೆ. ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ ನಂತರ ಪಕ್ಷದ ಪರಿಸ್ಥಿತಿಯನ್ನು ಸುಧಾರಿಸಲು (Mamata Banerjee) ಮಮತಾ ಬ್ಯಾನರ್ಜಿ ಅವರು ಒಂದು ಮಹತ್ವದ ಸಭೆ ಕರೆದಿದ್ದರು. ಆದರೆ, ಈ ಸಭೆಗೆ ಬರಬೇಕಿದ್ದ 80 ಶಾಸಕರಲ್ಲಿ 10 ಶಾಸಕರು ಗೈರುಹಾಜರಾಗಿರುವುದು ಈಗ ದೊಡ್ಡ ಸುದ್ದಿಯಾಗಿದೆ.
ಮಮತಾ ಬ್ಯಾನರ್ಜಿ ಅವರ ನಿವಾಸದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು, ಸಂಸದರು ಮತ್ತು ಶಾಸಕರು ಭಾಗವಹಿಸುತ್ತಿದ್ದು, ವಿಧಾನಸಭೆಯ ಒಳಗೆ ಮತ್ತು ಹೊರಗೆ ತೃಣಮೂಲ ಕಾಂಗ್ರೆಸ್ ಚುನಾವಣೋತ್ತರ ಕಾರ್ಯತಂತ್ರವನ್ನು ಹೇಗೆ ರೂಪಿಸಬೇಕು ಎಂಬ ನೀಲನಕ್ಷೆಯನ್ನು ಸಿದ್ಧಪಡಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಟಿಎಂಸಿ ಮರುಜನ್ಮಕ್ಕೆ ಅಭಿಷೇಕ್ ಹೊಸ ಸ್ಟ್ರಾಟಜಿ!
ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಕೂಡಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸಭೆಯಲ್ಲಿ ಹಾಜರಿದ್ದ ಶಾಸಕರು ಮತ್ತು ಸಂಸದರೊಂದಿಗೆ ನೇರ ಮಾತುಕತೆ ನಡೆಸಲಿದ್ದಾರೆ.
ಲೋಪ್ ನಿರ್ಧಾರವಾಗುವ ಸಾಧ್ಯತೆ
ಪಕ್ಷದ ಆಂತರಿಕ ಮೂಲಗಳ ಪ್ರಕಾರ, ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆ ಯ ಬಗ್ಗೆ ಗಂಭೀರ ಚರ್ಚೆಯನ್ನು ನಡೆಸಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಆದಾಗ್ಯೂ, ಚುನಾವಣಾ ಫಲಿತಾಂಶದ ನಂತರ ಟಿಎಂಸಿ ವಿಧಾನಸಭೆಯೊಳಗೆ ಯಾವ ಅಂಶಗಳನ್ನು ಚರ್ಚಿಸಬೇಕು, ಜನಸಾಮಾನ್ಯರ ಪರವಾಗಿ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬ ನೀಲನಕ್ಷೆ ಸಿದ್ಧವಾಗುತ್ತಿದೆ ಎಂದು ಹೇಳಿದ್ದಾರೆ.
ಸತ್ಯಶೋಧನಾ ಸಮಿತಿ ರಚನೆಯಾಗುವ ಸಾಧ್ಯತೆ
ಚುನಾವಣಾ ಹಿನ್ನಡೆಗೆ ನಿಖರ ಕಾರಣಗಳನ್ನು ಪತ್ತೆಹಚ್ಚಲು ಈ ಸಭೆಯಲ್ಲಿ 10 ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ರಾಜ್ಯದ ವಿವಿಧ ಭಾಗಗಳಲ್ಲಿ ತೃಣಮೂಲ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂಬ ಪಕ್ಷದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರಾಜಭವನಕ್ಕೆ ಹೋಗಲ್ಲ, ರಾಜೀನಾಮೆ ಕೊಡಲ್ಲ
ಮತದಾನದ ಫಲಿತಾಂಶದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ, ಅತ್ಯಂತ ಆಕ್ರಮಣಕಾರಿ ದಾಟಿಯಲ್ಲಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದದಿದ್ದು, ನಾನು ರಾಜೀನಾಮೆ ನೀಡಲು ರಾಜಭವನಕ್ಕೆ ಹೋಗುವುದಿಲ್ಲ. ನನ್ನನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಲು ಯಾರಿಗೂ ಹಕ್ಕಿಲ್ಲ. ಇದು ಜನರ ಸೋಲಲ್ಲ, ವ್ಯವಸ್ಥಿತವಾಗಿ ಮಾಡಲಾದ ಸಂಚು. ನಾನು ಈಗ ಮುಕ್ತ ಹಕ್ಕಿ, ಜನರ ಸೇವೆಗೆ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದ್ದರು.
ಈ ಹೇಳಿಕೆಯು ಬಿಜೆಪಿಯಿಂದ ಟೀಕೆಗೆ ಒಳಗಾಗಿದ್ದು, ತೃಣಮೂಲ ಕಾಂಗ್ರೆಸ್ ಚುನಾವಣಾ ಸೋಲಿನ ಹೊರತಾಗಿಯೂ ಅಧಿಕಾರವನ್ನು ಉಳಿಸಿಕೊಳ್ಳಲು ಏಕೆ ಪ್ರಯತ್ನಿಸುತ್ತಿದೆ ಎಂದು ಪ್ರಶ್ನಿಸಿತು (ಏಜೆನ್ಸೀಸ್).