ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ (Bihar Election) ಮೊದಲ ಹಂತದ ಮತದಾನಕ್ಕೆ ಇಂದು ಚಾಲನೆ ಸಿಕ್ಕಿದ್ದು, 121 ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಹಬ್ಬವನ್ನು ಜನ ಅತ್ಯಂತ ಉತ್ಸಾಹದಿಂದ ಆಚರಿಸುತ್ತಿದ್ದಾರೆ. ಗುರುವಾರ (ನ 6) ಅರಾರಿಯಾದಲ್ಲಿ ಆಯೋಜಿಸಿರುವ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಮತ್ತೊಮ್ಮೆ ಎನ್‌ಡಿಎ ಸರ್ಕಾರ ಎಂಬ ಘೋಷಣೆ ರಾಜ್ಯಾದ್ಯಂತ ಪ್ರತಿಧ್ವನಿಸುತ್ತಿದೆ ಎಂದು ಹೇಳಿದರು.
ಬಿಹಾರದ ಈ ಭಾವನೆಯ ಹಿಂದೆ ತಾಯಂದಿರು ಮತ್ತು ಸಹೋದರಿಯರ ಭರವಸೆಗಳು ಮತ್ತು ಯುವಕರ ಕನಸುಗಳಿವೆ. ಯುವಜನರೇ ನಿಮ್ಮ ಕನಸು ಮೋದಿ ಸಂಕಲ್ಪ ಎಂದರು.
ತಪ್ಪದೇ ಮತದಾನ ಮಾಡಿ
ಬಿಹಾರದ ಚುನಾವಣೆಯ ಮತದಾನದ ಕುರಿತಾದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ, ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಜನರು ಉತ್ಸಾಹದಿಂದ ಮತ ಚಲಾಯಿಸಲು ಸರತಿ ಸಾಲುಗಳಲ್ಲಿ ನಿಂತಿದ್ದನ್ನು ನೋಡುತಿದ್ದೇನೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಬರುತ್ತಿದ್ದಾರೆ. ಬಿಹಾರದ ಯುವಕರಲ್ಲಿಯೂ ಇದೇ ರೀತಿಯ ಉತ್ಸಾಹವಿದೆ, ಎಲ್ಲರು ತಪ್ಪದೆ ಮತಚಲಾಯಿಸಬೇಕು ಎಂದು ಪ್ರಧಾನಿ ಮನವಿ ಮಾಡಿದರು.
ಜಂಗಲ್ ರಾಜ್ನಿಂದ ನಿಮ್ಮ ಹೆತ್ತವರ ಕನಸ್ಸು ನುಚ್ಚುನೂರಾದವು
ಈ ಹಿಂದೆ ನಿಮ್ಮ ಅಜ್ಜ-ಅಜ್ಜಿಯರ ಒಂದು ಮತವು ಬಿಹಾರವನ್ನು ಸಾಮಾಜಿಕ ನ್ಯಾಯದ ಭೂಮಿಯನ್ನಾಗಿಸಿತ್ತು, ಆದರೆ ಅದರ ಬಳಿಕ 90 ರ ದಶಕದಲ್ಲಿ ಆರ್‌ಜೆಡಿಯ ಜಂಗಲ್ ರಾಜ್ ಆಡಳಿತ ಬಿಹಾರದ ಮೇಲೆ ದಾಳಿ ಮಾಡಿತು. ಆಗ ಪಿಸ್ತೂಲ್, ಕ್ರೌರ್ಯ, ಭ್ರಷ್ಟಾಚಾರ ಮತ್ತು ದುರಾಡಳಿತದ್ದೆ ಸದ್ದು, ಇದರಿಂದಾಗಿ ರಾಜ್ಯ ದುರದೃಷ್ಟವಾಯಿತು. ನಿಮ್ಮ ಹೆತ್ತವರ ಕನಸುಗಳು ನುಚ್ಚುನೂರಾದವು ಎಂದು ಹೇಳಿದರು.
ಎನ್ಡಿಎದಿಂದ ಅಭಿವೃದ್ದಿಗೆ ವೇಗ..
ಆಡಳಿತಾರೂಢ ಎನ್‌ಡಿಎ ಸರ್ಕಾರದಿಂದ ಬಿಹಾರ ಅಭಿವೃದ್ಧಿ ವಿಷಯದಲ್ಲಿ ವೇಗ ಪಡೆದುಕೊಂಡಿದ್ದು, 2014 ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಪಾಟ್ನಾದಲ್ಲಿ ಒಂದು ಐಐಟಿ ತೆರೆಯಲಾಗಿದೆ, ಒಂದು ಐಐಎಂ ತೆರೆಯಲಾಗಿದೆ, ಒಂದು ಏಮ್ಸ್ ತೆರೆಯಲಾಗಿದೆ, ಮತ್ತು ದರ್ಭಂಗಾ ಏಮ್ಸ್‌ನ ಕೆಲಸವು ಪ್ರಗತಿಯಲ್ಲಿದೆ. ಭಾಗಲ್ಪುರದಲ್ಲಿ ಒಂದು ಐಐಐಟಿ ಕೂಡ ಇದೆ, ನಾಲ್ಕು ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸಹ ಸ್ಥಾಪಿಸಲಾಗಿದೆ.
ಎನ್‌ಡಿಎ ಸರ್ಕಾರದ ಅಡಿಯಲ್ಲಿ ರಾಜ್ಯದಲ್ಲಿ ನಾಲ್ಕು ಪ್ರಮುಖ ಸೇತುವೆಗಳನ್ನು ನಿರ್ಮಿಸಲಾಗಿದೆ, ಮಹಾತ್ಮ ಗಾಂಧಿ ಸೇತುವನ್ನು ಸಂಪೂರ್ಣವಾಗಿ ನವೀಕರಿಸಿ ಉಕ್ಕಿನ ಸೇತುವೆಯಾಗಿ ಪರಿವರ್ತಿಸಲಾಗಿದೆ, ಏಳು ಎಕ್ಸ್‌ಪ್ರೆಸ್‌ವೇಗಳನ್ನು ಮಂಜೂರು ಮಾಡಿದೆ, ಅವುಗಳಲ್ಲಿ ಒಂದು ಈಗಾಗಲೇ ಪೂರ್ಣಗೊಂಡಿದೆ" ಎಂದು ತಮ್ಮ ಸರ್ಕಾರದ ಅಭಿವೃದ್ದಿಯ ಪಟ್ಟಿಯನ್ನು ಜನರ ಮುಂದಿಟ್ಟರು.