ನ್ಯೂಸ್

Voter Rights Yatra: ಕಾಂಗ್ರೆಸ್​​ನ ಮತದಾರ ಅಧಿಕಾರ ಯಾತ್ರೆಯಲ್ಲಿ ನರೇಂದ್ರ ಮೋದಿ ಜಿಂದಾಬಾದ್​ ಘೋಷಣೆ !

Voter Rights Yatra: ಬಿಹಾರದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಮತದಾರ ಅಧಿಕಾರ ಯಾತ್ರೆಯಲ್ಲಿ, ನರೇಂದ್ರ ಮೋದಿ ಜಿಂದಾಬಾದ್ ಎಂಬ ಘೋಷಣೆ ಕೂಗಿ, ರಾಹುಲ್ ಗಾಂಧಿಗೆ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ ಘಟನೆ ನಡೆದಿದೆ.

ಶನಿವಾರ (ಆಗಸ್ಟ್​​ 30) ಯಾತ್ರೆ ಸರನ್​ ಜಿಲ್ಲೆ ಪ್ರವೇಶಿಸಿದ ಸಂದರ್ಭ ರಾಹುಲ್​ ಸೇರಿದಂತೆ ಇಂಡಿಯಾ ಕೂಟದ ಇತರ ಕೆಲವು ನಾಯಕರು ತೆರೆದ ಜೀಪಿನಲ್ಲಿ ರೋಡ್​​ ಶೋ ನಡೆಸುತ್ತಿದ್ದರು, ರಸ್ತೆಯ ಇಕ್ಕೆಲುಗಳಲ್ಲಿ ನಿಂತಿದ್ದ ಜನ ಯಾತ್ರೆಗೆ ಶುಭಾಶಯ ಕೋರುತ್ತಿದ್ದರು, ಇದೇ ವೇಳೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ನರೇಂದ್ರ ಮೋದಿ ಜಿಂದಾಬಾದ್ ಘೋಷಣೆ ಕೂಗುತ್ತಾ, ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರು ಎಂದು ವರದಿಯಾಗಿದೆ.

ರಾಹುಲ್ ಗಾಂಧಿ ಯಾತ್ರೆಯಲ್ಲಿ ಎರಡನೇ ಬಾರಿ ಬೇರೆ ಬೇರೆ ಕಾರಣಕ್ಕಾಗಿ ಸುದ್ದಿಯಲ್ಲಿದ್ದು, ಇದಕ್ಕೂ ಮುನ್ನ ದರ್ಭಾಂಗದಲ್ಲಿ ನಡೆದ ಸಾರ್ವಜನಿಕ ಕಾಯರ್ಕ್ರಮದಲ್ಲಿ ಪ್ರಧಾನಿ ಮೋದಿ ತಾಯಿಯ ಕುರಿತು ಕಾರ್ಯಕರ್ತನೊಬ್ಬ ಅವಹೇಳನಕಾರಿಯಾಗಿ ಮಾತನಾಡಿದ್ದ.

ಘಟನೆಗೆ ಕಾರಣವೇನು..?

ಇತ್ತೀಚೆಗೆ ದರ್ಭಾಂಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ತಾಯಿಯನ್ನು ಮೊಹಮ್ಮದ್​ ರಿಜ್ವಿ ಎಂಬಾತ ಹಿಂದಿಯಲ್ಲಿ ನಿಂದಿಸಿದ್ದ, ಸ್ಥಳೀಯ ಬಿಜೆಪಿ ಜಿಲ್ಲಾಧ್ಯಕ್ಷ ಆದಿತ್ಯ ನಾರಾಯಣ್ ಚೌಧರಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿತ್ತು. ರಿಜ್ವಿ ಹೇಳಿಕೆ ಹಿನ್ನಲೆಯಲ್ಲಿ ಕೋಪಗೊಂಡಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಾಹುಲ್​ ಯಾತ್ರೆಯ ವೇಳೆ ಈ ರೀತಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ.

ಪ್ರವಾಸದ 14ನೇ ದಿನ

ಶನಿವಾರ ಯಾತ್ರೆಯ 14 ನೇ ದಿನವಾಗಿದ್ದು, ಸೋಮವಾರ (ಸೆಪ್ಟೆಂಬರ್ 1) ಪಾಟ್ನಾದಲ್ಲಿ ಬೃಹತ್ ಪಾದಯಾತ್ರೆಯೊಂದಿಗೆ ಕೊನೆಗೊಳ್ಳಲಿದೆ. ಈ ವರ್ಷದ ಅಂತ್ಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಪ್ರಯಾಣದ ಮಾರ್ಗ

ಇಲ್ಲಿಯವರೆಗೆ ಈ ಪ್ರಯಾಣವು ರೋಹ್ತಾಸ್, ಔರಂಗಾಬಾದ್, ಗಯಾಜಿ, ನಾವಡಾ, ಶೇಖ್‌ಪುರ, ನಳಂದಾ, ಲಖಿಸಾರೈ, ಮುಂಗೇರ್, ಕತಿಹಾರ್, ಪೂರ್ಣಿಯಾ, ಸುಪೌಲ್, ಮಧುಬನಿ, ದರ್ಬಂಗಾ, ಮುಜಾಫರ್‌ಪುರ, ಸೀತಾಮರ್ಹಿ, ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಗೋಪಾಲ್‌ಗಂಜ್ ಮತ್ತು ಸಿವಾನ್, ಸರನ್ ನಂತರ ಭೋಜ್‌ಪುರದ ಮೂಲಕ ಹಾದುಹೋಗುತ್ತದೆ.(ಏಜೆನ್ಸೀಸ್​)