ಜಗತ್ತನ್ನು ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಭಯೋತ್ಪಾದನೆಯೂ ಒಂದು. ಪ್ರಸಕ್ತ ಕರೊನಾ ಸೋಂಕಿನ ವಿರುದ್ಧ ಹೋರಾಟ ಅಗತ್ಯವೇ. ಆದರೆ, ಇದರ ಮಧ್ಯೆ, ಭಯೋತ್ಪಾದನಾ ವಿರೋಧಿ ಹೋರಾಟ ದುರ್ಬಲವಾಗಬಾರದು ಅಥವಾ ಪ್ರಾಮುಖ್ಯ ಕಳೆದುಕೊಳ್ಳಬಾರದು. ಇಡೀ ಅಂತಾರಾಷ್ಟ್ರೀಯ ವಲಯ ಕರೊನಾ ವಿರುದ್ಧ ಹೋರಾಟದಲ್ಲಿ ಮುಳುಗಿದ್ದರೆ ಪಾಕಿಸ್ತಾನ ಮಾತ್ರ ಈ ಸ್ಥಿತಿಯಲ್ಲೂ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ. ಬೇಸಿಗೆ ಸಮಯ ಆಗಿರುವುದರಿಂದ ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಹಿಮ ಕರಗುತ್ತಿದ್ದು, ಈ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಭಯೋತ್ಪಾದಕರು ಭಾರತದ ಗಡಿಯೊಳಗೆ ನುಸುಳಿ ಬರಲು ಯತ್ನಿಸುತ್ತಲೇ ಇದ್ದಾರೆ. ಇಂಥ ಹಲವು ಯತ್ನಗಳನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ಅಪ್ಪ-ಮಗಳ ದಿನಕ್ಕೊಂದು ವೇಷ!
ಭಾರತಕ್ಕೆ ಬೆಂಬಿಡದ ಸಮಸ್ಯೆ: ಭಾರತ ಹಲವಾರು ಸಂದರ್ಭಗಳಲ್ಲಿ ಭಯೋತ್ಪಾದಕರ ಕರಾಳ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಕದ್ದುಮುಚ್ಚಿ ದಾಳಿ ನಡೆಸುತ್ತಿದ್ದ ಭಯೋತ್ಪಾದಕರು 2008 ನವೆಂಬರ್ನಲ್ಲಿ ಮುಂಬೈನ ಹಲವು ತಾಣಗಳ ಮೇಲೆ ಏಕಾಏಕಿ ದಾಳಿ ನಡೆಸಿದ ಆಘಾತವನ್ನು ದೇಶ ಇನ್ನೂ ಮರೆತಿಲ್ಲ. ಭಾರತವು ಭಯೋತ್ಪಾದನೆಯ ನಿಗ್ರಹಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ, ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ನು ಬಲಪಡಿಸಿದೆ, ಭದ್ರತಾ ಪಡೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ. ಪ್ರತಿವರ್ಷದ ಬಜೆಟ್ನಲ್ಲಿ ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳಿಗೆ ಹೆಚ್ಚಿನ ಹಣವನ್ನು ವಿನಿಯೋಗಿಸಲಾಗುತ್ತಿದೆ.
ಇದನ್ನೂ ಓದಿ: VIDEO: ಸರ್ಕಾರವನ್ನು ಪ್ರಶ್ನಿಸಿದ್ದಕ್ಕೆ ಆಗ ಅಮಾನತು ಶಿಕ್ಷೆ; ಈಗ ಕಟ್ಟಿ, ಥಳಿಸಿ, ಎಳೆದಾಡಿದ ಪೊಲೀಸರು- ವೀಡಿಯೋ ವೈರಲ್
ತೀವ್ರಗೊಳ್ಳಲಿ ಸಮರ: ಅಂತಾರಾಷ್ಟ್ರೀಯ ಸಮುದಾಯ ಭಯೋತ್ಪಾದನೆಯ ಅಪಾಯವನ್ನು ಕೊಂಚ ತಡವಾಗಿಯಾದರೂ ಅರ್ಥ ಮಾಡಿಕೊಂಡಿದೆ. ಆದರೂ, ಉಗ್ರವಾದವನ್ನು ಬೆಂಬಲಿಸುತ್ತಿರುವ ರಾಷ್ಟ್ರಗಳಿಗೆ ಹಣಕಾಸಿನ, ಶಸ್ತ್ರಾಸ್ತ್ರಗಳ ಬೆಂಬಲ ಸಿಗುವುದು ಇನ್ನೂ ನಿಂತಿಲ್ಲ. ಭಯೋತ್ಪಾದನೆ ಇಡೀ ವಿಶ್ವಕ್ಕೆ ಕಂಟಕ ಎಂಬುದನ್ನು ಅರಿಯಬೇಕಿದೆ. ಹಾಗಾಗಿ, ಎಲ್ಲ ಬಗೆಯ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಜಾಗತಿಕ ಸಮುದಾಯ ಸಂಘಟಿತವಾಗಿ ಮತ್ತಷ್ಟು ತೀವ್ರಪ್ರಮಾಣದಲ್ಲಿ ಸಮರ ನಡೆಸಬೇಕಿದೆ. ಆ ಮೂಲಕ ಹಿಂಸೆಯನ್ನು, ರಕ್ತಪಾತವನ್ನು ಕೊನೆಗೊಳಿಸುವ ಸಂಕಲ್ಪ ಸಾಕಾರಗೊಳ್ಳಬೇಕಿದೆ.