Tej Pratap | ಪ್ರಚಾರ ಸಭೆಯಲ್ಲಿ ತೇಜ್ ಪ್ರತಾಪ್ ಯಾದವ್
ಪಟನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭರ್ಜರಿ ಗೆಲುವಿನ ಬಳಿಕ, ತಮ್ಮ ಮೊದಲ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿ ಉಚ್ಛಾಟಿತ ನಾಯಕ ತೇಜ್ ಪ್ರತಾಪ್ ಯಾದವ್, ತಮ್ಮ ಮಾತೃ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಫಲಿತಾಂಶದ ಬಳಿಕ ಮಾತನಾಡಿರುವ ತೇಜ್, ಪಕ್ಷದೊಳಗಿನ ಆಂತರಿಕ "ಜೈಚಂದ್‌ಗಳು" ಆರ್‌ಜೆಡಿಯನ್ನು ಪುಡಿಮಾಡಿ ತೇಜಸ್ವಿ ಯಾದವ್ ಸೋಲಿಗೆ ಕಾರಣರಾಗಿದ್ದಾರೆ, ತಮ್ಮ ಕುರ್ಚಿ ಮತ್ತು ರಾಜಕೀಯ ಆಕಾಂಕ್ಷೆಗಳಿಗಾಗಿ ತಮ್ಮ ಮನೆಗೆ ಬೆಂಕಿ ಹಚ್ಚಿಕೊಂಡವರನ್ನು ಇತಿಹಾಸ ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ.
ನಾನು ಭವಿಷ್ಯ ನುಡಿದಂತೆ ಕಾಂಗ್ರೆಸ್ ನಿರ್ನಾಮವಾಗಿದೆ, ನನ್ನ ಸೋಲಿನಲ್ಲೂ ಕೂಡ ಗೆದ್ದಿದ್ದೇನೆ, ನನಗೆ ಇನ್ನೂ ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವಿದೆ. ಶಾಸಕ ಸ್ಥಾನ ಇರಲಿ, ಇಲ್ಲದಿರಲಿ ಜನರ ಕೆಲಸ ಮಾಡುವುದು ನನ್ನ ಬದ್ಧತೆ. ಯಾರೇ ಏನೇ ಕಷ್ಟ ಹೇಳಿಕೊಂಡು ನನ್ನ ಮನೆಗೆ ಬರಲಿ, ಅವರಿಗಾಗಿ ಬಾಗಿಲುಗಳು ಯಾವಾಗಲೂ ತೆರೆದಿರುತ್ತವೆ, ಚುನಾವಣೆಯಲ್ಲಿನ ಗೆಲುವು ಅಥವಾ ಸೋಲಿಗಿಂತ ನಮ್ಮ ಉದ್ದೇಶ ಮತ್ತು ಪ್ರಯತ್ನ ಮುಖ್ಯ ಎಂದು ಹೇಳಿದರು.
ಎನ್ಡಿಎಗೆ ಅಭಿನಂದನೆ ಸಲ್ಲಿಸಿದ ತೇಜ್...
ಎನ್‌ಡಿಎ ಭರ್ಜರಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ ತೇಜ್ ಪ್ರತಾಪ್, ಬಿಹಾರ ಜನ ಉತ್ತಮ ಆಡಳಿತದ ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ, ಈ ದಿಗ್ವಿಜಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ವ್ಯಕ್ತಿತ್ವ ಮತ್ತು ಮಾಂತ್ರಿಕ ನಾಯಕತ್ವ ಕಾರಣ, ಎನ್‌ಡಿಎಯದಲ್ಲಿನ ಒಗ್ಗಟ್ಟು ಪದಗಳಲ್ಲಿ ವರ್ಣಿಸಲಾಗದು. ಐದು ಪಕ್ಷಗಳು ನಾಯಕರು ಪಂಚ ಪಾಂಡವರಂತೆ ಒಟ್ಟಾಗಿ ಹೋರಾಡಿದರು, ಈ ಹೊಂದಾಣಿಕೆಯನ್ನು ಚುನಾವಣಾ ಶಕ್ತಿಯನ್ನಾಗಿ ಪರಿವರ್ತಿಸಿದ್ದಾರೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದರು.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಎನ್‌ಡಿಎ 202 ಸ್ಥಾನ ಗಳಿಸಿದೆ. ಇತ್ತ ಮಹಾಘಟಬಂಧನ್ 35 ರಲ್ಲಿ ಗೆಲುವು ಸಾಧಿಸಿದೆ, 6 ಸ್ಥಾನಗಳು ಪಕ್ಷೇತರರ ಪಾಲಾಗಿವೆ(ಏಜೆನ್ಸೀಸ್).