ನ್ಯೂಸ್

ಮೋದಿ ಜಿ ರೂಪದಲ್ಲಿ ಭಾರತವು ಸರಿಯಾದ ಸಮಯದಲ್ಲಿ ಸರಿಯಾದ ನಾಯಕನನ್ನು ಹೊಂದಿದೆ: ಚಂದ್ರಬಾಬು ನಾಯ್ಡು

ನವದೆಹಲಿ: ಲೋಕಸಭೆ ಚುನಾವಣೆ 2024ರ ಜನಾದೇಶ ಬಂದಿದ್ದು, ಈ ಬಾರಿ ಎನ್‌ಡಿಎ 293 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ ಸ್ವಂತ ಬಲದಿಂದ ಬಹುಮತ ಪಡೆಯಲು ಸಾಧ್ಯವಾಗದ ಕಾರಣ ಈಗ ಇತರ ಮಿತ್ರಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚಿಸಲು ಹಳೆಯ ಸೆಂಟ್ರಲ್​ ಹಾಲ್​ನಲ್ಲಿ ಶುಕ್ರವಾರ(ಜೂನ್​​ 7)ರಂದು ಸಭೆ ನಡೆಯುತ್ತಿದ್ದು, ಎನ್‌ಡಿಎಯಿಂದ ನೂತನವಾಗಿ ಆಯ್ಕೆಯಾದ ಎಲ್ಲ ಸಂಸದರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಸಾರ್ವತ್ರಿಕ ಚುನಾವಣೆಯ ಪ್ರಚಾರದ ಸಮಯದಲ್ಲಿ ಮೋದಿ ಅವರ ಅವಿರತ ಪ್ರಯತ್ನಗಳನ್ನು ಶ್ಲಾಘಿಸಿದರು. ಹಾಗೂ ಕಳೆದ 3 ತಿಂಗಳಿಂದ ಮೋದಿ ವಿಶ್ರಾಂತಿ ತೆಗೆದುಕೊಂಡಿಲ್ಲ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಲಿದೆ ಎಂಬ ವಿಶ್ವಾಸ ನನಗಿದೆ. ಭಾರತವನ್ನು ಶಕ್ತಿಶಾಲಿಯಾಗಿಸುವುದು ಭಾರತದ ದೊಡ್ಡ ಯಶಸ್ಸು ಎಂದು ಹೇಳಿದರು.

ಅದ್ಭುತ ಬಹುಮತವನ್ನು ಪಡೆದುಕೊಂಡಿರುವ ನಾವು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ. ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿಯವರು 3 ತಿಂಗಳು ವಿಶ್ರಮಿಸದೇ ಇರುವುದನ್ನು ನೋಡಿದ್ದೇನೆ. ಹಗಲು-ರಾತ್ರಿ ಎನ್ನದೆ ಪ್ರಚಾರ ನಡೆಸಿದರು. ಯಾವ ಉತ್ಸಾಹದಿಂದ ಚುನಾವಣಾ ಪ್ರಚಾರವನ್ನು ಆರಂಭಿಸಿದರೋ ಅದೇ ಉತ್ಸಾಹದಿಂದಲೇ ಅದನ್ನು ಮುಗಿಸಿದರು. ಆಂಧ್ರಪ್ರದೇಶದಲ್ಲಿ ನಾವು ಮೂರು ಸಾರ್ವಜನಿಕ ಸಭೆಗಳನ್ನು ಮತ್ತು ದೊಡ್ಡ ರ್ಯಾಲಿಯನ್ನು ನಡೆಸಿದ್ದೇವೆ. ಇದು ಆಂಧ್ರಪ್ರದೇಶದಲ್ಲಿ ಚುನಾವಣೆಗಳನ್ನು ಗೆಲ್ಲಲು ಬಹಳಷ್ಟು ಸಹಾಯ ಮಾಡಿತು ಎಂದು ತಿಳಿಸಿದರು.

ಕಳೆದ ನಾಲ್ಕು ದಶಕಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಮೋದಿಜಿ ಇಡೀ ವಿಶ್ವದಲ್ಲಿ ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಮನ್ನಣೆ ನೀಡುತ್ತೇನೆ. ಪ್ರಸ್ತುತ ಭಾರತವು ಮೋದಿಜಿಯ ರೂಪದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ನಾಯಕನನ್ನು ಹೊಂದಿದೆ. ಭಾರತಕ್ಕೆ ಇದೊಂದು ಉತ್ತಮ ಅವಕಾಶ, ಈಗ ಕಳೆದುಕೊಂಡರೆ ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ. ಈ ಅವಕಾಶ ಮತ್ತೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಭಾರತ ಜಾಗತಿಕ ನಾಯಕನಾಗಲಿದೆ. ಎನ್‌ಡಿಎ ಸಂಸದೀಯ ಪಕ್ಷದ ನಾಯಕರಾಗಿ ಮೋದಿ ಅವರ ಹೆಸರನ್ನು ನಾನು ಬೆಂಬಲಿಸುತ್ತೇನೆ ಎಂದರು. (ಏಜೆನ್ಸೀಸ್​)