ಆರ್​ಜೆಡಿ ಮುಖ್ಯಸ್ದ ಲಾಲು ಪ್ರಸಾದ್ ಯಾದವ್ ಮತ್ತು ಪುತ್ರ ತೇಜಸ್ವಿ ಯಾದವ್ 
ದೇಶ

ಬಿಹಾರ ಚುನಾವಣೆ: ಸೋಲಿನ ಹೊರತಾಗಿಯೋ ಬಿಜೆಪಿ, ಜೆಡಿಯುಗಿಂತ ಹೆಚ್ಚಿನ ಮತ ಪಡೆದ ಆರ್​​ಜೆಡಿ| RJD

ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಆಡಳಿತರೂಢ ಎನ್​ಡಿಎ ಮೈತ್ರಿಕೂಟ ಭರ್ಜರಿ ಗೆಲುವಿನ ಮೂಲಕ ಅಧಿಕಾರವನ್ನು ಉಳಿಸಿಕೊಂಡಿದೆ. ಆದರೆ ಬಿಜೆಪಿ, ಜೆಡಿಯುಗಿಂತ ಹೀನಾಯವಾಗಿ ಸೋತಿರುವ ತೇಜಸ್ವಿ ಯಾದವ್ ನೇತೃತ್ವದ ಆರ್​ಜೆಡಿ(RJD) ಅತೀ ಹೆಚ್ಚು ಮತಗಳನ್ನು ಪಡೆಯುವುದರಲ್ಲಿ ಮುಂದಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ತೇಜಸ್ವಿ ಯಾದವ್ ನೇತೃತ್ವದ ಆರ್​ಜೆಡಿ ಈ ಚುನಾವಣೆಯಲ್ಲಿ ಶೇಕಡಾ 23 ರಷ್ಟು ಮತಗಳನ್ನು ಪಡೆದಿದೆ. ಇದು ಭಾರತೀಯ ಜನತಾ ಪಕ್ಷಗಿಂತ ಶೇ. 2.92ರಷ್ಟು, ಸಿಎಂ ನಿತೀಶ್ ಕುಮಾರ್ ಅವರ ಜೆಡಿಯುಗಿಂತ ಶೇ. 3.75ರಷ್ಟು ಹೆಚ್ಚು ಎಂದು ತಿಳಿಸಿದೆ.
2020ರ ಚುನಾವಣೆಯಲ್ಲೂ ಆರ್​ಜೆಡಿ ಶೇ. 23.11ರಷ್ಟು ಮತ ಪಡೆದಿದ್ದ ಆರ್​ಜೆಡಿ, 144 ಸ್ಥಾನಗಳಲ್ಲಿ ಸ್ಪರ್ಧಿಸಿ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ 141 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಇನ್ನೂ ಆರ್​ಜೆಡಿಯ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಕೇವಲ ಆರು, ಸಿಪಿಐ(ಎಂಎಲ್) ಎರಡು, ಸಿಪಿಐ(ಎಂ) ಒಂದು ಸ್ಥಾನ ಹಾಗೂ ಇತರೆ ಒಬ್ಬರು ಗೆದ್ದು ಒಟ್ಟು ವಿಪಕ್ಷಗಳ ಸಂಖ್ಯೆ 35ಕ್ಕೆ ಏರಿಕೆಯಾಗಿದೆ.
ಆಡಳಿತರೂಢ ಎನ್‌ಡಿಎ 202 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿ 89, ಜೆಡಿಯು 85, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 19, ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಐದು ಮತ್ತು ರಾಜ್ಯಸಭಾ ಸಂಸದ ಉಪೇಂದ್ರ ಕುಶ್ವಾಹಾ ಅವರ ಪಕ್ಷ 4 ಸ್ಥಾನಗಳನ್ನು ಪಡೆದುಕೊಂಡಿದೆ.
2020ರ ಚುನಾವಣೆಯಲ್ಲಿ ಬಿಜೆಪಿಯ ಶೇ. 19.46ರಷ್ಟು ಮತಗಳನ್ನು ಪಡೆದರೆ, ಈ ಚುನಾವಣೆಯಲ್ಲಿ ಶೇ. 20.07ರಷ್ಟು ಪಡೆದಿದೆ. ಜೆಡಿಯು ಸಹ 2020ರಲ್ಲಿ ಶೇ. 15.39 ರಿಂದ ಈ ಬಾರಿ ಶೇ. 19.26ಕ್ಕೆ ಮತಗಳಿಕೆಯನ್ನು ಏರಿಸಿಕೊಂಡಿದೆ (ಏಜೆನ್ಸೀಸ್).