ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್: ಕಳೆದ ಮೇ ತಿಂಗಳಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ಸಂಘರ್ಷದಲ್ಲಿ ಎಂಟು ವಿಮಾನಗಳನ್ನು ಹೊಡೆದುಹಾಕಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್( Donald Trump) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅದರೆ ವಿಮಾನಗಳು ಯಾವ ದೇಶಕ್ಕೆ ಸೇರಿವೆ ಎಂಬುದನ್ನು ತಿಳಿಸಿಲ್ಲ.
ಈ ಬಗ್ಗೆ ಬುಧವಾರ ಫ್ಲೋರಿಡಾದಲ್ಲಿ ನಡೆದ ಅಮೆರಿಕ ಬಿಸಿನೆಸ್ ಫೋರಂ ಮಿಯಾಮಿಯನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ಸಂಘರ್ಷದ ಸಮಯದಲ್ಲಿ ಎಂಟು ವಿಮಾನಗಳನ್ನು ಹೊಡೆದುಹಾಕಲಾಗಿದೆ ಎಂದು ಹೇಳಿದ್ದಾರೆ. ಇವು ಯಾವ ದೇಶಕ್ಕೆ ಸೇರಿವೆ ಎಂಬುದನ್ನು ನಿರ್ದಿಷ್ಟಪಡಿಸಲಿಲ್ಲ.
ಇಂಡೋ-ಪಾಕ್ ಸಂಘರ್ಷದ ಸಮಯದಲ್ಲಿ ಏಳು ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದು ಟ್ರಂಪ್ ಸಮರ್ಥಿಸಿಕೊಳ್ಳುತ್ತಿದ್ದಾರೆ. ಪಾಕ್ ಮತ್ತು ಭಾರತ ನಡುವೆ ನಾನು ಉಭಯ ದೇಶಗಳೊಂದಿಗೆ ವ್ಯಾಪಾರ ಒಪ್ಪಂದದ ಮಧ್ಯದಲ್ಲಿದ್ದೆ, ನಂತರ ಎರೆಡು ರಾಷ್ಟ್ರಗಳು ಯುದ್ಧಕ್ಕೆ ಹೋಗುತ್ತಿದ್ದಾರೆಂದು ನಾನು ಕೇಳಿದೆ. ಅಲ್ಲದೆ, ಈ ಸಂಘರ್ಷದಲ್ಲಿ ಏಳು ವಿಮಾನಗಳನ್ನು ಹೊಡೆದುರುಳಿಸಲಾಯಿತು ಮತ್ತು ಎಂಟನೆಯ ವಿಮಾನಕ್ಕೆ ತೀವ್ರವಾಗಿ ಹಾನಿಯಾಗಿದೆ ಎಂದು ಟ್ರಂಪ್ ತಿಳಿಸಿದ್ಧಾರೆ.
ನಾನು ಹೇಳಿದ್ದೆ, ಇದು ಯುದ್ಧ. ನೀವು ಶಾಂತಿಗೆ ಒಪ್ಪದ ಹೊರತು ನಾನು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ. ಅದರೆ ಎರಡೂ ರಾಷ್ಟ್ರಗಳು ಇಲ್ಲ. ಇದಕ್ಕೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದವು. ಇದಕ್ಕೂ ನನಗೂ ಸಂಬಂಧವಿದೆ ಎಂದು ನಾನು ಹೇಳಿದೆ. ನೀವು ಎರೆಡು ಪರಮಾಣು ಶಕ್ತಿಗಳಿರುವ ರಾಷ್ಟ್ರಗಳು. ನಾನು ನಿಮ್ಮೊಂದಿಗೆ ವ್ಯಾಪಾರ ಮಾಡುತ್ತಿಲ್ಲ. ನೀವು ಪರಸ್ಪರ ಯುದ್ಧದಲ್ಲಿದ್ದರೆ ನಾವು ನಿಮ್ಮೊಂದಿಗೆ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದೆ ಎಂದು ಟ್ರಂಪ್ ಹೇಳಿದ್ದಾರೆ.
ಒಂದು ದಿನದ ನಂತರ, ನಾವು ಶಾಂತಿ ಸ್ಥಾಪಿಸಿದ್ದೇವೆ ಎಂದು ನನಗೆ ಕರೆ ಬಂತು. ನಾನು ಧನ್ಯವಾದಗಳು ಎಂದು ಹೇಳಿ ಮತ್ತೆ ವ್ಯಾಪಾರ ಮಾಡೋಣ ಎಂದು ಹೇಳಿದೆ. ಅದರೆ ಟ್ರಂಪ್ ಎರಡು ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯನ್ನು ಇತ್ಯರ್ಥಗೊಳಿಸಲು ಸಹಾಯ ಮಾಡಿದೆ ಎಂದು 60 ಕ್ಕೂ ಹೆಚ್ಚು ಬಾರಿ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ.
ಅದರೆ, ಭಾರತವು ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ಕಳೆದ ಏಪ್ರಿಲ್ 22 ರಂದು 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿತು.
ನಾಲ್ಕು ದಿನಗಳ ಕಾಲ ನಡೆದ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಸಂಘರ್ಷವನ್ನು ಕೊನೆಗೊಳಿಸಲು ಒಪ್ಪಂದಕ್ಕೆ ಬಂದವು. (ಏಜೆನ್ಸೀಸ್)
ಮಿಯಾಮಿಯಲ್ಲಿ ಮಾಡಿದ ಭಾಷಣದಲ್ಲಿ, ಟ್ರಂಪ್ ಅವರು ಇಸ್ರೇಲ್ ಮತ್ತು ಇರಾನ್, ಈಜಿಪ್ಟ್ ಮತ್ತು ಇಥಿಯೋಪಿಯಾ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಹಾಗೂ ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಸಂಘರ್ಷವನ್ನು ಪರಿಹರಿಸಲು ಸಹಾಯ ಮಾಡಿದ್ದಾರೆ ಎಂದು ಹೇಳಿದರು,(ಏಜೆನ್ಸೀಸ್).