ಕಲಬುರ್ಗಿ: "ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಇಡಿ ಸಲ್ಲಿಸಿರುವ ಆರೋಪಪಟ್ಟಿಯ ಯಾವುದೇ ವಿಚಾರಗಳಿಗೆ ಸರಿಯಾದ ಆಧಾರವಿಲ್ಲ. ಇದು ಅನ್ಯಾಯ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕಲಬುರ್ಗಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಡಿಸಿಎಂ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ಆರೋಪಪಟ್ಟಿ ಸಲ್ಲಿಸಿರುವ ಬಗ್ಗೆ ಕೇಳಿದಾಗ, "ಈ ಪ್ರಕರಣದಲ್ಲಿ ಯಾವುದೇ ರೀತಿಯಲ್ಲಿಯೂ ಗಾಂಧಿ ಕುಟುಂಬಕ್ಕೆ ಲಾಭವಾಗಿಲ್ಲ. ಇದು ಕಾಂಗ್ರೆಸ್ ಪಕ್ಷದ ಆಸ್ತಿ ಮತ್ತು ಅವರು ಪಕ್ಷದ ಮುಖ್ಯಸ್ಥರು, ಆದ್ದರಿಂದ ಅವರ ಹೆಸರು ಉಲ್ಲೇಖವಾಗಿದೆ. ಇದರಲ್ಲಿ ತಪ್ಪೇನಿದೆ? ಇದನ್ನು ಕೇವಲ ರಾಜಕೀಯ ದ್ವೇಷಕ್ಕಾಗಿ ಮಾಡಲಾಗುತ್ತಿದೆ" ಎಂದರು.
ಉದ್ಯೋಗ ಪಡೆಯುವುದಷ್ಟೇ ಅಲ್ಲ, ಉದ್ಯೋಗ ಸೃಷ್ಟಿಸುವುದು ನಿಮ್ಮ ಜೀವನದ ಗುರಿಯಾಗಲಿ ಎಂದು ಡಿ.ಕೆ. ಶಿವಕುಮಾರ್ ಕಿವಿಮಾತು ಹೇಳಿದರು.
ಇದಕ್ಕೂ ಮುಂಚೆ ಕಲಬುರ್ಗಿಯ ಕೆಸಿಟಿ ಕಾಲೇಜು ಕ್ಯಾಂಪಸ್ ನಲ್ಲಿ ಬುಧವಾರ ನಡೆದ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಿಮ್ಮ ಜೀವನ ನಡೆಯಲು ನಿಮಗೆ ಉದ್ಯೋಗ ಬೇಕು ನಿಜ. ಆದರೆ, ನೀವು ಉದ್ಯೋಗ ಮಾಡುವುದಕ್ಕಿಂತ ನೀವೇ ಹತ್ತಾರು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯುವತ್ತ ಗಮನಹರಿಸಿ. ಆಗ ಮಾತ್ರ ನೀವು ಯಶಸ್ವಿಯಾಗಲು ಸಾಧ್ಯ. ಉದ್ಯೋಗ ಸಿಗಲಿಲ್ಲ ಎಂದು ನೀವು ಎಂದಿಗೂ ಎದೆಗುಂದಬೇಡಿ ಎಂದರು.
ಜೀವನದಲ್ಲಿ ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ. ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳಿ. ಕೌಶಲ್ಯ ಆಧಾರಿತ ಉದ್ಯೋಗ ಮಾಡಿದರೆ ಉತ್ತಮ ಜೀವನ ಸಾಗಿಸಬಹುದು. ನೀವು ಯಾವುದೇ ಕೆಲಸ ಮಾಡಿದರು ಆತ್ಮಗೌರವ ಇರಬೇಕು. ಇಲ್ಲಿ ಅನೇಕರು ಉದ್ಯೋಗಕ್ಕಾಗಿ ಬಂದಿದ್ದೀರಿ. ನೀವು ನಿಮ್ಮ ಜೀವನದಲ್ಲಿ ಸಾವಿರಾರು ಮೆಟ್ಟಿಲು ಹತ್ತುವ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಜೀವನದಲ್ಲಿ ಅನುಭವ ಸಿಕ್ಕಷ್ಟು ನಿಮ್ಮ ಬದುಕು, ಭವಿಷ್ಯ ಗಟ್ಟಿಯಾಗುತ್ತದೆ. ನಿಮ್ಮ ಬದುಕಿಗೆ ಉತ್ತಮ ಅನುಭವ ಪಡೆದುಕೊಳ್ಳಿ ಎಂದು ತಿಳಿಸಿದರು.