ಒಡಿಶಾ ಆಸ್ಪತ್ರೆಯ ಐಸಿಯುನಲ್ಲಿ ಅಗ್ನಿ ಅವಘಡ: ಮಲಗಿದ್ದಲ್ಲೇ 10 ರೋಗಿಗಳ ದುರ್ಮರಣ, 11 ಮಂದಿ ಸ್ಥಿತಿ ಗಂಭೀರ! SCB Medical College Hospital
- ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅಗ್ನಿ ಅವಘಡ
- ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹತ್ತು ರೋಗಿಗಳು ಸಾವು
- ಮಲಗಿದ್ದ ರೋಗಿಗಳನ್ನು ರಕ್ಷಿಸುವ ಸಂದರ್ಭದಲ್ಲಿ ಗಾಯಗೊಂಡ ಆಸ್ಪತ್ರೆಯ 11 ಸಿಬ್ಬಂದಿ
- ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ
ಭುವನೇಶ್ವರ್: ಒಡಿಶಾದ ಕಟಕ್‌ನಲ್ಲಿರುವ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ( SCB Medical College Hospital ) ತೀವ್ರ ನಿಗಾ ಘಟಕದಲ್ಲಿ ಇಂದು (ಮಾರ್ಚ್ 16) ಬೆಳಗ್ಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಹತ್ತು ರೋಗಿಗಳು ಮೃತಪಟ್ಟಿದ್ದು, ಕನಿಷ್ಠ 11 ಆಸ್ಪತ್ರೆ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಕಿ ಹೊತ್ತಿಕೊಂಡ ಬೆನ್ನಲ್ಲೇ ಬೆಡ್ ಮೇಲೆ ಮಲಗಿದ್ದ ರೋಗಿಗಳನ್ನು ರಕ್ಷಿಸುವ ಸಂದರ್ಭದಲ್ಲಿ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ 2:30 ರಿಂದ 3 ಗಂಟೆಯ ಸುಮಾರಿಗೆ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವಾರ್ಡ್ನಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಲ್ಲಿ 10 ಮಂದಿ ಮಲಗಿದ್ದಲ್ಲೇ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹಲವಾರು ಅಗ್ನಿಶಾಮಕ ವಾಹನಗಳು ಧಾವಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಅಂದಹಾಗೆ, ಎಸ್‌ಸಿಬಿ ಆಸ್ಪತ್ರೆ ಒಡಿಶಾದಲ್ಲಿ ಸರ್ಕಾರಿ ಸ್ವಾಮ್ಯದ ಪ್ರಮುಖ ವೈದ್ಯಕೀಯ ಸೌಲಭ್ಯವಾಗಿದೆ. ಈ ಘಟನೆ ನಡೆದ ಸ್ವಲ್ಪ ಸಮಯದ ನಂತರ, ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಆರೋಗ್ಯ ಸಚಿವ ಮುಖೇಶ್ ಮಹಾಲಿಂಗ್ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇತರ ರೋಗಿಗಳನ್ನು ಸಹ ಭೇಟಿ ಮಾಡಿದರು.
ಒಟ್ಟು 23 ರೋಗಿಗಳನ್ನು ಇತರ ವಿಭಾಗಗಳಿಗೆ ಸ್ಥಳಾಂತರಿಸಲಾಗಿದೆ. ಇತರ ಐಸಿಯುಗಳು ಮತ್ತು ವಾರ್ಡ್‌ಗಳಿಗೆ ಸ್ಥಳಾಂತರಿಸುವಾಗ ಗಂಭೀರ ಸ್ಥಿತಿಯಲ್ಲಿದ್ದ 7 ರೋಗಿಗಳು ಮೃತಪಟ್ಟರು. ಉಳಿದ ಮೂವರು ರೋಗಿಗಳು ಸ್ಥಳಾಂತರ ಮಾಡಿದ ಬಳಿಕ ಸಾವಿಗೀಡಾದರು. ಗಾಯಗೊಂಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೃತರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಮಾಝಿ ಘೋಷಿಸಿದ್ದಾರೆ. ಅಲ್ಲದೆ, ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೂ ಆದೇಶಿಸಿದ್ದಾರೆ, (ಏಜೆನ್ಸೀಸ್).