20 ರೂಪಾಯಿ ಸುಲಿಗೆಗೆ 10 ಲಕ್ಷ ದಂಡ
ಅಲಿಗಢ: ನಾವು ಅಂಗಡಿಯಲ್ಲಿ ಏನಾದರೂ ವಸ್ತು ಖರೀದಿಸಲು ಹೋದಾಗ, ಅವರು ಗರಿಷ್ಠ ಚಿಲ್ಲರೆ ಬೆಲೆ (MRP) ಗಿಂತ ಹೆಚ್ಚಿನ ಬೆಲೆ ಹೇಳಿದರೂ ಈ ಹತ್ತು-ಇಪ್ಪತ್ತು ರೂಪಾಯಿಗೆ ಯಾರು ಜಗಳ ಮಾಡುತ್ತಾರೆಂದು ಸುಮ್ಮನೆ ಬಂದು ಬಿಡುತ್ತೆವೆ.
ಆದರೆ, ಉತ್ತರ ಪ್ರದೇಶದ ಅಲಿಗಢದ (Aligarh Consumer Court) ಈ ಗ್ರಾಹಕ ಮಾತ್ರ ಹಾಗೆ ಸುಮ್ಮನೆ ಕೂರಲಿಲ್ಲ. ಸಿಗರೇಟ್ ಪ್ಯಾಕೆಟ್ ಮೇಲೆ 20 ರೂಪಾಯಿ ಹೆಚ್ಚಿಗೆ ಪಡೆದಿದ್ದಕ್ಕೆ ಅಂಗಡಿಯವನಿಗೆ ಮಾತ್ರವಲ್ಲ, ದೇಶದ ಪ್ರಸಿದ್ಧ ಸಿಗರೇಟ್ ತಯಾರಕ ಕಂಪನಿ ITC ಗೂ ಬೆವರಿಳಿಸಿದ್ದಾರೆ.
ಅಸಲಿಗೆ ನಡೆದಿದ್ದೇನು?
ಜನವರಿ 29 ರಂದು ಗ್ರಾಹಕರೊಬ್ಬರು ಅಲಿಗಢದ ಸ್ಥಳೀಯ ಅಂಗಡಿಯೊಂದಕ್ಕೆ ಕ್ಲಾಸಿಕ್ ಬ್ರಾಂಡ್ ಸಿಗರೇಟ್ ಪ್ಯಾಕೆಟ್ ಖರೀದಿಸಲು ಹೋಗಿದ್ದರು. ಪ್ಯಾಕೆಟ್ ಮೇಲಿದ್ದ ಬೆಲೆಗಿಂತ ಅಂಗಡಿಯವನು 20 ರೂಪಾಯಿ ಹೆಚ್ಚಿಗೆ ಕೇಳಿದ್ದಾನೆ. ಯಾಕಣ್ಣಾ MRP ಗಿಂತ ಜಾಸ್ತಿ ಕೇಳ್ತೀಯಾ? ಅಂತ ಗ್ರಾಹಕ ಪ್ರಶ್ನಿಸಿದ್ದಕ್ಕೆ, ಅಂಗಡಿಯವನು ಉಡಾಫೆಯಿಂದ ಕೊಟ್ರೆ ಕೊಡು, ಇಲ್ದಿದ್ರೆ ನಡಿ, 360 ರೂಪಾಯಿ ಫಿಕ್ಸ್ ಅಂದಿದ್ದಾನೆ.
ಸಾಮಾನ್ಯವಾಗಿ ಜನ ಜಗಳ ಬೇಡ ಅಂತ ಹಣ ಕೊಟ್ಟು ಬರುತ್ತಾರೆ. ಆದರೆ ಈ ಗ್ರಾಹಕ ಮಾತ್ರ ಸಖತ್ ಶಾರ್ಪ್ ಆಗಿದ್ದ. ಅಂಗಡಿಯವನ ಉಡಾಫೆ ಮಾತಿಗೆ ಅಲ್ಲೇ ಬುದ್ಧಿ ಕಲಿಸೋ ಬದಲು, ಬಿಲ್ ಮತ್ತು ವಿಡಿಯೋ ಸೆರೆಹಿಡಿದ್ದಿದ್ದಾನೆ. ನಂತರ ಅಲ್ಲಿಂದ ನೇರವಾಗಿ ಗ್ರಾಹಕ ನ್ಯಾಯಾಲಯದ (Consumer Court) ಬಾಗಿಲನ್ನು ತಟ್ಟಿದ್ದಾನೆ.
ಕೋರ್ಟ್‌ನಿಂದ ದೊರಬಂದ ದುಬಾರಿ ತೀರ್ಪು!
ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ಆಯೋಗದ ಅಧ್ಯಕ್ಷೆ ಹಸ್ನೈನ್ ಖುರೇಷಿ ಮತ್ತು ಸದಸ್ಯೆ ಪೂರ್ಣಿಮಾ ಸಿಂಗ್ ರಜಪೂತ್ ಅವರಿದ್ದ ನ್ಯಾಯಪೀಠ, ವ್ಯಾಪಾರಿಯ ನಡೆಗೆ ತೀವ್ರ ತರಾಟೆಗೆ ತೆಗೆದುಕೊಂಡಿತು. ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಅಡಿಯಲ್ಲಿ ಇಬ್ಬರನ್ನೂ ತಪ್ಪಿತಸ್ಥರು ಎಂದು ಘೋಷಿಸಿತು.
ಗ್ರಾಹಕರನ್ನು ಸುಲಿಗೆ ಮಾಡಿದ್ದಕ್ಕೆ ಅಂಗಡಿಕಾರ ಮತ್ತು ಐಟಿಸಿ (ITC) ಕಂಪನಿಗೆ ಒಟ್ಟಾಗಿ 10 ಲಕ್ಷ ರೂಪಾಯಿ ದಂಡ ಪಾವತಿಸಬೇಕೆಂದು ಹೇಳಿದೆ. ಜೊತೆಗೆ ಗ್ರಾಹಕನಿಂದ ಹೆಚ್ಚುವರಿಯಾಗಿ ಕಿತ್ತುಕೊಂಡ 20 ರೂಪಾಯಿಯನ್ನು ವಾರ್ಷಿಕ ಶೇಕಡಾ 18ರಷ್ಟು ಬಡ್ಡಿಯೊಂದಿಗೆ ವಾಪಸ್ ನೀಡಬೇಕು ಎಂದೂ ಹೇಳಿದೆ.
ನಿಮಗೂ ಹೀಗಾಗಿದೆಯಾ? ನೀವೂ ಬಿಡಬೇಡಿ, ಹೀಗೆ ದೂರು ಕೊಡಿ!
ಯಾವುದೇ ವಸ್ತುವಿನ ಮೇಲೆ ಮುದ್ರಿತ ಬೆಲೆಗಿಂತ (MRP) ಒಂದು ಪೈಸೆ ಜಾಸ್ತಿ ತಗೊಂಡ್ರೂ ಅದು ಕಾನೂನುಬಾಹಿರ ಮತ್ತು ಅಪರಾಧ. ನಿಮಗೂ ಅಂಗಡಿಗಳಲ್ಲಿ ಹೀಗೆ ಮೋಸ ಆಗ್ತಿದ್ರೆ, ಸುಮ್ಮನೆ ಕೂರಬೇಡಿ. ಈ ಸರಳ ಹಂತಗಳ ಮೂಲಕ ನೀವೂ ದೂರು ನೀಡಬಹುದು:
ಬಿಲ್ ಕೇಳಿ ಪಡೆಯಿರಿ:
ನೀವು ವಸ್ತು ಖರೀದಿಸಿದಾಗ ಅಂಗಡಿಯವನಿಂದ ಕಡ್ಡಾಯವಾಗಿ ನಗದು ಮೆಮೊ ಅಥವಾ ಬಿಲ್ ಪಡೆಯಿರಿ. ಆತ ಜಾಸ್ತಿ ದುಡ್ಡು ತಗೊಂಡಿರೋದು ಅದರಲ್ಲಿ ಮೆನ್ಷನ್ ಇರಬೇಕು. ಬಿಲ್ ಕೊಡದಿದ್ದರೆ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಿ.
ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH):
ನೀವು ಮನೆಯಲ್ಲೇ ಕೂತು ಇಂಟರ್ನೆಟ್ ಮೂಲಕ ನ್ಯಾಷನಲ್ ಕನ್ಸ್ಯೂಮರ್ ಹೆಲ್ಪ್‌ಲೈನ್ ವೆಬ್‌ಸೈಟ್‌ಗೆ ಹೋಗಿ ದೂರು ದಾಖಲಿಸಬಹುದು.
ಉಚಿತ ಕರೆ ಮಾಡಿ:
ಸರ್ಕಾರದ ಟೋಲ್-ಫ್ರೀ ಸಂಖ್ಯೆ 1915 ಗೆ ಕರೆ ಮಾಡಿ ನಿಮ್ಮ ದೂರನ್ನು ಸುಲಭವಾಗಿ ರಿಜಿಸ್ಟರ್ ಮಾಡಬಹುದು.
ಇ-ದಾಖಿಲ್ (E-Daakhil):
ಕೋರ್ಟ್‌ಗೆ ಅಲೆಯುವ ಕೆಲಸವಿಲ್ಲದೇ ಇ-ದಾಖಿಲ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲೇ ಗ್ರಾಹಕ ನ್ಯಾಯಾಲಯಕ್ಕೆ ಅಧಿಕೃತ ದೂರನ್ನು ಸಲ್ಲಿಸಬಹುದು, (ಏಜನ್ಸೀಸ್).