ಕೋಲಾರ: ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಡಿ.14ರಂದು ೪ನೇ ರಾಷ್ಟ್ರೀಯಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್ ಹೇಳಿದರು.
ನಗರ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಭಯ ಕಕ್ಷಿದಾರರು ತಮ್ಮ ವಕೀಲರೊಂದಿಗೆ ಬಂದು ಪ್ರಕರಣ ಇತ್ಯರ್ಥಪಡಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಅದಾಲತ್‌ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಸಂಧಾನದಲ್ಲಿ ಯಾವುದೇ ಪ್ರಕರಣ ರಾಜಿಯಾದ ಮೇಲೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಈಗಾಗಲೇ ನಡೆದಿರುವ ಅದಾಲತ್‌ಗಳಿಂದ ಕಕ್ಷಿದಾರರು ಅರಿವು ಪಡೆದುಕೊಂಡಿದ್ದಾರೆ. ಡಿ.14ರಂದು ಹಮ್ಮಿಕೊಂಡಿರುವ ಅದಾಲತ್‌ನಲ್ಲಿ ೩೦ ಸಾವಿರಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ನ್ಯಾಯಗಳಲ್ಲಿ 48,913 ಪ್ರಕರಣಗಳು ಬಾಕಿ ಇದ್ದು, 9,391 ರಾಜಿಗೆ ಸಿದ್ಧವಿದೆ. ಎದುರುದಾರ ಮತ್ತು ದೂರುದಾರ ಇಬ್ಬರಿಗೂ ಒಪ್ಪಿಗೆ ಮೇರೆಗೆ ಪ್ರಕರಣವು ತೀರ್ಮಾನವಾಗುವುದರಿಂದ ಬಾಂಧವ್ಯ ಉಳಿದು ವಿವಾದವು ತೀರ್ಮಾನವಾಗುತ್ತದೆ ಎಂದು ಹೇಳಿದರು.
ಕಳೆದ ಅ.೧೪ರಂದು ಜನತಾ ನ್ಯಾಯಾಲಯದಲ್ಲಿ ̧8,377 ಚಾಲ್ತಿ ಪ್ರಕರಣಗಳು, ವ್ಯಾಜ್ಯಪೂರ್ವ ಬ್ಯಾಂಕ್ 26,093 ಪ್ರಕರಣಗಳು ಸೇರಿ ಒಟ್ಟು 34,470 ಪ್ರಕರಣಗಳು ರಾಜಿ ಮೂಲಕ ಮುಕ್ತಾಯಗೊಂಡಿದ್ದು, 125.75 ಕೋಟಿ ರೂ. ಪರಿಹಾರದ ಹಣ ಪಾವತಿಯಾಗಿದೆ ಎಂದು ವಿವರಿಸಿದರು.
ಜನತಾ ನ್ಯಾಯಾಲಯಲ್ಲಿ ಸಿವಿಲ್, ಕ್ರಿಮಿನಲ್, ಚೆಕ್‌ಬೌನ್ಸ್, ಮೋಟಾರ್ ವಾಹನ ಅಪಘಾತ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಉದ್ಯೋಗ ಪುನರ್ ಸ್ಥಾಪಿಸಲ್ಪಡುವ, ವಿದ್ಯುತ್-ನೀರಿನ ಶುಲ್ಕ, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನ ಸಂಬಂಧ ಕ್ಲೈಮುಗಳು, ವೈವಾಹಿಕ ಕುಟುಂಬ, ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿನ ಪ್ರಕರಣಗಳು, ಸಾಲ ವಸೂಲಾತಿ, ಖಾಯಂ ಜನತಾ ನ್ಯಾಯಾಲಯದಲ್ಲಿನ ಪ್ರರಕಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದರು.
------------
* ಮುಂಚಿತ ನೋಂದಣಿಗೂ ಅವಕಾಶ
ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಎಸ್. ಹೊಸಮನಿ ಮಾತನಾಡಿ, ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಲು ಇಚ್ಚಿಸುವ ಪಕ್ಷಗಾರರು ಮುಂಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ದೂರವಾಣಿ ಸಂಖ್ಯೆ 08152-228811 ಹಾಗೂ ಇ-ಮೇಲ್ disa.kolar@gmail.com ಅಥವಾ ಜಿಲ್ಲಾ ಹಾಗೂ ಆಯಾ ತಾಲೂಕಿನ ಕಾನೂನು ಸೇವೆಗಳ ಪ್ರಾಽಕಾರದ ಕಚೇರಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.