M K Stalin | ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಮತ್ತು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ
ಚೆನ್ನೈ: ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್, ಇಪಿಎಸ್ರನ್ನು ಹತ್ತು ಬಾರಿ ಸೋತವರು ಎಂದು ಕರೆದಿದ್ದಾರೆ ಮತ್ತು ಬಿಜೆಪಿಯನ್ನು ಸಮಾಧಾನಪಡಿಸಲು ದ್ರೋಹವನ್ನು ರಾಜಕೀಯ ಅಭ್ಯಾಸವಾಗಿ ಪರಿವರ್ತಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕುಂಭಕೋಣಂನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸ್ಟಾಲಿನ್, ಪಳನಿಸ್ವಾಮಿ ಅವರ ರಾಜಕೀಯ ಕೇವಲ ಎರಡು ನಡೆಗಳ ಸುತ್ತ ಸುತ್ತುತ್ತದೆ. ಒಂದೋ ಯಾರೊಬ್ಬರ ಕಾಲಿಗೆ ಬೀಳುವುದು, ಇಲ್ಲವೇ ಬಿಜೆಪಿಯ ಭಯದಿಂದ ಇತರರನ್ನು ಬಸ್ಸಿನ ಕೆಳಗೆ ಎಸೆಯುವುದು ಎಂದು ಹೇಳಿದರು.
ನಾವು ಪಳನಿಸ್ವಾಮಿಯವರ ದ್ರೋಹಗಳನ್ನು ಎಣಿಸಿದರೆ ಅವು ಚೀನಾದ ಮಹಾಗೋಡೆಯಷ್ಟು ಉದ್ದವಾಗಿವೆ, 2026 ರ ವಿಧಾನಸಭಾ ಚುನಾವಣೆಯನ್ನು ತಮಿಳುನಾಡಿನ ಹಿತಾಸಕ್ತಿಗಳನ್ನು ರಕ್ಷಿಸುವವರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡವರ ನಡುವಿನ ಹೋರಾಟವೆಂದು ವ್ಯಾಖ್ಯಾನಿಸಿದರು.
ದೆಹಲಿಯಲ್ಲಿರುವ ತನ್ನ ಯಜಮಾನರನ್ನು (ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ) ಮೆಚ್ಚಿಸಲು ಎಐಎಡಿಎಂಕೆ ನಿರಂತರವಾಗಿ ಅಲ್ಪಸಂಖ್ಯಾತರಿಗೆ ದ್ರೋಹ ಮಾಡುತ್ತಿದೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಉಲ್ಲೇಖಿಸಿದ ಸ್ಟಾಲಿನ್, ಅದನ್ನು ಸಂವಿಧಾನಬಾಹಿರ ಎಂದು ಕರೆಯುವ ಮೂಲಕ ಈ ಕಾನೂನನ್ನು ತಮಿಳುನಾಡಿನಲ್ಲಿ ಜಾರಿಗೆ ತರಲಾಗುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದವರು ನಾನೇ ಎಂದು ಹೇಳಿದರು.
2020 ರಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಗಳನ್ನು ನೆನಪಿಸಿಕೊಂಡ ಸ್ಟಾಲಿನ್, ಅಂದಿನ ಎಐಎಡಿಎಂಕೆ ಸರ್ಕಾರ ವಾಷರ್‌ಮನ್‌ಪೇಟೆಯಲ್ಲಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್‌ಗೆ ಆದೇಶಿಸಿತ್ತು ಎಂದು ಹೇಳಿದರು.
ತ್ರಿವಳಿ ತಲಾಖ್ ನಿಷೇಧದ ಬಗ್ಗೆ ಎಐಎಡಿಎಂಕೆಯದ್ದು ಇಬ್ಬಗೆ ನೀತಿ. ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಧೈರ್ಯವಿಲ್ಲ ಎನ್ನುವುದು ಸ್ಟಾಲಿನ್ ಆರೋಪವಾಗಿದ್ದು, ಡಿಎಂಕೆ ಸಂಸತ್ತು ಮತ್ತು ನ್ಯಾಯಾಲಯದಲ್ಲಿ ಪ್ರಸ್ತಾವಿತ ಬದಲಾವಣೆಗಳ ವಿರುದ್ಧ ಹೋರಾಡಿತು, ಪ್ರಧಾನಿಗೆ ಪತ್ರ ಬರೆದು ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯಕ್ಕಾಗಿ ಒತ್ತಾಯಿಸಿತು ಎಂದರು.
ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಚರ್ಚೆಯ ಸಂದರ್ಭದಲ್ಲಿ ಎಐಎಡಿಎಂಕೆ ಸಂಸದರು ಕೇವಲ 11 ಸೆಕೆಂಡುಗಳ ಕಾಲ ಮಾತನಾಡಿದರು ಮತ್ತು ಶಾಸನವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಿಲ್ಲ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
ತಮಿಳುನಾಡನ್ನು ರಾಜ್ಯದ ಕಲ್ಯಾಣವನ್ನು ಕಾಪಾಡುವವರು ಆಳುತ್ತಾರೋ ಅಥವಾ ಬಿಜೆಪಿಯ ನೆರಳಿನಲ್ಲಿ ಕಾರ್ಯನಿರ್ವಹಿಸುವ ನಾಯಕರು ಆಳತ್ತಾರೋ ಎನ್ನುವುದನ್ನು ಚುನಾವಣೆ ನಿರ್ಧರಿಸುತ್ತದೆ ಎಂದು ಹೇಳಿದರು. ತಮಿಳುನಾಡಿನಲ್ಲಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ(ಏಜೆನ್ಸೀಸ್).