Narendra Modi Visited Home Of Mera Manjhi At Ayodhya 10th Crore Beneficiary Of Ujjwala Scheme
ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೆ ಮುನ್ನ ಶನಿವಾರದಂದು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮೀರಾ ಮಾಂಝಿ ಎಂಬುವರ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈಕೆ ಉಜ್ವಲಾ ಯೋಜನೆಯ 10ನೇ ಕೋಟಿ ಫಲಾನುಭವಿಯಾಗಿದ್ದಾರೆ.
ಪ್ರಧಾನಿ ಮೋದಿ ಮನೆಗೆ ಬರುತ್ತಾರೆ ಎಂಬುದು ಮೀರಾ ಮಾಂಝಿ ಕುಟುಂಬದವರಿಗೆ ಗೊತ್ತಿರಲಿಲ್ಲ. ವಿಡಿಯೊ ನೋಡಿದರೆ ಅವರೆಲ್ಲರೂ ಮೋದಿ ಮನೆಗೆ ಬಂದಿರುವುದನ್ನು ನೋಡಿ ಅಚ್ಚರಿಯಿಂದ ನಿಂತಿದ್ದಾರೆ. ಪ್ರಧಾನಿ ಮನೆಯೊಳಗೆ ಬರುತ್ತಿದ್ದಂತೆ ಅವರ ಕಾಲಿಗೆ ನಮಸ್ಕಾರ ಮಾಡಿದ್ದಾರೆ. ಆಗ ಮೋದಿ ಹಾಗೆಲ್ಲ ಮಾಡಬೇಡಿ ಎಂದು ಮನೆಯೊಳಗೆ ಬಂದು ಮನೆಯ ಸದಸ್ಯರಂತೆ ಅಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಮೀರಾ ಅವರ ಪುಟ್ಟ ಮಗುವನ್ನು ಮೋದಿ ಮುದ್ದು ಮಾಡಿದ್ದಾರೆ.
ಮೀರಾ ಮಾಂಝಿ ಕುಟುಂಬದ ಸದಸ್ಯರ ಜತೆ ಪ್ರಧಾನಮಂತ್ರಿ ಎಂಬ ಹಮ್ಮು ಬಿಮ್ಮು ಇಲ್ಲದೆ ಕುಳಿತ ಮೋದಿ, ಆಕೆಯ ಜತೆ ಮಾತನಾಡಿದ್ದಾರೆ. ನಾನು ಇಲ್ಲಿಗೆ ಯಾಕೆ ಬಂದೆ ಗೊತ್ತಾ ಮಾತು ಆರಂಭಿಸಿದ ಮೋದಿ, ನೀವು ಉಜ್ವಲಾ ಯೋಜನೆಯ 10ನೇ ಕೋಟಿ ಫಲಾನುಭವಿ. 10ನೇ ಕೋಟಿ ಫಲಾನುಭವಿ ಅಯೋಧ್ಯೆಯಲ್ಲೇ ಇದ್ದಾರೆ ಎಂದಾಗ ಅರೇ, ಇಲ್ಲೇ ಇರುವರಲ್ಲವೇ ಭೇಟಿ ಮಾಡೋಣ ಎಂದು ಬಂದೆ ಎಂದು ಹೇಳಿದ್ದಾರೆ. ಗ್ಯಾಸ್ ನಲ್ಲಿ ಏನೆಲ್ಲಾ ಅಡುಗೆ ಮಾಡ್ತೀರಿ ಎಂದು ಮೋದಿ ಕೇಳಿದಾಗ ಮೀರಾ, ಅನ್ನ, ಬೇಳೆ, ತರಕಾರಿ ಬೇಯಿಸಿದ್ದೀನಿ. ಟೀ ಕೂಡಾ ಮಾಡಿದ್ದೀನಿ ಎಂದು ಹೇಳಿ ಮೋದಿಗೆ ಟೀ ನೀಡಿದ್ದಾರೆ.
ಟೀ ಸ್ವೀಕರಿಸಿದ ಮೋದಿ ಹಾಲು ಹಾಕಿದ ಚಹಾ. ನಿಮಗೆ ಇಲ್ಲಿ ಹಾಲು ಸಿಗುತ್ತಾ ಎಂದು ಕೇಳಿದ್ದಾರೆ. ಆಗ ಮೀರಾ, ಹೌದು, ಪ್ಯಾಕೆಟ್ ಹಾಲು ಸಿಗುತ್ತದೆ ಎಂದು ಹೇಳಿದ್ದಾರೆ. ಈ ಚಹಾ ತುಂಬಾ ಸಿಹಿಯಾಗಿದೆ, ನೀವು ಇಷ್ಟೊಂದು ಸಿಹಿ ಕುಡಿಯುತ್ತೀರಾ ಎಂದು ಮೋದಿ ಹೇಳಿದಾಗ, ಚಹಾ ಸಿಹಿ ಆಗಿ ಬಿಡುತ್ತದೆ ಎಂದು ಮೀರಾ ಸಂಕೋಚದಿಂದಲೇ ಹೇಳಿದ್ದಾರೆ.
ನಿಮಗೆ ಸರ್ಕಾರದಿಂದ ಏನೇನು ಪ್ರಯೋಜನಗಳು ಸಿಕ್ಕಿವೆ ಎಂದು ಕೇಳಿದಾಗ ಮೀರಾ ಈ ಮನೆ ಸಿಕ್ಕಿದೆ ಅಂತಾರೆ. ಹಾಗಾದರೆ ಮೊದಲು ಎಲ್ಲಿ ಇರುತ್ತಿದ್ರಿ? ಎಂಬ ಪ್ರಶ್ನೆಗೆ ಮೊದಲು ಜೋಪಡಿಯಲ್ಲಿ ಇರುತ್ತಿದ್ದೆವು, ನಿಮ್ಮ ಕೃಪೆಯಿಂದ ಮನೆ ಆಗಿದೆ ಎಂದಿದ್ದಾರೆ.
ಹಾಗಾದರೆ ಗ್ಯಾಸ್, ವಿದ್ಯುತ್, ಪಡಿತರ,ಮನೆ, ನೀರು ಎಲ್ಲವೂ ಸಿಗುತ್ತಿದೆ ನಿಮಗೆ ಅಂತಾರೆ ಮೋದಿ. ಆಗ ಆ ಮನೆಯ ಹಿರಿಯ ಮಹಿಳೆ ನೀವು ನಮ್ಮ ಪಾಲಿನ ದೇವರು ಎಂದಾಗ, ದೇವರು ಭಗವನ್ ರಾಮಚಂದ್ರಜೀ ಎಂದು ಮೋದಿ ಹೇಳುತ್ತಿರುವುದು ವಿಡಿಯೊದಲ್ಲಿದೆ. ಮನೆ ಕಟ್ಟಲು ಹಣ ಕಂತಿನಲ್ಲಿ ಸಿಕ್ಕಿತೇ ಎಂದು ಕೇಳಿದಾಗ ಹಾಂ, ಕಂತಿನಲ್ಲಿ ಸಿಕ್ಕಿತು. ಅದಕ್ಕಾಗಿ ಯಾರಿಗೂ ಲಂಚ ಕೊಟ್ಟಿಲ್ಲ ಎಂದು ಮೀರಾ ಹೇಳಿದ್ದಾರೆ. ಚಹಾ ಚೆನ್ನಾಗಿ ಮಾಡಿದ್ದೀರಿ. ನಾನು ಚಾಯ್ ವಾಲಾ ಅಲ್ವಾ, ನನಗೆ ಗೊತ್ತಾಗುತ್ತದೆ ಎಂದು ಮೋದಿ ನಗುತ್ತಾ ಚಹಾ ಹೀರಿದ್ದಾರೆ.