ಕೇಂದ್ರ ಗೃಹ ಸಚಿವ ಅಮಿತ್ ಷಾ Union Home Minister Amit Shah 
ದೇಶ

ದೆಹಲಿ ಸ್ಫೋಟದ ಅಪರಾಧಿಗಳನ್ನು ಸರ್ಕಾರ ಪಾತಾಳದಲ್ಲಿದ್ದರು ಬೇಟೆಯಾಡುತ್ತದೆ: ಅಮಿತ್ ಷಾ | Amit Shah

ನವದೆಹಲಿ: ದೆಹಲಿ ಸ್ಫೋಟದ ಅಪರಾಧಿಗಳನ್ನು ಪಾತಾಳದಲ್ಲಿದ್ದರು ಸರ್ಕಾರ ಬೇಟೆಯಾಡುತ್ತದೆ. ಅಲ್ಲದೆ, ಉಗ್ರರು ಮಾಡಿದ ಅಪರಾಧಕ್ಕೆ ಕಠಿಣ ಶಿಕ್ಷೆ ವಿಧಿತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಸೋಮವಾರ (ನ.17) ಹೇಳಿದ್ದಾರೆ.
ಈ ಬಗ್ಗೆ ಫರಿದಾಬಾದ್‌ನಲ್ಲಿ ನಡೆದ ಉತ್ತರ ವಲಯ ಮಂಡಳಿಯ (NZC) 32 ನೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಷಾ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಯೋತ್ಪಾದನೆಯನ್ನು ಬೇರು ಸಮೇತ ನಿರ್ಮೂಲನೆ ಮಾಡುವುದು ನಮ್ಮ ಸಾಮೂಹಿಕ ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ.

ದೆಹಲಿ ಸ್ಫೋಟದ ಸಹ-ಸಂಚುಕೋರನನ್ನು NIA ಬಂಧಿಸಿದೆ

ದೆಹಲಿ ಕೆಂಪು ಕೋಟೆ ಕಾರ್ ಬಾಂಬ್ ಸ್ಫೋಟದ ತನಿಖೆಯು ವೇಗವಾಗಿ ಸಾಗುತ್ತಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಯೋತ್ಪಾದಕ ಉಮರ್ ಉನ್ ನಬಿಯ ಮುಖ್ಯ ಸಹಾಯಕ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್‌ನನ್ನು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಬಂಧಿಸಿದೆ.
ಈ ಬಂಧಿತ ಶಂಕಿತ ಉಗ್ರನು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿಯಾದ ಜಾಸಿರ್ ಬಾಂಬ್ ದಾಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಎಂದು ಗುರುತಿಸಲಾಗಿದೆ. NIA ಪ್ರಕಾರ, ಜಾಸಿರ್ ಭಯೋತ್ಪಾದಕರಿಗೆ ತಾಂತ್ರಿಕ ನೆರವು ನೀಡಿದ್ದಾನೆ. ಅಲ್ಲದೆ, ದಾಳಿಗಳಿಗೆ ಉಪಯುಕ್ತವಾಗುವಂತೆ ಡ್ರೋನ್‌ಗಳನ್ನು ಮಾರ್ಪಡಿಸಲು ಇವನು ಪ್ರಯತ್ನಿಸಿದ್ದನು ಎಂದು ತಿಳಿದು ಬಂದಿದೆ.

ದೆಹಲಿ ಸ್ಫೋಟ

ನವೆಂಬರ್ 10 ರ ಸಂಜೆ ಲಾಲ್ ಕ್ವಿಲಾ ಮೆಟ್ರೋ ನಿಲ್ದಾಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿ 15 ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡರು. ಅಲ್ಲದೆ, ಈ ಸ್ಫೋಟವು ಹತ್ತಿರದ ಹಲವಾರು ವಾಹನಗಳನ್ನು ಸಹ ಆವರಿಸಿ ವ್ಯಾಪಕ ಹಾನಿಯನ್ನು ಉಂಟುಮಾಡಿತು.
ಪ್ರಾಥಮಿಕ ತನಿಖೆಗಳು ಈ ಸ್ಫೋಟವನ್ನು ಇತ್ತೀಚೆಗೆ ಫರಿದಾಬಾದ್‌ನಲ್ಲಿ ಪತ್ತೆಯಾದ ಭಯೋತ್ಪಾದಕ ಮಾಡ್ಯೂಲ್‌ಗೆ ಸಂಬಂಧಿಸಿವೆ. ಹಲವಾರು ಶಂಕಿತರನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ದಾಳಿಯ ಹಿಂದಿನ ಸಂಪೂರ್ಣ ಜಾಲವನ್ನು ನಾಶಮಾಡಲು ಅಧಿಕಾರಿಗಳು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ,(ಏಜೆನ್ಸೀಸ್).