ನ್ಯೂಸ್

ಜಾಗತಿಕ ಡಿಜಿಟಲ್ ನಿಯಮ, ನೈತಿಕ; AI ಪರ ಪ್ರಧಾನಿ ಮೋದಿ ಬ್ಯಾಟಿಂಗ್

ಮೋಹನ್​ ಶೆಟ್ಟಿ

ನವದೆಹಲಿ: ಡಿಜಿಟಲ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ(AI)ಯ ನೈತಿಕ ಬಳಕೆಗೆ ಜಾಗತಿಕ ಚೌಕಟ್ಟೊಂದನ್ನು ರೂಪಿಸುವುದು ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರತಿಪಾದಿಸಿದ್ದಾರೆ. ಮಂಗಳವಾರ ಇಲ್ಲಿಯ ಭಾರತಮಂಟಪಂನಲ್ಲಿ ಇಂಟರ್​ನ್ಯಾಷನಲ್ ಟೆಲಿಕಮ್ಯುನಿಕೇಷನ್ ಯೂನಿಯನ್- ವರ್ಲ್ಡ್ ಟೆಲಿಕಮ್ಯುನಿಕೇಷನ್ ಸ್ಟಾ್ಯಂಡರ್ಡೆಸೇಶನ್ ಅಸೆಂಬ್ಲಿಯ (ಐಟಿಯು-ಡಬ್ಲ್ಯುಟಿಎಸ್​ಎ) 8ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಪ್ರಜೆಗಳ ಸುರಕ್ಷತೆಗಾಗಿ ‘ಮಾಡಬಹುದಾದ್ದು’ (ಡೂಸ್) ಮತ್ತು ‘ಮಾಡಬಾರದ್ದು’ (ಡೋಂಟ್ಸ್) ಮಾರ್ಗಸೂಚಿಗಳ ಪರವಾಗಿ ಬ್ಯಾಟ್ ಬೀಸಿದರು. ಇದೇ ಸಂದರ್ಭದಲ್ಲಿ ಇಂಡಿಯಾ ಮೊಬೈಲ್ ಕಾಂಗ್ರೆಸ್​ನ (ಐಎಮ್) ವಾರ್ಷಿಕ ಸಮಾವೇಶವನ್ನೂ ಪ್ರಧಾನಿ ಉದ್ಘಾಟಿಸಿದರು.

ಡಿಜಿಟಲ್ ನಿಯಮಗಳು ವೈಯಕ್ತಿಕ ಗೌಪ್ಯತೆ, ಮಾಧ್ಯಮಗಳ ತಪು್ಪಮಾಹಿತಿ, ತಂತ್ರಜ್ಞಾನ ದಿಗ್ಗಜರ ವಿಶ್ವಾಸಾರ್ಹತೆ ಮತ್ತಿತರ ಸಾಮಾಜಿಕ ವಿಚಾರಗಳು ಒಳಗೊಂಡಿರುವುದಕ್ಕೆ ಮಾತ್ರ ಮಹತ್ವವಾದುದಲ್ಲ. ಆದರೆ ಸರಕು ಮತ್ತು ಸೇವೆಗಳು ಅಂತಾರಾಷ್ಟ್ರೀಯ ಡೇಟಾ ಹರಿಯುವಿಕೆ ಮೇಲೆ ಅವಲಂಬಿಸಿರುವುದರಿಂದ ಕೂಡ ಅದು ಮಹತ್ವದ್ದಾಗುತ್ತದೆ ಎಂದು ಮೋದಿ ವಿವರಿಸಿದರು. 190ಕ್ಕೂ ಹೆಚ್ಚು ದೇಶಗಳ 3 ಸಾವಿರಕ್ಕೂ ಹೆಚ್ಚು ಉದ್ಯಮ ನಾಯಕರು ಮತ್ತು ಟೆಕ್ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಗಡಿಗಳನ್ನು ಮೀರಿದ್ದು: ಡಿಜಿಟಲ್ ಸಲಕರಣೆಗಳು ಮತ್ತು ಅಪ್ಲಿಕೇಷನ್​ಗಳು ಯಾವುದೇ ದೈಹಿಕ ಎಲ್ಲೆಗಳನ್ನು ಮೀರಿದ್ದಾಗಿವೆ ಹಾಗೂ ಯಾವುದೇ ಒಂದು ದೇಶ ಮಾತ್ರವೇ ತನ್ನ ಪ್ರಜೆಗಳನ್ನು ಸೈಬರ್ ಬೆದರಿಕೆಗಳಿಂದ ರಕ್ಷಿಸಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು. ಸಂಘರ್ಷಗಳಿಂದ ಸಂತ್ರಸ್ತವಾಗಿರುವ ಜಗತ್ತಿನಲ್ಲಿ ಸಹಮತ ಮತ್ತು ಸಂಪರ್ಕ (ಕನೆಕ್ಟಿವಿಟಿ) ಅಗತ್ಯ ಎಂದೂ ಪ್ರತಿಪಾದಿಸಿದರು.

ಭಾರತೀಯರ ಡೇಟಾ ಭಾರತದಲ್ಲಿ ಉಳಿಯಬೇಕು

ಡೇಟಾ ಸೆಂಟರ್ ನೀತಿಯನ್ನು ತ್ವರಿತವಾಗಿ ನವೀಕರಿಸಬೇಕು. ಭಾರತೀಯರ ಡೇಟಾವು ಭಾರತದ ಡೇಟಾ ಕೇಂದ್ರಗಳಲ್ಲಿ ಉಳಿಯಬೇಕು ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ ಪ್ರತಿಪಾದಿಸಿದ್ದಾರೆ. ಮಂಗಳವಾರ ಇಂಡಿಯನ್ ಮೊಬೈಲ್ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಆಕಾಶ್, ದೇಶದಲ್ಲಿ ಎಐ ಮತ್ತು ಮಶೀನ್ ಲರ್ನಿಂಗ್ ಡೇಟಾ ಸೆಂಟರ್​ಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ಕಂಪನಿಗಳಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗಬೇಕು. ಈ ನಿಟ್ಟಿನಲ್ಲಿ 2020ರ ಡೇಟಾ ಸೆಂಟರ್ ನೀತಿಯಲ್ಲಿ ಸೂಕ್ತ ಮಾರ್ಪಾಡು ತರಬೇಕು. ವಿಕಸಿತ ಭಾರತದ ಕನಸನ್ನು ನನಸಾಗಿಸಲು ಕೃತಕ ಬುದ್ಧಿಮತ್ತೆ (ಎಐ) ಮಹತ್ವದ ಪಾತ್ರ ವಹಿಸಲಿದೆ ಎಂದರು.