Tejashwi Yadav | ತೇಜಸ್ವಿ ಯಾದವ್ ಸಂಗ್ರಹ ಚಿತ್ರ
- ಬಿಹಾರ ವಿಧಾನಸಭೆಯ ನೂತನ ವಿಪಕ್ಷ ನಾಯಕರಾಗಿ ತೇಜಸ್ವಿ ಯಾದವ್ ಆಯ್ಕೆ
- ಯಾವುದೇ ರಾಜ್ಯದ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ನೇತೃತ್ವ ವಹಿಸಿಕೊಳ್ಳಬೇಕಾದರೆ ಒಂದು ಪಕ್ಷವು ಸದನದ ಒಟ್ಟು ಸದಸ್ಯ ಬಲದ ಕನಿಷ್ಠ 10 ಪ್ರತಿಶತ ಸ್ಥಾನಗಳನ್ನು ಪಡೆಯಬೇಕು.
- ಕುಟುಂಬದ ಭದ್ರಕೋಟೆಯಾದ ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತೇಜಸ್ವಿ ಯಾದವ್
ಪಟನಾ: ಬಿಹಾರ ವಿಧಾನಸಭೆಯ ನೂತನ ವಿರೋಧ ಪಕ್ಷದ ನಾಯಕರಾಗಿ ಆರ್‌ಜೆಡಿಯ ತೇಜಸ್ವಿ ಯಾದವ್ ಸೋಮವಾರ (ನ.17) ಆಯ್ಕೆಯಾಗಿದ್ದಾರೆ. ಯಾವುದೇ ರಾಜ್ಯದ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ನೇತೃತ್ವ ವಹಿಸಿಕೊಳ್ಳಬೇಕಾದರೆ ಒಂದು ಪಕ್ಷವು ಸದನದ ಒಟ್ಟು ಸದಸ್ಯ ಬಲದ ಕನಿಷ್ಠ 10 ಪ್ರತಿಶತ ಸ್ಥಾನಗಳನ್ನು ಪಡೆಯಬೇಕು. 25 (243 ರಲ್ಲಿ 10%) ಕ್ಷೇತ್ರಗಳಲ್ಲಿ ಜಯಸಾಧಿಸಿರುವ ಆರ್ಜೆಡಿಗೆ ಈ ಸ್ಥಾನ ಒಲಿದಿದೆ.
ತಮ್ಮ ಕುಟುಂಬದ ಭದ್ರಕೋಟೆಯಾದ ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ತೇಜಸ್ವಿ ಯಾದವ್, ಮತ ಎಣಿಕೆಯ ಆರಂಭಿಕ ಸುತ್ತಿನಲ್ಲಿ ಹಿನ್ನಡೆ ಅನುಭವಿಸುತ್ತಲೇ ಸಾಗಿದ್ದರು, ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ ವಿರುದ್ಧ 14,532 ಮತಗಳ ಗೆಲುವು ಸಾಧಿಸಿದರು. ತೇಜಸ್ವಿ ಯಾದವ್ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ಮತ್ತು ಬಿಜೆಪಿ ಬಿಹಾರ ಫಲಿತಾಂಶಗಳನ್ನು ತಿರುಚಿದೆ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಉದಿತ್ ರಾಜ್ ಆರೋಪಿಸಿದ್ದು, ಅನೇಕ ಸುತ್ತಿನಲ್ಲಿ ಹಿನ್ನಡೆಯಲ್ಲಿಯೇ ಇದ್ದ ತೇಜಸ್ವಿ ಕೊನೆಯ ಕ್ಷಣದಲ್ಲಿ ಗೆಲುವು ಸಾಧಿಸಲು ಹೇಗೆ ಸಾಧ್ಯ ಎಂದರು.
ತೇಜಸ್ವಿ ಚುನಾವಣೆಯಲ್ಲಿ ಗೆಲ್ಲಲಿಲ್ಲ, ಆದರೆ ಅವರು (ಬಿಜೆಪಿ ಮತ್ತು ಭಾರತ ಚುನಾವಣಾ ಆಯೋಗ) ಗೆಲುವನ್ನು ಖಚಿತಪಡಿಸಿದರು. ಸಂಜೆಯವರೆಗೂ ಹಿನ್ನಡೆಯಲಿದ್ದವರನ್ನು, ಚುನಾವಣೆಗಳು ನ್ಯಾಯಯುತವಾಗಿ ನಡೆಯುತ್ತವೆ ಎಂದು ಬಿಂಬಿಸಲು ಅವರು ಗೆದ್ದಿದ್ದಾರೆ ಎಂದು ಖಚಿತಪಡಿಸಿದರು. ಬಿಜೆಪಿ ಎಸ್‌ಐಆರ್ ಮತ್ತು ಇವಿಎಂಗಳನ್ನು ಬಳಸಿಕೊಂಡು ತಮ್ಮ ಗೆಲುವನ್ನು ಪಡೆಯುತ್ತಿದೆ, ಇದು ಭಾರತದ ಸಂವಿಧಾನವನ್ನು ನಾಶಮಾಡಲಿದ್ದು, ಚುನಾವಣೆಗಳು ಹೇಗೆ ನಡೆಯಬೇಕು ಎಂಬುದು ಮೊದಲೇ ನಿರ್ಧಾರವಾಗಿತ್ತು ಎಂದು ಮಾಧ್ಯಮಗಳಿಗೆ ತಿಳಿಸಿದರು.
ಈ ಚುನಾವಣೆಯ ಸೋಲು ಮಹಾಘಟಬಂಧನ್ಗೆ ಮರ್ಮಾಘಾತ ನೀಡಿದ್ದು, ಆರ್‌ಜೆಡಿಯ 75 ರಿಂದ 25 ಕ್ಕೆ ಕುಸಿದಿದ್ದರೆ, ಇತ್ತ ಕಾಂಗ್ರೆಸ್ 61 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ ಆರು ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ(ಏಜೆನ್ಸೀಸ್).